ಕಳೆದ ವಾರ ತೆರೆಕಂಡ ಪ್ರೇಮದ ಊರಲಿ ಚಿತ್ರ ಈ ವರ್ಷದ ಸರ್‌ಪ್ರೈಸ್ ಹಿಟ್ ಲಿಸ್ಟ್ ಸೇರಿದೆ. ಫ್ಯಾಮಿಲಿ ಆಡಿಯೆನ್ಸ್ ಅಚ್ಚುಮೆಚ್ಚಿನ ಸಿನಿಮಾ ಆಗಿ ಹೊರಹೊಮ್ಮಿರೋ ಇದು, ಆನ್ ಡಿಮ್ಯಾಂಡ್ ಬರೋಬ್ಬರಿ 70 ಶೋಗಳನ್ನ ಹೆಚ್ಚಿಸಿಕೊಂಡಿದೆ. ಪ್ರಮೋಷನ್‌ನಿಂದ ಎಮೋಷನ್ ಮುಖ್ಯ ಅನ್ನೋದನ್ನ ತೋರಿಸಿರೋ ಈ ಸಿನಿಮಾ, ಎಲ್ಲೆಡೆ ಹೌಸ್‌ಫುಲ್.. ಹೌಸ್‌ಫುಲ್.. ಹೌಸ್‌ಫುಲ್.
ದಿಢೀರ್ 70 ಸ್ಕ್ರೀನ್ಸ್ ಹೆಚ್ಚಳ.. ಫ್ಯಾಮಿಲಿ ಆಡಿಯೆನ್ಸ್ ಫಿದಾ..!
ನ್ಯಾಷನಲ್ ಅವಾರ್ಡ್ ವಿನ್ನಿಂಗ್ ಡೈರೆಕ್ಟರ್‌ನ ಭಾವ ಯಾನ..!
ಶ್ರೀರಾಮ್, ತಪಸ್ವಿನಿ, ರಮಿಕಾ ಶಿವು, ರಂಗಾಯಣ ರಘು ರಾಕ್ಸ್
ಚಿತ್ರಮಂದಿರಗಳಿಗೆ ಪ್ರೇಕ್ಷಕರು ಬರ್ತಿಲ್ಲ ಅನ್ನೋ ಮಾತುಗಳ ನಡುವೆಯೇ, ಕಳೆದ ವಾರ ತೆರೆಕಂಡ ಕೌಟುಂಬಿಕ ಕಥಾಹಂದರದ ಪ್ರೇಮದ ಊರಲಿ ಸಿನಿಮಾ ರಾಜ್ಯಾದ್ಯಂತ ಭರ್ಜರಿ ಹೌಸ್‌ಫುಲ್ ಪ್ರದರ್ಶನ ಕಾಣ್ತಿದೆ. ದಿನದಿಂದ ದಿನಕ್ಕೆ ಪ್ರೇಕ್ಷಕರ ಸಂಖ್ಯೆ ಹೆಚ್ಚುತ್ತಿದ್ದು, ಚಿತ್ರಕ್ಕೆ ಅಭೂತಪೂರ್ವ ಪ್ರಶಂಸೆ ಹಾಗೂ ಪ್ರತಿಕ್ರಿಯೆಗಳು ವ್ಯಕ್ತವಾಗ್ತಿವೆ. ಇಂಟರೆಸ್ಟಿಂಗ್ ಅಂದ್ರೆ ಈ ಸಿನಿಮಾ ಬಿಡುಗಡೆ ಬಳಿಕ ಪ್ರೇಕ್ಷಕರ ಡಿಮ್ಯಾಂಡ್ ಮೇರೆಗೆ ಸುಮಾರು 70 ಪ್ಲಸ್ ಶೋಗಳನ್ನ ಹೆಚ್ಚಿಸಲಾಗಿದೆ. ಇದು ನಿಜಕ್ಕೂ ಒಂದು ಒಳ್ಳೆಯ ಪ್ರಯತ್ನಕ್ಕೆ ಸಿಕ್ಕ ಫಲ ಅಂದ್ರೆ ತಪ್ಪಾಗಲ್ಲ.
ಅಕ್ಷಿ ಸಿನಿಮಾಗಾಗಿ ನ್ಯಾಷನಲ್ ಅವಾರ್ಡ್ ಪಡೆದಿದ್ದ ನಿರ್ದೇಶಕ ಮನೋಜ್ ಕುಮಾರ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು.. ಒಂದು ಸರಳ, ಸುಂದರ ಹಾಗೂ ಭಾವನಾತ್ಮಕ ಹಳ್ಳಿ ಸೊಗಡಿನ ಕಥೆಯಾಗಿದೆ. ಹಚ್ಚಹಸಿರಿನ ಗ್ರಾಮೀಣ ಪರಿಸರದಲ್ಲಿ ಸಾಗುವ ಈ ಸಿನಿಮಾ, ಸಂಕೀರ್ಣ ಕೌಟುಂಬಿಕ ಸಂಬಂಧಗಳು, ಮನುಷ್ಯತ್ವ ಮತ್ತು ಮುಗ್ಧ ಪ್ರೀತಿಯ ಸೂಕ್ಷ್ಮ ಎಳೆಗಳನ್ನು ಅದ್ಭುತವಾಗಿ ತೆರೆದಿಟ್ಟಿದೆ. ಇಂದಿನ ವೈಭವೋಪೇತ ಆ್ಯಕ್ಷನ್ ಸಿನಿಮಾಗಳ ನಡುವೆ, ಪ್ರೇಕ್ಷಕರ ಮನಸ್ಸಿಗೆ ಆಪ್ತವಾಗುವ ಒಂದು ಪರಿಪೂರ್ಣ ಫೀಲ್ ಗುಡ್ ಮೂವಿಯಾಗಿ ಗಮನ ಸೆಳೆಯುತ್ತಿದೆ.
