ಆನ್ಲೈನ್ ಕಂಟೆಂಟ್‌ಗಳ ಭೀಕರ ಪರಿಣಾಮಗಳಿಂದ ಯುವ ಪೀಳಿಗೆಯನ್ನು ರಕ್ಷಿಸಲು ಸ್ಪೇನ್ ಮಹತ್ವದ ಹೆಜ್ಜೆ ಇಟ್ಟಿದೆ. 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಸೋಶಿಯಲ್ ಮೀಡಿಯಾ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಲು ತನ್ನ ಸರ್ಕಾರ ಯೋಜಿಸುತ್ತಿದೆ ಎಂದು ಸ್ಪೇನ್ ಪ್ರಧಾನಿ ಪೆಡೋ ಸ್ಯಾಂಚೆಜ್ ಘೋಷಿಸಿದ್ದಾರೆ.
ದೊಡ್ಡ ಟೆಕ್ ಕಂಪನಿಗಳಿಗೆ ಖಡಕ್ ಎಚ್ಚರಿಕೆ
ಸಂಯುಕ್ತ ಅರಬ್ ಎಮಿರೇಟ್ಸ್‌ನಲ್ಲಿ ನಡೆದ ಶೃಂಗಸಭೆಯಲ್ಲಿ ಮಾತನಾಡಿದ ಸ್ಯಾಂಚೆಜ್, ಮಕ್ಕಳ ಲೈಂಗಿಕ ಶೋಷಣೆ, ಸಮ್ಮತಿಯಿಲ್ಲದ ‘ಡೀಪ್‌ಫೇಕ್’ ಚಿತ್ರಗಳು ಮತ್ತು ವಿಡಿಯೋಗಳಂತಹ ಕಾನೂನುಬಾಹಿರ ಕಂಟೆಂಟ್‌ಗಳಿಗೆ ವೇದಿಕೆ ಒದಗಿಸುತ್ತಿರುವ ಟೆಕ್ ಕಂಪನಿಗಳನ್ನು ತರಾಟೆಗೆ ತೆಗೆದುಕೊಂಡರು. ನಮ್ಮ ಮಕ್ಕಳು ಒಬ್ಬಂಟಿಯಾಗಿ ಹೋಗಬಾರದಂತಹ ಅಪಾಯಕಾರಿ ವಾತಾವರಣಕ್ಕೆ ಇಂದು ತೆರೆದುಕೊಂಡಿದ್ದಾರೆ. ಸರ್ಕಾರಗಳು ಇನ್ನು ಮುಂದೆ ಇದರ ಬಗ್ಗೆ ಕಣ್ಣು ಮುಚ್ಚಿ ಕುಳಿತುಕೊಳ್ಳಲು ಸಾಧ್ಯವಿಲ್ಲ ಎಂದು ಅವರು ಗುಡುಗಿದ್ದಾರೆ.
ಜಾಗತಿಕ ಒಕ್ಕೂಟ ಮತ್ತು ವಯಸ್ಸು ದೃಢೀಕರಣ
ಸ್ಪೇನ್ ಜೊತಗೆ ಇತರ ಐದು ಯುರೋಪಿಯನ್ ರಾಷ್ಟ್ರಗಳೊಂದಿಗೆ ಸೇರಿ ಡಿಜಿಟಲ್ ಆಸಕ್ತರ ಒಕ್ಕೂಟವನ್ನು ರಚಿಸಿದೆ. ಸ್ಯಾಂಚೆಜ್ ಅವರ ಪ್ರಕಾರ, ಇನ್ನು ಮುಂದೆ ಕೇವಲ ನನಗೆ 18 ವರ್ಷ ತುಂಬಿದೆ ಎಂದು ಟಿಕ್ ಮಾಡುವ ಸ್ವಯಂ ಘೋಷಿತ ವ್ಯವಸ್ಥೆ ನಡೆಯುವುದಿಲ್ಲ. ಬದಲಾಗಿ, ಪ್ರತಿಯೊಂದು ಸೋಶಿಯಲ್ ಮೀಡಿಯಾ ಕಂಪನಿಯು ಕಟ್ಟುನಿಟ್ಟಾದ ವಯಸ್ಸು ದೃಢೀಕರಣ ವ್ಯವಸ್ಥೆ (Age Verification System) ಅಳವಡಿಸಿಕೊಳ್ಳುವುದನ್ನು ಕಡ್ಡಾಯಗೊಳಿಸಲಾಗುತ್ತದೆ.
