ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸರ್ಕಾರವು ವಿದೇಶಿಗರ ವಲಸೆಯನ್ನು ನಿಯಂತ್ರಿಸಲು ಹಲವು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದೆ. ಈಗಾಗಲೇ ಹಲವು ನೆಪಗಳನ್ನು ನೀಡಿ ನಿರ್ಬಂಧಗಳನ್ನು ಹೇರಿರುವ ಈ ಆಡಳಿತ, ಇದೀಗ ಆರೋಗ್ಯ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ.
ಬೊಜ್ಜು, ಹೃದ್ರೋಗ, ಕ್ಯಾನ್ಸರ್, ಮಧುಮೇಹ ಮುಂತಾದ ದೀರ್ಘಕಾಲದ ಆರೋಗ್ಯ ಸಮಸ್ಯೆಗಳಿರುವವರಿಗೆ ವೀಸಾ ನೀಡದಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಈ ನಿರ್ಧಾರವು ವಲಸಿಗರ ಮೇಲಿನ ಸರ್ಕಾರಿ ಖರ್ಚನ್ನು ಕಡಿಮೆ ಮಾಡುವ ಉದ್ದೇಶದಿಂದ ಹೊಂದಿದೆ.
ಅಮೆರಿಕದಲ್ಲಿ ಗ್ರೀನ್‌ಕಾರ್ಡ್ ಅಥವಾ ನಾಗರಿಕತ್ವ ಹೊಂದಿರುವವರಿಗೆ ಸರ್ಕಾರದ ವೆಚ್ಚದಲ್ಲಿ ಚಿಕಿತ್ಸೆ ನೀಡುವ ವ್ಯವಸ್ಥೆಯಿದೆ. ಇದು ಮೆಡಿಕೇಡ್ ಮತ್ತು ಮೆಡಿಕೇರ್ ಮುಂತಾದ ಕಾರ್ಯಕ್ರಮಗಳ ಮೂಲಕ ಕಾರ್ಯಗತಗೊಳ್ಳುತ್ತದೆ. ಆದರೆ, ವಲಸಿಗರು ಈ ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಳ್ಳುತ್ತಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ, ಸರ್ಕಾರ ಈಗ ಕಠಿಣ ನಿಲುವು ತೆಗೆದುಕೊಂಡಿದೆ.
ಅನಾರೋಗ್ಯದಿಂದ ಬಳಲುತ್ತಿರುವ ವ್ಯಕ್ತಿಗಳು ಅಮೆರಿಕಕ್ಕೆ ಬಂದು ಸರ್ಕಾರಿ ಸೌಲಭ್ಯಗಳನ್ನು ಬಳಸುವುದರಿಂದ ಆರ್ಥಿಕ ಹೊರೆ ಹೆಚ್ಚುತ್ತದೆ ಎಂಬುದು ಟ್ರಂಪ್ ಆಡಳಿತದ ವಾದವಾಗಿದೆ. ಹೀಗಾಗಿ, ವೀಸಾ ಅರ್ಜಿದಾರರ ಆರೋಗ್ಯ ಸ್ಥಿತಿಯನ್ನು ಪರಿಶೀಲಿಸಿ, ರೋಗಗಳಿರುವವರನ್ನು ತಿರಸ್ಕರಿಸುವಂತೆ ನಿರ್ದೇಶಿಸಲಾಗಿದೆ.
ಈ ಹೊಸ ಮಾರ್ಗಸೂಚಿಗಳ ಪ್ರಕಾರ, ಹೃದ್ರೋಗ, ಉಸಿರಾಟದ ತೊಂದರೆಗಳು, ಕ್ಯಾನ್ಸರ್, ಮಧುಮೇಹ, ಚಯಾಪಚಯ ಕಾಯಿಲೆಗಳು, ಮಾನಸಿಕ ಆರೋಗ್ಯ ಅಸ್ವಸ್ಥತೆಗಳಿರುವವರಿಗೆ ವೀಸಾ ಸಿಗುವುದು ಅತ್ಯಂತ ಕಷ್ಟಕರವಾಗಲಿದೆ. ಅಲ್ಲದೆ, ಬೊಜ್ಜಿರುವವರಲ್ಲಿ ಆಸ್ತಮಾ, ಅಧಿಕ ರಕ್ತದೊತ್ತಡ, ನಿದ್ರಾಹೀನತೆ ಮುಂತಾದ ಸಮಸ್ಯೆಗಳು ಉದ್ಭವಿಸುವ ಸಾಧ್ಯತೆಯಿರುವುದರಿಂದ ಅವರಿಗೂ ಈ ನಿರ್ಬಂಧ ಅನ್ವಯವಾಗುತ್ತದೆ.
