ಆಪರೇಷನ್ ಸಿಂಧೂರ್ ಬೆನ್ನಲ್ಲೇ ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆ ತಾರಕಕ್ಕೇರಿದೆ. ಲಾಹೋರ್‌ನಲ್ಲಿ ಡ್ರೋನ್‌ವೊಂದನ್ನು ಹೊಡೆದುರುಳಿಸಿದ ಘಟನೆಯ ನಂತರ, ಅಮೆರಿಕಾದ ದೂತಾವಾಸ ಕಚೇರಿ ತನ್ನ ಸಿಬ್ಬಂದಿ ಮತ್ತು ಲಾಹೋರ್‌ನಲ್ಲಿರುವ ಎಲ್ಲಾ ಅಮೆರಿಕನ್ ನಾಗರಿಕರಿಗೆ ತುರ್ತು ಭದ್ರತೆಯ ಎಚ್ಚರಿಕೆಯನ್ನು ಜಾರಿಗೊಳಿಸಿದೆ.
ಗುರುವಾರ, ಲಾಹೋರ್‌ನ ಯುನೈಟೆಡ್ ಸ್ಟೇಟ್ಸ್ ಕಾನ್ಸುಲೇಟ್ ಜನರಲ್ ತನ್ನ ಸಿಬ್ಬಂದಿಗೆ ಮತ್ತು ನಗರದಲ್ಲಿರುವ ಅಮೆರಿಕನ್ ಪ್ರಜೆಗಳಿಗೆ ತಕ್ಷಣವೇ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಳ್ಳುವಂತೆ ಸೂಚನೆ ನೀಡಿದೆ. “ಲಾಹೋರ್‌ನಲ್ಲಿ ಡ್ರೋನ್‌ವೊಂದನ್ನು ಹೊಡೆದುರುಳಿಸಲಾಗಿದೆ ಎಂಬ ವರದಿಯಾಗಿದೆ. ವೈಮಾನಿಕ ದಾಳಿಗಳ ಸಂಭವವಿದೆ. ಎಲ್ಲಾ ಸಿಬ್ಬಂದಿ ತಕ್ಷಣವೇ ಸುರಕ್ಷಿತ ಸ್ಥಳಕ್ಕೆ ತೆರಳಬೇಕು” ಎಂದು ಕಾನ್ಸುಲೇಟ್‌ನ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಡ್ರೋನ್‌ನ ಮೂಲವನ್ನು ಇನ್ನೂ ದೃಢೀಕರಿಸಲಾಗಿಲ್ಲ. ಆದರೆ, ಭಾರತ-ಪಾಕಿಸ್ತಾನ ಗಡಿಯಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ ಈ ಘಟನೆ ಸಂಭವಿಸಿರುವುದು ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ. ಇತ್ತೀಚಿನ ದಿನಗಳಲ್ಲಿ ಲಾಹೋರ್, ರಾವಲ್ಪಿಂಡಿ, ಬಹವಾಲ್ಪುರ್, ಮತ್ತು ನಂಕಾನಾ ಸಾಹಿಬ್‌ನಂತಹ ಪಾಕಿಸ್ತಾನದ ಹಲವು ನಗರಗಳಲ್ಲಿ ಡ್ರೋನ್ ದಾಳಿ ಏರಿಕೆಯಾಗಿದೆ ಎಂದು ವರದಿಗಳು ತಿಳಿಸಿವೆ.
ಅಮೆರಿಕಾದ ಕಾನ್ಸುಲೇಟ್ ತನ್ನ ಎಚ್ಚರಿಕೆಯಲ್ಲಿ, ಡ್ರೋನ್ ಹೊಡೆದುರುಳಿಸಲಾದ ಪ್ರದೇಶಗಳಲ್ಲಿರುವ ತನ್ನ ನಾಗರಿಕರಿಗೆ ಯಾವುದೇ ವಿಳಂಬವಿಲ್ಲದೆ ಸ್ಥಳಾಂತರಗೊಳ್ಳುವಂತೆ ಒತ್ತಾಯಿಸಿದೆ. “ನಿರ್ಗಮನ ಸುರಕ್ಷಿತವಾಗಿಲ್ಲದಿದ್ದರೆ, ಜನರು ಮುಂದಿನ ಸೂಚನೆ ಬರುವವರೆಗೆ ಅದೇ ಸ್ಥಳದಲ್ಲಿ ಆಶ್ರಯ ಪಡೆಯಬೇಕು” ಎಂದು ಹೇಳಿಕೆಯಲ್ಲಿ ಸ್ಪಷ್ಟಪಡಿಸಲಾಗಿದೆ.
ಪಾಕಿಸ್ತಾನದ ವಿವಿಧ ಭಾಗಗಳಲ್ಲಿ ಡ್ರೋನ್ ದಾಳಿಯಿಂದ ಭದ್ರತಾ ಕಾಳಜಿಗಳನ್ನು ತೀವ್ರಗೊಳಿಸಿದೆ. ಆಪರೇಷನ್ ಸಿಂಧೂರ್‌ನಿಂದ ಉಂಟಾದ ರಾಜಕೀಯ ಒತ್ತಡದ ಮಧ್ಯೆ, ಈ ಘಟನೆಯು ಎರಡು ದೇಶಗಳ ನಡುವಿನ ಸಂಘರ್ಷವನ್ನು ಮತ್ತಷ್ಟು ಉಲ್ಬಣಗೊಳಿಸುವ ಸಾಧ್ಯತೆಯಿದೆ. ಭಾರತ ಮತ್ತು ಪಾಕಿಸ್ತಾನದ ಗಡಿಯಲ್ಲಿನ ಒತ್ತಡವು ಈಗ ಜಾಗತಿಕ ಗಮನವನ್ನು ಸೆಳೆದಿದೆ.