ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ಮತ್ತೊಂದು ಅಪಾಯಕಾರಿ ಹಂತಕ್ಕೆ ತಲುಪಿರುವ ಲಕ್ಷಣಗಳು ಗೋಚರಿಸುತ್ತಿವೆ. ಉಕ್ರೇನ್ ಸೇನೆ ರಷ್ಯಾದ ನೆಲದ ಮೇಲೆ ಹಿಂದೆಂದೂ ಕಂಡು ಕೇಳರಿಯದ ರೀತಿಯಲ್ಲಿ ಭಾರೀ ಡ್ರೋನ್ ದಾಳಿ ನಡೆಸಿದೆ ಎನ್ನಲಾಗಿದ್ದು, ಒಂದೇ ಸಮಯದಲ್ಲಿ ಸಾವಿರಾರು ಡ್ರೋನ್‌ಗಳನ್ನು ಬಳಸಿಕೊಂಡು ರಷ್ಯಾದ ಹಲವು ಪ್ರದೇಶಗಳನ್ನು ಗುರಿಯಾಗಿಸಿಕೊಂಡಿದೆ ಎಂಬ ವರದಿಗಳು ಹೊರಬಿದ್ದಿವೆ.
ವಿಶೇಷವಾಗಿ ರಷ್ಯಾದ ಟಾಟರ್‌ಸ್ತಾನ್ ಪ್ರದೇಶದ ಮೇಲೆ ನಡೆದಿರುವ ದಾಳಿ ಭಾರೀ ಆತಂಕಕ್ಕೆ ಕಾರಣವಾಗಿದೆ. ಉಕ್ರೇನ್ ಗಡಿಯಿಂದ ಸುಮಾರು 1,000 ಕಿಲೋಮೀಟರ್‌ಗೂ ಹೆಚ್ಚು ದೂರದಲ್ಲಿರುವ ಪ್ರದೇಶದವರೆಗೂ ಉಕ್ರೇನ್‌ನ ಡ್ರೋನ್‌ಗಳು ನುಗ್ಗಿ ದಾಳಿ ನಡೆಸಿವೆ ಎಂದು ವರದಿಯಾಗಿದೆ. ಇದರಿಂದ ಯುದ್ಧದ ವ್ಯಾಪ್ತಿ ಎಷ್ಟರ ಮಟ್ಟಿಗೆ ವಿಸ್ತರಿಸಿದೆ ಎಂಬುದು ಮತ್ತೊಮ್ಮೆ ಚರ್ಚೆಗೆ ಬಂದಿದೆ.
ಟಾಟರ್‌ಸ್ತಾನ್‌ನ ಕೈಗಾರಿಕಾ ಹಾಗೂ ಪ್ರಮುಖ ಮೂಲಸೌಕರ್ಯ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆದಿರುವ ಮಾಹಿತಿ ಲಭ್ಯವಾಗಿದೆ. ಈ ದಾಳಿಯಲ್ಲಿ ಕನಿಷ್ಠ 12 ಮಂದಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದ್ದು, ಸುಮಾರು 40ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ. ದಾಳಿಯ ನಂತರ ರಷ್ಯಾ ಭದ್ರತಾ ಪಡೆಗಳು ಹಲವು ಪ್ರದೇಶಗಳಲ್ಲಿ ಕಟ್ಟುನಿಟ್ಟಿನ ಭದ್ರತಾ ಕ್ರಮಗಳನ್ನು ಕೈಗೊಂಡಿವೆ.
ಇದರ ಬೆನ್ನಲ್ಲೇ ರಷ್ಯಾ ಕೂಡ ಉಕ್ರೇನ್ ವಿರುದ್ಧ ಪ್ರತಿದಾಳಿ ನಡೆಸಿದೆ. ರಷ್ಯಾದ ಫಿರಂಗಿ ಪಡೆಗಳು ಉಕ್ರೇನ್‌ನ ಖಾರ್ಕಿವ್ ಪ್ರಾಂತ್ಯವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿವೆ ಎಂದು ವರದಿಯಾಗಿದೆ. ರಷ್ಯಾದ ದಾಳಿಯಲ್ಲಿ ಕನಿಷ್ಠ ಐವರು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದ್ದು, ಹಲವರು ಗಾಯಗೊಂಡಿದ್ದಾರೆ ಎನ್ನಲಾಗಿದೆ.
