ವಾಷಿಂಗ್ಟನ್: ಜಾಗತಿಕ ವಾಯುಪಡೆಗಳ ಇತಿಹಾಸದಲ್ಲಿ ಹೊಸ ಅಧ್ಯಾಯವೊಂದು ಆರಂಭವಾಗುತ್ತಿದೆ. ಅಮೆರಿಕದ ವಾಯುಪಡೆಯ (USAF) ಅತ್ಯಾಧುನಿಕ ನೆಕ್ಸ್ಟ್ ಜನರೇಷನ್ ಏರ್ ಡಾಮಿನೆನ್ಸ್ (NGAD) ಕಾರ್ಯಕ್ರಮದ ಅಡಿಯಲ್ಲಿ ಬೋಯಿಂಗ್ ಕಂಪನಿಯು ವಿಶ್ವದ ಮೊದಲ ಆರನೇ ತಲೆಮಾರಿನ (6th Gen) ಸ್ಟೆಲ್ತ್ ಫೈಟರ್ ಜೆಟ್ F-47 ಅನ್ನು ಅಭಿವೃದ್ಧಿಪಡಿಸುತ್ತಿದೆ. F-22 ರಾಪ್ಟರ್ ವಿಮಾನದ ಉತ್ತರಾಧಿಕಾರಿಯಾಗಿ ಸಿದ್ಧವಾಗುತ್ತಿರುವ ಈ ವಿಮಾನವು, ತಂತ್ರಜ್ಞಾನ ಮತ್ತು ಯುದ್ಧ ಸಾಮರ್ಥ್ಯದಲ್ಲಿ ಹತ್ತಾರು ಪಟ್ಟು ಮುಂದಿರಲಿದೆ.
ದಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯಲ್ಲಿ ಮಾತನಾಡಿದ್ದ ಡೊನಾಲ್ಡ್ ಟ್ರಂಪ್, ಈ ವಿಮಾನವನ್ನು ಇದುವರೆಗೆ ನಿರ್ಮಿಸಿದ ಅತ್ಯಂತ ವಿನಾಶಕಾರಿ ವಿಮಾನ ಎಂದು ಹೇಳಿದ್ದಾರೆ. ಈ ವಿಮಾನಕ್ಕೆ F-47 ಎಂಬ ಹೆಸರು ಬರಲು ಮೂರು ಪ್ರಮುಖ ಕಾರಣಗಳಿವೆ ಅವುಗಂಳೆದರೆ,
-
ಎರಡನೇ ಮಹಾಯುದ್ಧದ ಐಕಾನಿಕ್ P-47 ಥಂಡರ್‌ಬೋಲ್ಟ್ ವಿಮಾನಕ್ಕೆ ಗೌರವ ಸಲ್ಲಿಸುವುದು.
-
ಅಮೆರಿಕ ವಾಯುಪಡೆಯು ಸ್ವತಂತ್ರ ಸೇವೆಯಾಗಿ ಹೊರಹೊಮ್ಮಿದ ವರ್ಷ 1947 ಅನ್ನು ಸ್ಮರಿಸುವುದು.
-
ಅಮೆರಿಕದ 47ನೇ ಅಧ್ಯಕ್ಷರಾಗಿ ಟ್ರಂಪ್ ಅಧಿಕಾರ ವಹಿಸಿಕೊಂಡಿರುವ ಹಿನ್ನೆಲೆಯಲ್ಲಿ ಈ ಸಂಖ್ಯೆ ಆಯ್ದುಕೊಳ್ಳಲಾಗಿದೆ.
