ನವದೆಹಲಿ: ಬಾಲಿವುಡ್ ಸುಲ್ತಾನ್ ಸಲ್ಮಾನ್ ಖಾನ್ ನಟನೆಯ ಬಹುನಿರೀಕ್ಷಿತ ಚಿತ್ರ ‘ಬ್ಯಾಟಲ್ ಆಫ್ ಗಲ್ವಾನ್’ (Battle of Galwan) ಬಿಡುಗಡೆಗೂ ಮುನ್ನವೇ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ. 2020ರಲ್ಲಿ ಲಡಾಖ್‌ನ ಗಲ್ವಾನ್ ಕಣಿವೆಯಲ್ಲಿ ನಡೆದ ಭಾರತ ಮತ್ತು ಚೀನಾ ಸೈನಿಕರ ನಡುವಿನ ಸಂಘರ್ಷವನ್ನು ಆಧರಿಸಿದ ಈ ಚಿತ್ರಕ್ಕೆ ಈಗ ಡ್ರ್ಯಾಗನ್ ರಾಷ್ಟ್ರ ಚೀನಾ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಆದರೆ, ಭಾರತ ಸರ್ಕಾರ ಚೀನಾದ ಈ ಆರೋಪಕ್ಕೆ ದಿಟ್ಟ ತಿರುಗೇಟು ನೀಡುವ ಮೂಲಕ ಚಿತ್ರತಂಡಕ್ಕೆ ಬೆಂಬಲ ನೀಡಿದೆ.
ಚೀನಾದ ಆರೋಪವೇನು?
ಗಲ್ವಾನ್ ಕಣಿವೆಯಲ್ಲಿ ನಡೆದ ನೈಜ ಘಟನೆಗಳನ್ನು ಈ ಸಿನಿಮಾದಲ್ಲಿ ತಿರುಚಲಾಗಿದೆ ಎಂದು ಚೀನಾ ಗಂಭೀರವಾಗಿ ಆರೋಪಿಸಿದೆ. ಭಾರತೀಯ ಸೈನಿಕರ ಶೌರ್ಯವನ್ನು ವೈಭವೀಕರಿಸುವ ಉದ್ದೇಶದಿಂದ ಸತ್ಯಕ್ಕೆ ದೂರವಾದ ದೃಶ್ಯಗಳನ್ನು ಚಿತ್ರಿಸಲಾಗಿದೆ ಎಂದು ಚೀನಾ ವಾದಿಸಿದೆ. ಈ ಚಿತ್ರವು ಎರಡು ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧದ ಮೇಲೆ ಪರಿಣಾಮ ಬೀರಬಹುದು ಎಂದು ಚೀನಾ ಹೇಳಿದೆ.
ಭಾರತದ ಖಡಕ್ ತಿರುಗೇಟು
ಚೀನಾದ ಈ ಆಕ್ಷೇಪಗಳಿಗೆ ಭಾರತ ಸರ್ಕಾರ ತಕ್ಕ ಉತ್ತರ ನೀಡಿದ್ದು, ಯಾವುದೇ ಒಬ್ಬ ಚಲನಚಿತ್ರ ನಿರ್ಮಾಪಕನಿಗೆ ತನ್ನ ಕಲಾತ್ಮಕ ಅಭಿವ್ಯಕ್ತಿಯ ಸ್ವಾತಂತ್ರ್ಯವಿರುತ್ತದೆ (Artistic Freedom). ಚಿತ್ರದಲ್ಲಿ ಏನನ್ನು ತೋರಿಸಬೇಕು ಎಂಬುದು ಸೃಜನಶೀಲತೆಗೆ ಬಿಟ್ಟ ವಿಚಾರ. ಇಂತಹ ಕಲಾತ್ಮಕ ವಿಷಯಗಳಲ್ಲಿ ಸರ್ಕಾರ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಈ ಮೂಲಕ ಸಲ್ಮಾನ್ ಖಾನ್ ಅವರ ಸಿನಿಮಾಗೆ ಯಾವುದೇ ಅಡ್ಡಿ ಬರದಂತೆ ಸರ್ಕಾರ ರಕ್ಷಣೆ ನೀಡಿದೆ.
ಸಂತೋಷ್ ಬಾಬು ಪಾತ್ರದಲ್ಲಿ ಸಲ್ಮಾನ್ ಖಾನ್
ಈ ಚಿತ್ರದ ಮತ್ತೊಂದು ವಿಶೇಷವೆಂದರೆ ಸಲ್ಮಾನ್ ಖಾನ್ ಅವರು ಗಲ್ವಾನ್ ಕದನದ ಹೀರೊ, ಹುತಾತ್ಮ ಕರ್ನಲ್ ಬಿಕ್ಕುಮಲ್ಲ ಸಂತೋಷ್ ಬಾಬು ಅವರ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 16ನೇ ಬಿಹಾರ್ ರೆಜಿಮೆಂಟ್‌ನ ಕಮಾಂಡಿಂಗ್ ಆಫೀಸರ್ ಆಗಿದ್ದ ಸಂತೋಷ್ ಬಾಬು ಅವರು, ಚೀನಾ ಸೈನಿಕರ ಅತಿಕ್ರಮಣವನ್ನು ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ತಮ್ಮ ಪ್ರಾಣದ ಹಂಗು ತೊರೆದು ಹೋರಾಡಿದ ಅವರು ವೀರಮರಣವನ್ನಪ್ಪಿದ್ದರು. ಅವರ ಶೌರ್ಯ ಮತ್ತು ತ್ಯಾಗದ ಕಥೆಯೇ ಈ ಸಿನಿಮಾದ ಕಥೆಯಾಗಿದೆ.
2020ರ ಜೂನ್‌ನಲ್ಲಿ ಲಡಾಖ್‌ನ ಎಲ್‌ಎಸಿ (LAC) ಬಳಿ ನಡೆದ ಈ ಸಂಘರ್ಷದಲ್ಲಿ ಭಾರತದ 20 ವೀರ ಯೋಧರು ಹುತಾತ್ಮರಾಗಿದ್ದರು. ಭಾರತವು ತನ್ನ ಸೈನಿಕರ ತ್ಯಾಗವನ್ನು ಬಹಿರಂಗವಾಗಿ ಗೌರವಿಸಿದರೆ, ಚೀನಾ ಮಾತ್ರ ತನ್ನ ಕಡೆಯ ಸಾವು-ನೋವುಗಳ ನಿಖರ ಲೆಕ್ಕವನ್ನು ನೀಡದೆ ಮುಚ್ಚಿಟ್ಟಿತ್ತು. ಈ ಕದನವು ಆಧುನಿಕ ಭಾರತದ ಇತಿಹಾಸದಲ್ಲಿ ಅತ್ಯಂತ ಮಹತ್ವದ ಘಟನೆಯಾಗಿದ್ದು, ಇದನ್ನ ಸಿನಿಮಾ ರೂಪದಲ್ಲಿ ನೋಡುವುದಕ್ಕೆ ಪ್ರೇಕ್ಷಕರು ಕೂತುಹಲದಿಂದ ಕಾದಿದ್ದಾರೆ.