ಈ ನಡುವೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಮತ್ತೊಂದು ದೊಡ್ಡ ಹೆಜ್ಜೆ ಇಡುವ ಸಾಧ್ಯತೆ ಬಗ್ಗೆ ಚರ್ಚೆ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಉಕ್ರೇನ್ ನೆಲದಲ್ಲಿ ಸುಮಾರು 5 ಲಕ್ಷ ಸೈನಿಕರನ್ನು ನಿಯೋಜಿಸುವ ಯೋಜನೆ ರಷ್ಯಾ ಬಳಿ ಇದೆ ಎಂಬ ವರದಿಗಳು ಯುದ್ಧದ ತೀವ್ರತೆಯನ್ನು ಮತ್ತಷ್ಟು ಹೆಚ್ಚಿಸಿವೆ. ಇಷ್ಟು ದೊಡ್ಡ ಪ್ರಮಾಣದ ಸೇನೆಯನ್ನು ನಿಯೋಜಿಸುವುದು ರಷ್ಯಾದ ಪಾಲಿಗೆ ಅತ್ಯಂತ ದೊಡ್ಡ ಸೈನಿಕ ಕಾರ್ಯಾಚರಣೆಯಾಗಲಿದೆ.
ಈ ಬೃಹತ್ ಸೇನಾ ನಿಯೋಜನೆಯನ್ನು ಪುಟಿನ್ ಅವರ ‘ಕೊನೆಯ ಆಯ್ಕೆ’ ಎಂದು ಬಿಂಬಿಸಲಾಗುತ್ತಿದೆ. ಉಕ್ರೇನ್ ವಿರುದ್ಧ ನಿರ್ಣಾಯಕ ಮೇಲುಗೈ ಸಾಧಿಸುವ ಉದ್ದೇಶದಿಂದ ರಷ್ಯಾ ತನ್ನ ಸೇನಾ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸಲು ಮುಂದಾಗುತ್ತಿದೆ ಎನ್ನಲಾಗಿದೆ.
ಇದೇ ವರ್ಷದ ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ರಷ್ಯಾದ ಸಂಸತ್ ಚುನಾವಣೆಗೆ ಮುನ್ನ ತನ್ನ ಬಲ ಪ್ರದರ್ಶಿಸಲು ಪುಟಿನ್ ಮುಂದಾಗಿದ್ದಾರೆ ಎಂಬ ವಿಶ್ಲೇಷಣೆಗಳೂ ಕೇಳಿಬರುತ್ತಿವೆ. ಚುನಾವಣೆಯ ಮುನ್ನ ಉಕ್ರೇನ್ ವಿರುದ್ಧ ದೊಡ್ಡ ಮಟ್ಟದ ಸೇನಾ ಕಾರ್ಯಾಚರಣೆ ನಡೆಸಿ, ದೇಶದ ಜನರ ಮುಂದೆ ತನ್ನ ಸರ್ಕಾರದ ಸಾಮರ್ಥ್ಯವನ್ನು ಪ್ರದರ್ಶಿಸುವ ಉದ್ದೇಶ ರಷ್ಯಾಕ್ಕೆ ಇರಬಹುದು ಎನ್ನಲಾಗುತ್ತಿದೆ.
ಉಕ್ರೇನ್‌ನ ಭಾರೀ ಡ್ರೋನ್ ದಾಳಿ, ಅದಕ್ಕೆ ರಷ್ಯಾ ನೀಡಿರುವ ಪ್ರತಿದಾಳಿ ಹಾಗೂ 5 ಲಕ್ಷ ಸೈನಿಕರ ನಿಯೋಜನೆಯ ಸಾಧ್ಯತೆಗಳು ರಷ್ಯಾ-ಉಕ್ರೇನ್ ಯುದ್ಧವನ್ನು ಮತ್ತಷ್ಟು ಭೀಕರ ಹಂತಕ್ಕೆ ಕೊಂಡೊಯ್ಯುವ ಆತಂಕ ಮೂಡಿಸಿವೆ. ಮುಂದಿನ ದಿನಗಳಲ್ಲಿ ಉಭಯ ದೇಶಗಳ ನಡುವೆ ಸಂಘರ್ಷ ಯಾವ ತಿರುವು ಪಡೆಯಲಿದೆ ಎಂಬುದು ಜಾಗತಿಕ ಮಟ್ಟದಲ್ಲಿ ಕುತೂಹಲ ಮೂಡಿಸಿದೆ.





