ಜೋಹಾನ್ಸ್‌ಬರ್ಗ್, ಡಿಸೆಂಬರ್ 6: ದಕ್ಷಿಣ ಆಫ್ರಿಕಾದಲ್ಲಿ (South Africa) ಇಂದು (ಶನಿವಾರ) ಅತ್ಯಂತ ಭೀಕರ ಮತ್ತು ದುರಂತದ ಘಟನೆಯೊಂದು ನಡೆದಿದೆ. ಪ್ರಿಟೋರಿಯಾ (Pretoria) ಬಳಿಯ ಸೌಲ್ಸ್‌ವಿಲ್ಲೆ (Saulsville) ಟೌನ್‌ಶಿಪ್‌ನಲ್ಲಿರುವ ಒಂದು ಬಾರ್‌ನಲ್ಲಿ ನಡೆದ ಸಾಮೂಹಿಕ ಗುಂಡಿನ ದಾಳಿಯಲ್ಲಿ ಮೂವರು ಅಮಾಯಕ ಮಕ್ಕಳು ಸೇರಿದಂತೆ ಒಟ್ಟು 11 ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಭೀಕರ ದಾಳಿಯಲ್ಲಿ ಇನ್ನೂ 14 ಜನರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ದುರ್ಘಟನೆಯು ಪ್ರಿಟೋರಿಯಾದ ಪಶ್ಚಿಮಕ್ಕೆ ಇರುವ ಸೌಲ್ಸ್‌ವಿಲ್ಲೆ ಟೌನ್‌ಶಿಪ್‌ನ ಒಂದು ಲೈಸೆನ್ಸ್ ಪಡೆಯದ ಬಾರ್‌ನಲ್ಲಿ ಸಂಭವಿಸಿದೆ. ಶನಿವಾರ ಸಂಜೆ ಈ ಗುಂಡಿನ ದಾಳಿ ನಡೆದಿರುವ ಸಾಧ್ಯತೆ ಇದೆ. ಏಕಾಏಕಿ ಬಂದ ಮೂವರು ಅಪರಿಚಿತ ಬಂದೂಕುಧಾರಿಗಳು ಬಾರ್‌ನೊಳಗೆ ಪ್ರವೇಶಿಸಿ, ಅಲ್ಲಿ ಸೇರಿದ್ದ ಜನರ ಮೇಲೆ ಮನಸೋಇಚ್ಛೆ ಗುಂಡು ಹಾಎಇಸಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ದುರಂತದಲ್ಲಿ ಮೃತಪಟ್ಟವರಲ್ಲಿ ಮೂವರು ಮಕ್ಕಳು ಸೇರಿದ್ದಾರೆ ಎಂಬುದು ಅತ್ಯಂತ ಹೃದಯ ಆಘಾತಕಾರಿ ಸಂಗತಿಯಾಗಿದೆ. ಮೃತರಾದ ಮಕ್ಕಳಲ್ಲಿ 3 ವರ್ಷದ ಬಾಲಕ, 12 ವರ್ಷದ ಬಾಲಕ ಮತ್ತು 16 ವರ್ಷದ ಬಾಲಕಿ ಸೇರಿದ್ದಾರೆ ಎಂದು ಸ್ಥಳೀಯ ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಘಟನೆ ಸಂಬಂಧ ಸ್ಥಳೀಯ ಸಮುದಾಯದಲ್ಲಿ ತೀವ್ರ ಆಕ್ರೋಶ ಮತ್ತು ಆಘಾತವನ್ನುಂಟು ಮಾಡಿದೆ. ಗುಂಡೇಟಿನಿಂದ ತೀವ್ರ ಗಾಯಗೊಂಡಿರುವ 14 ಜನರ ಪೈಕಿ ಕೆಲವರ ಸ್ಥಿತಿ ಚಿಂತಾಜನಕವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ, ಈ ವರೆಗೂ ಪೊಲೀಸರು ಯಾವುದೇ ಮಾಹಿತಿ ನೀಡಿಲ್ಲ.
ಘಟನಾ ಸ್ಥಳಕ್ಕೆ ದಕ್ಷಿಣ ಆಫ್ರಿಕಾದ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ಫೊರೆನ್ಸಿಕ್ ತಜ್ಞರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳೀಯ ಪೊಲೀಸರು ಈ ಗುಂಡಿನ ದಾಳಿಯ ಹಿಂದೆ ಇರುವ ಮೂವರು ಮುಖ್ಯ ಆರೋಪಿಗಳಿಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ. ದಾಳಿಯ ಉದ್ದೇಶ ಏನೆಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಪೊಲೀಸ್ ಇಲಾಖೆಯು ಪತ್ರಿಕಾ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು, ಸೌಲ್ಸ್‌ವಿಲ್ಲೆ ಸಮುದಾಯಕ್ಕೆ ಈ ಕಷ್ಟದ ಸಮಯದಲ್ಲಿ ನೆರವು ನೀಡುವುದಾಗಿ ಮತ್ತು ಆರೋಪಿಗಳನ್ನು ಆದಷ್ಟು ಬೇಗ ಬಂಧಿಸಲಾಗುವುದು ಎಂದು ಭರವಸೆ ನೀಡಿದೆ.
ದಕ್ಷಿಣ ಆಫ್ರಿಕಾವು ಜಗತ್ತಿನಲ್ಲಿಯೇ ಅತ್ಯಂತ ಹೆಚ್ಚು ನರಹತ್ಯೆ (Homicide) ದರಗಳನ್ನು ಹೊಂದಿರುವ ದೇಶಗಳಲ್ಲಿ ಒಂದಾಗಿದೆ. ಇತ್ತೀಚಿನ ವರದಿಯ ಪ್ರಕಾರ, ದಕ್ಷಿಣ ಆಫ್ರಿಕಾದಲ್ಲಿ 2024 ರ ಅವಧಿಯಲ್ಲಿ 26,000 ಕ್ಕೂ ಹೆಚ್ಚು ಕೊಲೆಗಳನ್ನು ದಾಖಲಿಸಲಾಗಿದೆ. ಇದರರ್ಥ ದೇಶದಲ್ಲಿ ಪ್ರತಿದಿನ ಸರಾಸರಿ 70 ಕ್ಕಿಂತ ಹೆಚ್ಚು ಕೊಲೆಗಳು ನಡೆಯುತ್ತಿವೆ.





