ವಾಷಿಂಗ್ಟನ್: ಅಮೆರಿಕದ ಮಿನ್ನಿಯಾಪೋಲಿಸ್‌ನ ಅನನ್ಸಿಯೇಷನ್ ಕ್ಯಾಥೋಲಿಕ್ ಶಾಲೆಯ ಚರ್ಚ್‌ನಲ್ಲಿ ಬುಧವಾರ ಭೀಕರ ಗುಂಡಿನ ದಾಳಿ ನಡೆದಿದೆ. ಈ ದುರ್ಘಟನೆಯಲ್ಲಿ ಇಬ್ಬರು ಶಾಲಾ ಮಕ್ಕಳು ದಾರುಣವಾಗಿ ಸಾವನ್ನಪ್ಪಿದ್ದಾರೆ. ದಾಳಿಕೋರನಾದ 23 ವರ್ಷದ ರಾಬಿನ್ ವೆಸ್ಟ್‌ಮನ್, ರೈಫಲ್, ಶಾಟ್‌ಗನ್ ಮತ್ತು ಪಿಸ್ತೂಲ್ ಸೇರಿದಂತೆ ಮೂರು ಆಯುಧಗಳನ್ನು ಬಳಸಿ ಚರ್ಚ್ ಮೇಲೆ ಗುಂಡು ಹಾರಿಸಿದ್ದಾನೆ. ದಾಳಿಯ ನಂತರ ಆತ ಪಾರ್ಕಿಂಗ್ ಸ್ಥಳದಲ್ಲಿ ತನಗೆ ತಾನೇ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಪೊಲೀಸರು ದಾಳಿಕೋರನ ಬಂದೂಕನ್ನು ವಶಪಡಿಸಿಕೊಂಡಾಗ, ಅದರ ಮೇಲೆ ಆಘಾತಕಾರಿ ಬರಹಗಳು ಕಂಡುಬಂದಿವೆ. ಬಂದೂಕಿನ ಮ್ಯಾಗಜೀನ್‌ನಲ್ಲಿ “ನ್ಯೂಕ್ ಇಂಡಿಯಾ” (ಭಾರತವನ್ನು ನಾಶಪಡಿಸಿ), “ಮಾಶಾ ಅಲ್ಲಾಹ್”, “ಡೊನಾಲ್ಡ್ ಟ್ರಂಪ್‌ರನ್ನು ಕೊಲ್ಲಬೇಕು”, “ಇಸ್ರೇಲ್‌ನ್ನು ಸುಟ್ಟುಹಾಕಬೇಕು” ಮತ್ತು “ನಿಮ್ಮ ದೇವರು ಎಲ್ಲಿದ್ದಾನೆ?” ಎಂಬ ಸಂದೇಶಗಳನ್ನು ಬರೆಯಲಾಗಿತ್ತು.
ಅಧಿಕಾರಿಗಳ ಪ್ರಕಾರ, ವೆಸ್ಟ್‌ಮನ್ ಕಾನೂನುಬದ್ಧವಾಗಿ ಶಸ್ತ್ರಾಸ್ತ್ರಗಳನ್ನು ಖರೀದಿಸಿದ್ದ. ಆತನ ವಿರುದ್ಧ ಯಾವುದೇ ಕ್ರಿಮಿನಲ್ ಹಿನ್ನೆಲೆ ಇರಲಿಲ್ಲ. ಈ ದಾಳಿಯನ್ನು ಆತ ಏಕಾಂಗಿಯಾಗಿ ಯೋಜಿಸಿ, ಯಾರ ಸಹಾಯವಿಲ್ಲದೆ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆಯ ಬಗ್ಗೆ ತನಿಖೆ ಚುರುಕುಗೊಂಡಿದ್ದು, ದಾಳಿಕೋರನ ಉದ್ದೇಶ ಮತ್ತು ಈ ಬರಹಗಳ ಹಿಂದಿನ ಉಗ್ರವಾದಿ ಸಂಪರ್ಕವನ್ನು ಪತ್ತೆಹಚ್ಚಲು ಪ್ರಯತ್ನಗಳು ನಡೆಯುತ್ತಿವೆ.