ವಾಷಿಂಗ್ಟನ್ ಡಿಸಿ, ಏಪ್ರಿಲ್ 6: ಅಮೆರಿಕದ ರಾಜಧಾನಿ ವಾಷಿಂಗ್ಟನ್ ಡಿಸಿಯಲ್ಲಿರುವ ಶ್ವೇತಭವನದ (White House) ಸಮೀಪ ಪಾರ್ಕ್ ಬಳಿ ಭಾನುವಾರ ಮುಂಜಾನೆ ಗುಂಡಿನ ದಾಳಿ ನಡೆದಿದೆ. ಈ ಘಟನೆಯ ಸಮಯದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶ್ವೇತಭವನದೊಳಗೆ ಇದ್ದರು. ಅದೃಷ್ಟವಶಾತ್, ಈ ದಾಳಿಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶಂಕಿತ ಬಂದೂಕುಧಾರಿ ಪರಾರಿ
ಗುಂಡಿನ ಚಕಮಕಿ ನಡೆದ ತಕ್ಷಣವೇ ಶಂಕಿತ ಬಂದೂಕುಧಾರಿ ಸ್ಥಳದಿಂದ ಪರಾರಿಯಾಗಿದ್ದಾನೆ. ಅವನಿಗಾಗಿ ಮೆಟ್ರೋಪಾಲಿಟನ್ ಪೊಲೀಸ್ ಇಲಾಖೆ, ಯುಎಸ್ ಪಾರ್ಕ್ ಪೊಲೀಸ್ ಮತ್ತು ಸೀಕ್ರೆಟ್ ಸರ್ವಿಸ್ ಹುಡುಕಾಟ ನಡೆಸುತ್ತಿವೆ. ಶಂಕಿತ ವ್ಯಕ್ತಿ ಮತ್ತು ಅವನ ವಾಹನದ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ.
ಭದ್ರತೆ ಬಿಗಿಗೊಳಿಸಿದ ಅಧಿಕಾರಿಗಳು
ಈ ಘಟನೆಯ ಬಳಿಕ ಶ್ವೇತಭವನದ ಸುತ್ತಮುತ್ತಲಿನ ಭದ್ರತೆಯನ್ನು ಹೆಚ್ಚಿಸಲಾಗಿದೆ. ಶ್ವೇತಭವನದ ಕಾರ್ಯಾಚರಣೆಗಳು ಎಂದಿನಂತೆ ಮುಂದುವರಿದಿದ್ದರೂ, ಪ್ರವೇಶದ್ವಾರಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ ನಡೆಸಲಾಗುತ್ತಿದೆ. ಲಫಯೆಟ್ಟೆ ಪಾರ್ಕ್ ಕೆಲವು ವಾರಗಳಿಂದ ನವೀಕರಣ ಕಾರ್ಯಕ್ಕಾಗಿ ಮುಚ್ಚಲಾಗಿದ್ದು, ಬ್ಯಾರಿಕೇಡ್‌ಗಳಿಂದ ಆವೃತವಾಗಿದೆ.
ಟ್ರಂಪ್ ಆಸ್ಪತ್ರೆ ಸೇರ್ಪಡೆ ಸುದ್ದಿ ಸುಳ್ಳು
ಗುಂಡಿನ ದಾಳಿಯ ಬೆನ್ನಲ್ಲೇ ಸಾಮಾಜಿಕ ಮಾಧ್ಯಮಗಳಲ್ಲಿ ಅಧ್ಯಕ್ಷ ಟ್ರಂಪ್ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ಊಹಾಪೋಹಗಳು ಹರಡಿದ್ದವು. ಕೆಲವು ಎಕ್ಸ್ (ಟ್ವಿಟರ್) ಪೋಸ್ಟ್‌ಗಳಲ್ಲಿ ಅವರನ್ನು ವಾಲ್ಟರ್ ರೀಡ್ ರಾಷ್ಟ್ರೀಯ ಮಿಲಿಟರಿ ವೈದ್ಯಕೀಯ ಕೇಂದ್ರಕ್ಕೆ ಕರೆದೊಯ್ಯಲಾಗಿದೆ ಎಂದು ಸುಳ್ಳು ಹೇಳಿಕೆ ನೀಡಲಾಗಿತ್ತು. ಆದರೆ ಶ್ವೇತಭವನವು ಈ ವದಂತಿಗಳನ್ನು ತಳ್ಳಿಹಾಕಿದೆ.
ಇರಾನ್-ಅಮೆರಿಕ ಉದ್ವಿಗ್ನತೆ
ಈ ದಾಳಿಯ ಉದ್ದೇಶ ಇನ್ನೂ ಸ್ಪಷ್ಟವಾಗಿಲ್ಲ. ಕಳೆದ ಎರಡು ತಿಂಗಳುಗಳಿಂದ ಇಸ್ರೇಲ್ ಮತ್ತು ಅಮೆರಿಕ ಇರಾನ್ ಮೇಲೆ ದಾಳಿ ನಡೆಸುತ್ತಿರುವ ಹಿನ್ನೆಲೆಯಲ್ಲಿ, ಇರಾನ್ ಪ್ರತೀಕಾರ ತೀರಿಸಿಕೊಳ್ಳಬಹುದು ಎಂಬ ಆತಂಕಗಳು ನೆಲೆಗೊಂಡಿವೆ. ಈ ಸಂದರ್ಭದಲ್ಲಿ ಶ್ವೇತಭವನದ ಬಳಿ ನಡೆದ ಗುಂಡಿನ ದಾಳಿ ನಡೆದಿದೆ ಎನ್ನಲಾಗಿದೆ. ಈ ಘಟನೆಗೆ ಇರಾನ್ ಸಂಬಂಧವಿದೆಯೇ ಎಂಬುದನ್ನು ಅಧಿಕೃತವಾಗಿ ದೃಢಪಡಿಸಲಾಗಿಲ್ಲ.
ಹಿಂದಿನ ಘಟನೆಗಳ ನೆನಪು
ಜುಲೈ 13, 2024 ರಂದು ಪೆನ್ಸಿಲ್ವೇನಿಯಾದ ರ್ಯಾಲಿಯೊಂದರಲ್ಲಿ ಟ್ರಂಪ್ ಅವರ ಹತ್ತಿರ ಗುಂಡು ಹಾದುಹೋಗಿ ಅವರ ಕಿವಿ ಭಾಗಕ್ಕೆ ಪೆಟ್ಟಾಗಿತ್ತು. ಇದಲ್ಲದೆ, ರಯಾನ್ ರೋತ್ ಎಂಬ ವ್ಯಕ್ತಿ ಅವರ ಗಾಲ್ಫ್ ಕ್ಲಬ್ ಬಳಿ ದಾಳಿ ನಡೆಸಲು ಯೋಜಿಸಿದ್ದಕ್ಕಾಗಿ ಬಂಧಿತನಾಗಿದ್ದನು.