ಮಕ್ಕಳನ್ನು ಡಿಜಿಟಲ್ ವ್ಯಸನದಿಂದ ರಕ್ಷಿಸಲು ಹಲವು ದೇಶಗಳು ಈಗಾಗಲೇ ಯುದ್ಧೋಪಾದಿಯಲ್ಲಿ ಕಾನೂನು ತರುತ್ತಿವೆ:
-
ಆಸ್ಟ್ರೇಲಿಯಾ: 16 ವರ್ಷದೊಳಗಿನ ಮಕ್ಕಳು ಖಾತೆ ತೆರೆಯುವುದನ್ನು ತಡೆಯಲು ವಿಫಲವಾದರೆ ಕಂಪನಿಗಳಿಗೇ ಭಾರಿ ದಂಡ ವಿಧಿಸುವ ವಿಶ್ವದ ಮೊದಲ ಕಠಿಣ ಕಾನೂನನ್ನು ಜಾರಿಗೆ ತಂದಿದೆ.
-
ಫ್ರಾನ್ಸ್: 15 ವರ್ಷದೊಳಗಿನವರಿಗೆ ನಿಷೇಧ ಹೇರುವ ಮಸೂದೆ ಅನುಮೋದಿಸಿದೆ. ಸೆಪ್ಟೆಂಬರ್‌ನಿಂದ ಶಾಲೆಗಳಲ್ಲಿ ಮೊಬೈಲ್ ಬಳಕೆಯನ್ನೂ ಸಂಪೂರ್ಣವಾಗಿ ನಿಷೇಧಿಸಲಾಗಿದೆ.
-
ಡೆನ್ಮಾರ್ಕ್: ಇಲ್ಲೂ ಕೂಡ 15 ವರ್ಷದ ಮಿತಿ ಹೇರಲು ಸಿದ್ಧತೆ ನಡೆದಿದೆ.
ಭಾರತದಲ್ಲೂ ಶುರುವಾಗಿದೆ ಚರ್ಚೆ
ಹದಿಹರೆಯದವರಲ್ಲಿ ಹೆಚ್ಚುತ್ತಿರುವ ಮಾನಸಿಕ ಅಸ್ವಸ್ಥತೆ, ಖಿನ್ನತೆ ಮತ್ತು ಆತ್ಮಹತ್ಯೆಯ ಆಲೋಚನೆಗಳಿಗೆ ಸೋಶಿಯಲ್ ಮೀಡಿಯಾ ಪ್ರಚೋದನೆ ನೀಡುತ್ತಿದೆ ಎಂಬುದು ತಜ್ಞರ ಆತಂಕವಾಗಿದೆ. ಈ ಸಂಬಂಧ ಭಾರತದಲ್ಲೂ ಮಕ್ಕಳಿಗಾಗಿ ಸೋಶಿಯಲ್ ಮೀಡಿಯಾ ನಿಷೇಧಿಸುವ ಅಥವಾ ವಯಸ್ಸಿನ ಮಿತಿ ಹೇರುವ ಮಸೂದೆಯ ಬಗ್ಗೆ ಪ್ರಧಾನಿ ಮೋದಿಯವರ ಸಹೋದ್ಯೋಗಿಯೊಬ್ಬರು ಪ್ರಸ್ತಾಪಿಸಿದ್ದಾರೆ. ಭಾರತದಂತಹ ದೊಡ್ಡ ಮಾರುಕಟ್ಟೆಯಲ್ಲಿ ಇಂತಹ ಕಾನೂನು ಜಾರಿಯಾದರೆ ಅದು ಟೆಕ್ ಜಗತ್ತಿನಲ್ಲಿ ದೊಡ್ಡ ಕ್ರಾಂತಿ ಸೃಷ್ಟಿಸಲಿದೆ.
ಒಟ್ಟಾರೆಯಾಗಿ, ಇಂಟರ್ನೆಟ್ ಎಂಬುದು ಮಕ್ಕಳಿಗೆ ಆಟದ ಮೈದಾನವಾಗುವ ಬದಲು ಅಪಾಯದ ಹೊಂಡವಾಗುತ್ತಿರುವುದನ್ನು ಮನಗಂಡಿರುವ ಜಗತ್ತು, ಈಗ ಡಿಜಿಟಲ್ ಕರ್ಫ್ಯೂ ಕಡೆಗೆ ಹೆಜ್ಜೆ ಇಡುತ್ತಿದೆ.