ಈ ವಿಮಾನವು ಕೇವಲ ವೇಗಕ್ಕೆ ಮಾತ್ರವಲ್ಲದೆ, ತನ್ನ ಅದ್ಭುತ ಸ್ಟೆಲ್ತ್ ತಂತ್ರಜ್ಞಾನಕ್ಕೆ ಹೆಸರಾಗಲಿದೆ. ರಾಡಾರ್‌ಗಳಿಗೆ ಕಣ್ಣಿಗೆ ಮಣ್ಣೆರಚಿ ಹಾರಬಲ್ಲ ಈ ವಿಮಾನವು ಶತ್ರುಗಳನ್ನು ಅವರು ನೋಡುವ ಮೊದಲೇ ಪತ್ತೆಹಚ್ಚಿ ನಾಶಪಡಿಸಬಲ್ಲದು. ವಿಶೇಷವೆಂದರೆ, ಈ ವಿಮಾನವು ಮಾನವರಹಿತ ಡ್ರೋನ್‌ಗಳೊಂದಿಗೆ (CCA) ಸಂವಹನ ನಡೆಸಿ, ಅವುಗಳನ್ನು ಯುದ್ಧಭೂಮಿಯಲ್ಲಿ ನಿಯಂತ್ರಿಸುವ ಸಾಮರ್ಥ್ಯ ಹೊಂದಿದೆ. ಪೈಲಟ್‌ಗೆ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವು ಪ್ರತಿ ಹಂತದಲ್ಲೂ ನೆರವು ನೀಡಲಿದೆ.
ಎಂಜಿನ್ ಮತ್ತು ವೇಗ:
F-47 ವಿಮಾನದಲ್ಲಿ ಮುಂದಿನ ಪೀಳಿಗೆಯ ಅಡಾಪ್ಟಿವ್ ಪ್ರೊಪಲ್ಷನ್ (NGAP) ಎಂಜಿನ್‌ಗಳನ್ನು ಬಳಸಲು ಉದ್ದೇಶಿಸಲಾಗಿದೆ. ಇದು ವಿಮಾನಕ್ಕೆ ಮ್ಯಾಕ್ 2 (ಶಬ್ದಕ್ಕಿಂತಲೂ ಎರಡು ಪಟ್ಟು) ಕಿಂತ ಹೆಚ್ಚಿನ ವೇಗವನ್ನು ನೀಡುತ್ತದೆ. ಇದರ ಯುದ್ಧ ತ್ರಿಜ್ಯ (Combat Radius) ಸುಮಾರು 1,000 ನಾಟಿಕಲ್ ಮೈಲುಗಳಷ್ಟಿರಲಿದ್ದು, ಇದು F-22 ಗಿಂತ 70% ಹೆಚ್ಚು ವ್ಯಾಪ್ತಿಯನ್ನು ಹೊಂದಿದೆ.
ತಂತ್ರಜ್ಞಾನ ಎಷ್ಟು ಮುಂದುವರಿದಿದೆಯೋ, ಇದರ ಬೆಲೆಯೂ ಅಷ್ಟೇ ಬೃಹತ್ ಪ್ರಮಾಣದಲ್ಲಿದೆ. ಪ್ರತಿ ಎಫ್-47 ವಿಮಾನದ ಬೆಲೆ ಸುಮಾರು $300 ಮಿಲಿಯನ್ (ಅಂದಾಜು 2,500 ಕೋಟಿ ರೂ.) ಇರಲಿದೆ ಎಂದು ಅಂದಾಜಿಸಲಾಗಿದೆ. ಅಮೆರಿಕದ ವಾಯುಪಡೆಯು ಇಂತಹ 185 ಜೆಟ್‌ಗಳನ್ನು ಖರೀದಿಸಲು ಯೋಜಿಸಿದೆ. 2028 ರಲ್ಲಿ ಇದರ ಮೊದಲ ಹಾರಾಟ ನಡೆಯಲಿದ್ದು, 2030 ರ ಹೊತ್ತಿಗೆ ಇದು ಅಧಿಕೃತವಾಗಿ ಸೇವೆಗೆ ಲಭ್ಯವಾಗಲಿದೆ.
ಚೀನಾ ಮತ್ತು ರಷ್ಯಾದಂತಹ ರಾಷ್ಟ್ರಗಳು ತಮ್ಮದೇ ಆದ ಮುಂದುವರಿದ ಯುದ್ಧ ವಿಮಾನಗಳನ್ನು ಅಭಿವೃದ್ಧಿಪಡಿಸುತ್ತಿರುವಾಗ, ಅಮೆರಿಕದ ಈ F-47 ಜಾಗತಿಕ ಮಿಲಿಟರಿ ಸಮತೋಲನವನ್ನು ತನ್ನತ್ತ ತಿರುಗಿಸಿಕೊಳ್ಳುವಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ.
https://youtu.be/f1dfuAa8rI8?si=1Iwnj55eZWyG11Pp