ಶ್ರೀರಾಮ್ ಲೀಡ್‌ನಲ್ಲಿ ನಟಿಸಿದ್ದು, ಅವರೊಟ್ಟಿಗೆ ನಾಯಕಿಯರಾಗಿ ರಮಿಕಾ ಶಿವು ಮತ್ತು ತಪಸ್ವಿನಿ ಪೂಣಚ್ಚ ತಮ್ಮ ಸಹಜ ನಟನೆಯ ಮೂಲಕ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಹಿರಿಯ ನಟ ರಂಗಾಯಣ ರಘು ಕೌಟುಂಬಿಕ ಬಿಕ್ಕಟ್ಟಿನ ಭಾವನಾತ್ಮಕ ಸನ್ನಿವೇಶಗಳನ್ನು ಅತ್ಯಂತ ಪ್ರಬುದ್ಧವಾಗಿ ನಿಭಾಯಿಸಿ, ಚಿತ್ರದ ತೂಕವನ್ನು ಹೆಚ್ಚಿಸಿದ್ದಾರೆ. ಜೊತೆಗೆ ಸುನಾದ್ ಗೌತಮ್ ಸುಮಧುರ ಸಂಗೀತ ಹಾಗೂ ಹಿನ್ನೆಲೆ ಸಂಗೀತ ಚಿತ್ರದ ಜೀವಾಳವಾಗಿದ್ದು, ರಾಜ್‌ಕಾಂತ್ ಕ್ಯಾಮೆರಾ ಕೈಚಳಕದಲ್ಲಿ ಹಳ್ಳಿಯ ಹಸಿರು ಗದ್ದೆಗಳ ಸೊಬಗು ಕಣ್ಮನ ಸೆಳೆಯುವಂತಿದೆ.
ಕಲ್ಲು ನೆಟ್ರೆ ಸಮಾಧಿ ಆಯ್ತದೆ. ಗಿಡ ನೆಟ್ರೆ ಉಸಿರಾಯ್ತದೆ. ಮರವಾಗಿ ಬೆಳೆದು ಹಣ್ಣು, ನೆರಳು ಕೊಡ್ತದೆ. ನನ್ನ ಉಸಿರಲ್ಲಿ ಉಸಿರಾಗಿರ್ತದೆ.. ಹೀಗಂತ ಹೇಳ್ತಾ ತನ್ನ ಪತ್ನಿಯ ಸಮಾಧಿ ಬಳಿ ಗಿಡ ನೆಡುತ್ತಾ ಹೇಳುವ ನಾಗಣ್ಣ. ಮರು ಮದುವೆ ಆಗದೆ ಮಗನೇ ಸರ್ವಸ್ವ ಅಂತ ಬದುಕೋ ಆ ಭಾವ ಜೀವಿಯಿಂದ ತಂದೆ-ಮಗನ ಬಾಂಧವ್ಯ ಹೊರಹೊಮ್ಮಿದೆ. ಇಲ್ಲಿ ತಂದೆಯ ಕನಸು, ತ್ಯಾಗ, ಕರುಣೆ, ಸಹಾನುಭೂತಿ, ಕರುಣೆ, ಕಾಳಜಿ, ಪ್ರೀತಿ, ಜವಾಬ್ದಾರಿ ಎಲ್ಲವೂ ಕಾಣಸಿಗುತ್ತೆ. ಇಬ್ಬರು ನಾಯಕಿಯರು ಹಾಗೂ ನಾಯಕನ ನಡುವೆ ಟ್ರಯಾಂಗಲ್ ಲವ್ ಸ್ಟೋರಿಯಿದೆ. ರೈತನಿಗೆ ಹೆಣ್ಣು ಸಿಗಲ್ಲ ಅನ್ನೋ ಕಾನ್ಸೆಪ್ಟ್ ಕೂಡ ಬಹಳ ಸೊಗಸಾಗಿ ತೆರೆಮೇಲೆ ಮೂಡಿದೆ.
ಒಟ್ಟಾರೆ ಕಣ್ಣಲ್ಲಿ ನೋಡಲಾಗದ ಅಥ್ವಾ ನೋಡೋಕೆ ಜನನೇ ಬರ್ತಿಲ್ಲ ಅನ್ನೋ ಸಿನಿಮಾಗಳ ನಡುವೆ ಹೀಗೆ ಕಾಡುವ ಸಿನಿಮಾವೊಂದು ಎಲ್ಲೆಡೆ ಹೌಸ್‌ಫುಲ್ ಪ್ರದರ್ಶನ ಕಾಣ್ತಿರೋದು.. ಆರ್ಗ್ಯಾನಿಕ್ ಆಗಿ ಈ ವರ್ಷದ ಫ್ಯಾಮಿಲಿ ಹಿಟ್ ಅನಿಸಿಕೊಳ್ತಿರೋದು ಖುಷಿಯ ವಿಚಾರ. ಸಿಟಿಲೈಟ್ಸ್ ಜೊತೆ ಪ್ರೇಮದ ಊರಲಿ ಕೂಡ ಪ್ರೇಕ್ಷಕರ ಪ್ರೀತಿಗೆ ಪಾತ್ರವಾಗಿರೋದು ಗ್ರೇಟ್