ಸ್ವಂತ ಖರ್ಚಿನಲ್ಲಿ ಚಿಕಿತ್ಸೆ ಪಡೆಯುವ ಸಾಮರ್ಥ್ಯವಿದ್ದರೆ ವೀಸಾ ನೀಡಬಹುದು ಎಂಬ ನಿಯಮವೂ ಇದೆ. ವರದಿಗಳ ಪ್ರಕಾರ, ಅರ್ಜಿದಾರರು ಸರ್ಕಾರದ ಆರ್ಥಿಕ ನೆರವಿಲ್ಲದೆ ತಮ್ಮ ಜೀವನಪೂರ್ತಿ ಚಿಕಿತ್ಸೆಯನ್ನು ನಿರ್ವಹಿಸುವ ಸಾಮರ್ಥ್ಯವನ್ನು ಪರಿಶೀಲಿಸಲು ವೀಸಾ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಇದಕ್ಕಾಗಿ, ಬ್ಯಾಂಕ್ ಸ್ಟೇಟ್‌ಮೆಂಟ್‌ಗಳು, ವೈದ್ಯಕೀಯ ವಿಮೆಯ ದಾಖಲೆಗಳು ಮತ್ತು ಆರ್ಥಿಕ ಸ್ಥಿತಿಯನ್ನು ಸಾಬೀತುಪಡಿಸುವ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ. ಅಲ್ಲದೆ, ಅರ್ಜಿದಾರರ ಮೇಲೆ ಅವಲಂಬಿತರಾಗಿರುವ ಕುಟುಂಬ ಸದಸ್ಯರು, ಮಕ್ಕಳು, ಪೋಷಕರು ಅಥವಾ ಸಂಗಾತಿ ಸರ್ಕಾರಿ ಸೌಲಭ್ಯಗಳನ್ನು ಬಳಸದಂತೆ ಖಚಿತಪಡಿಸಿಕೊಳ್ಳಬೇಕು.
ಈ ಮೊದಲು, ವೀಸಾ ಅರ್ಜಿಗಳಲ್ಲಿ ಕೇವಲ ಕ್ಷಯರೋಗ (ಟಿಬಿ), ಲಸಿಕೆ ದಾಖಲೆಗಳು ಮತ್ತು ಮೂಲಭೂತ ಆರೋಗ್ಯ ತಪಾಸಣೆಗಳು ಮಾತ್ರ ನಡೆಯುತ್ತಿದ್ದವು. ಆದರೆ, ಇದೀಗ ಈ ಪಟ್ಟಿಯನ್ನು ವಿಸ್ತರಿಸಲಾಗಿದ್ದು, ಹಲವು ದೀರ್ಘಕಾಲದ ರೋಗಗಳನ್ನು ಸೇರಿಸಲಾಗಿದೆ.
ಅಮೆರಿಕದಲ್ಲಿ ಗ್ರೀನ್‌ಕಾರ್ಡ್ ಹೊಂದಿರುವವರಿಗೆ ಸರ್ಕಾರದ ವೆಚ್ಚದಲ್ಲೇ ಉಚಿತ ಚಿಕಿತ್ಸೆ ನೀಡುವ ವ್ಯವಸ್ಥೆಯಿದೆ. ಆದರೆ, ಹೃದ್ರೋಗ, ಕ್ಯಾನ್ಸರ್, ಮಧುಮೇಹ ಮುಂತಾದ ರೋಗಗಳ ಚಿಕಿತ್ಸೆಯ ವೆಚ್ಚ ಬಹಳ ದುಬಾರಿಯಾಗಿದೆ. ಒಂದು ಕ್ಯಾನ್ಸರ್ ಚಿಕಿತ್ಸೆಗೆ ಲಕ್ಷಾಂತರ ಡಾಲರ್‌ಗಳು ಖರ್ಚಾಗಬಹುದು, ಇದು ಸರ್ಕಾರಕ್ಕೆ ಭಾರೀ ಹೊರೆಯಾಗುತ್ತದೆ. ಇದಲ್ಲದೆ, ರೋಗ ಗುಣವಾಗದಿದ್ದರೆ ಅಮೆರಿಕದ ವೈದ್ಯಕೀಯ ವ್ಯವಸ್ಥೆಯ ಮೇಲೆ ಕಳಂಕ ಬೀಳುತ್ತದೆ ಎಂಬುದು ಸರ್ಕಾರದ ವಾದವಾಗಿದೆ.





