ಥೈಲ್ಯಾಂಡ್ : ಥೈಲ್ಯಾಂಡ್‌ನ ಈಶಾನ್ಯ ಭಾಗದಲ್ಲಿ ಹೈ-ಸ್ಪೀಡ್ ರೈಲಿನ ಮೇಲೆ ಕ್ರೇನ್ ಕುಸಿದು ಬಿದ್ದು ಭೀಕರ ಅಪಘಾತ ಸಂಭವಿಸಿದೆ. ಇದರ ಪರಿಣಾಮ 22 ಮಂದಿ ಸಾವನ್ನಪ್ಪಿದ್ದು, 30ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ದುರ್ಘಟನೆ ಬುಧವಾರ ಬೆಳಿಗ್ಗೆ ನಖೋನ್ ರಾಟಸಿಮಾ ಪ್ರಾಂತ್ಯದ ಸಿಖಿಯೊ ಜಿಲ್ಲೆಯಲ್ಲಿ ನಡೆದಿದೆ.
ಪೊಲೀಸ್ ಮತ್ತು ರಕ್ಷಣಾ ಅಧಿಕಾರಿಗಳ ಮಾಹಿತಿ ಪ್ರಕಾರ, ರಾಜಧಾನಿ ಬ್ಯಾಂಕಾಕ್‌ನಿಂದ ಈಶಾನ್ಯ ಥೈಲ್ಯಾಂಡ್ ಪ್ರಾಂತ್ಯಕ್ಕೆ ತೆರಳುತ್ತಿದ್ದ ಪ್ರಯಾಣಿಕ ರೈಲು ಅಪಘಾತಕ್ಕೀಡಾಗಿದೆ. ಬ್ಯಾಂಕಾಕ್‌ನಿಂದ ಸುಮಾರು 230 ಕಿಲೋಮೀಟರ್ ದೂರದಲ್ಲಿರುವ ಈ ಪ್ರದೇಶದಲ್ಲಿ ಹೈಸ್ಪೀಡ್ ರೈಲು ಯೋಜನೆಯ ಕಾಮಗಾರಿ ನಡೆಯುತ್ತಿತ್ತು. ಇದೇ ವೇಳೆ ಕಾರ್ಯನಿರ್ವಹಿಸುತ್ತಿದ್ದ ಭಾರೀ ಕ್ರೇನ್ ಅಚಾನಕ್ ಕುಸಿದು ಹಳಿ ಮೇಲೆ ಸಾಗುತ್ತಿದ್ದ ರೈಲಿಗೆ ಡಿಕ್ಕಿ ಹೊಡೆದಿದೆ.
ಕ್ರೇನ್ ನೇರವಾಗಿ ರೈಲಿನ ಬೋಗಿಗಳ ಮೇಲೆ ಬಿದ್ದ ಪರಿಣಾಮ ಭಾರೀ ಶಬ್ದ ಕೇಳಿಬಂದಿದ್ದು, ಕೆಲವೇ ಕ್ಷಣಗಳಲ್ಲಿ ರೈಲಿನ ಹಲವು ವ್ಯಾಗನ್‌ಗಳು ಹಳಿ ತಪ್ಪಿವೆ. ಕೆಲವು ಬೋಗಿಗಳಲ್ಲಿ ಬೆಂಕಿ ಹೊತ್ತಿಕೊಂಡಿದೆ.
ಸ್ಥಳೀಯರು ತಕ್ಷಣವೇ ರಕ್ಷಣಾ ಕಾರ್ಯಕ್ಕೆ ಧಾವಿಸಿದ್ದು, ಅಗ್ನಿಶಾಮಕ ದಳ ಮತ್ತು ಆಂಬ್ಯುಲೆನ್ಸ್‌ಗಳು ಸ್ಥಳಕ್ಕೆ ಆಗಮಿಸಿದವು. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಹಲವರ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಮೃತರಲ್ಲಿ ಮಹಿಳೆಯರು, ವೃದ್ಧರು ಹಾಗೂ ಮಕ್ಕಳು ಸೇರಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ಘಟನೆ ಕುರಿತು ಮಾತನಾಡಿದ ಥೈಲ್ಯಾಂಡ್ ಪೊಲೀಸರು, ಹೈಸ್ಪೀಡ್ ರೈಲು ಯೋಜನೆಯ ನಿರ್ಮಾಣ ಸಂದರ್ಭದಲ್ಲಿ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗಿತ್ತೇ ಎಂಬುದನ್ನು ತನಿಖೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಅಪಘಾತದ ಸುದ್ದಿ ತಿಳಿದ ಕೂಡಲೇ ಥೈಲ್ಯಾಂಡ್ ಸರ್ಕಾರ ಉನ್ನತ ಮಟ್ಟದ ತನಿಖೆಗೆ ಆದೇಶಿಸಿದೆ. ಮೃತರ ಕುಟುಂಬಗಳಿಗೆ ಪರಿಹಾರ ಘೋಷಿಸುವ ಸಾಧ್ಯತೆ ಇದ್ದು, ಪ್ರಧಾನಿ ಕಚೇರಿಯಿಂದ ಸಂತಾಪ ಸಂದೇಶವೂ ಹೊರಬಿದ್ದಿದೆ.





