ರಾಜಮೌಳಿ-ಸೂರ್ಯ ಸಿನಿಮಾ ಯಾವಾಗ..? ‘ಜಕ್ಕಣ್ಣ’ ಕೊಟ್ಟ ಉತ್ತರವೇನು?

Your paragraph text (28)

ನಟ ಸೂರ್ಯ ಜೊತೆ ರಾಜಮೌಳಿ ಸಿನಿಮಾ ಮಾಡೋದು ಯಾವಾಗ..? ಡೋಂಟ್ ಟ್ರಬಲ್ ದಿ ಟ್ರಬಲ್ ಇವೆಂಟ್‌ನಲ್ಲಿ ಜಕ್ಕಣ್ಣ ಕೊಟ್ಟ ಆ ಜಾಣತನದ ಉತ್ತರವೇನು..? ‘ಸಿಂಗಂ’ ಸೂರ್ಯ ವೇದಿಕೆ ಮೇಲೆ ಮಾಡಿದ್ದಾದ್ರೂ ಏನು..? ರಾಜಮೌಳಿ-ಸೂರ್ಯ ಕಾಂಬಿನೇಷನ್‌ ಸಿನಿಮಾ ಬರೋದು ಯಾವಾಗ..?

ಮೌಳಿ-ಸೂರ್ಯ ಫಿಲ್ಮ್ ಯಾವಾಗ..? ಜಕ್ಕಣ್ಣ ಜಾಣತನದ ಉತ್ತರ

2 ಚಿತ್ರ ರಿಜೆಕ್ಟ್.. ನಾನು ತಪ್ಪು ಮಾಡಿದ್ದೇನೆ ಎಂದ ಸಿಂಗಂ ಸೂರ್ಯ

ರಾಜಮೌಳಿ ಪ್ಯಾನ್ ಇಂಡಿಯಾ ಕಾನ್ಸೆಪ್ಟ್‌ಗೆ ಸೂರ್ಯನೇ ಸ್ಫೂರ್ತಿ

ಎರಡು ಚಾನ್ಸ್ ಮಿಸ್.. ಮೂರನೇ ಸಿನಿಮಾ ಕುದುರೋದು ಪಕ್ಕಾ..!

ಭಾರತೀಯ ಚಿತ್ರರಂಗದ ಮಾಸ್ಟರ್ ಮೈಂಡ್ ನಿರ್ದೇಶಕ ಎಸ್.ಎಸ್. ರಾಜಮೌಳಿ ಹಾಗೂ ತಮಿಳಿನ ವರ್ಸಟೈಲ್ ನಟ ಸೂರ್ಯ ಕಾಂಬಿನೇಷನ್‌ನಲ್ಲಿ ಒಂದು ಸಿನಿಮಾ ಬರಬೇಕು ಎನ್ನುವುದು ದಶಕಗಳಿಂದ ಕೋಟ್ಯಂತರ ಅಭಿಮಾನಿಗಳ ಕನಸು. ಇತ್ತೀಚೆಗೆ ನಡೆದ ಡೋಂಟ್ ಟ್ರಬಲ್ ದಿ ಟ್ರಬಲ್ ಸಿನಿಮಾದ ಪ್ರೀ-ರಿಲೀಸ್ ಈವೆಂಟ್‌ನಲ್ಲಿ ಈ ಸಸ್ಪೆನ್ಸ್ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಕಾರ್ಯಕ್ರಮದಲ್ಲಿ ನಿರೂಪಕಿ ನೇರವಾಗಿಯೇ ಸೂರ್ಯ ಅವರ ಜೊತೆ ನಿಮ್ಮ ಸಿನಿಮಾ ಯಾವಾಗ? ಎಂದು ರಾಜಮೌಳಿ ಅವರನ್ನು ಕೇಳಿದಾಗ, ಜಕ್ಕಣ್ಣ ತಮ್ಮದೇ ಶೈಲಿಯಲ್ಲಿ ಅತ್ಯಂತ ಜಾಣತನದ ಉತ್ತರ ನೀಡಿ ಇಡೀ ಸಭೆಯ ಚಪ್ಪಾಳೆ ಗಿಟ್ಟಿಸಿಕೊಂಡಿದ್ದಾರೆ.

ನನಗೆ ಈ ಪ್ರಶ್ನೆ ಎದುರಾಗುತ್ತದೆ ಎಂದು ಮೊದಲೇ ತಿಳಿದಿತ್ತು, ಅದಕ್ಕಾಗಿ ಉತ್ತರ ಸಿದ್ಧಪಡಿಸಿಕೊಂಡೇ ಬಂದಿದ್ದೇನೆ ಎಂದು ನಗುತ್ತಲೇ ಮಾತು ಆರಂಭಿಸಿದ ರಾಜಮೌಳಿ, ನಾವು ಇಲ್ಲಿಗೆ ಬಂದಿರುವುದು ಡೋಂಟ್ ಟ್ರಬಲ್ ದಿ ಟ್ರಬಲ್ ಸಿನಿಮಾ ಪ್ರಚಾರಕ್ಕೆ. ನಾನು ಈಗ ಸೂರ್ಯ ಹಾಗೂ ನನ್ನ ಕಾಂಬಿನೇಷನ್ ಬಗ್ಗೆ ಏನಾದರೂ ಮಾತನಾಡಿದರೆ, ಅದೇ ಹೆಡ್‌ಲೈನ್ ಆಗಿ ಈ ಸಿನಿಮಾ ಹಿನ್ನೆಲೆಗೆ ಸರಿದುಬಿಡುತ್ತದೆ. ಅದಕ್ಕೆ ನಾನು ಅವಕಾಶ ಕೊಡಲ್ಲ ಎಂದು ಉತ್ತರಿಸಿದರು. ಆದರೆ, ಇದೇ ವೇಳೆ ನಾವು ಒಂದಾಗಿ ಸಿನಿಮಾ ಮಾಡಿದರೆ ಅದು ಖಂಡಿತ ಅತ್ಯಂತ ಸ್ಪೆಷಲ್ ಆಗಿರಲಿದೆ ಎಂಬ ಭರವಸೆಯನ್ನೂ ನೀಡಿದರು. ರಾಜಮೌಳಿ ಅವರ ಈ ಸ್ಪಾಂಟೇನಿಯಸ್ ಉತ್ತರಕ್ಕೆ ಎದುರಿಗೇ ಇದ್ದ ಸಿಂಗಂ ಸೂರ್ಯ ಹಾಗೂ ಪ್ರೇಕ್ಷಕರು ಜೋರಾಗಿ ಚಪ್ಪಾಳೆ ತಟ್ಟಿ ಸಂಭ್ರಮಿಸಿದರು.

ಇದೇ ವೇದಿಕೆಯಲ್ಲಿ ಮಾತನಾಡಿದ ನಟ ಸೂರ್ಯ, ರಾಜಮೌಳಿ ಜೊತೆ ಸಿನಿಮಾ ಮಿಸ್ ಮಾಡಿಕೊಂಡಿದ್ದರ ಬಗ್ಗೆ ಪ್ರಾಮಾಣಿಕವಾಗಿ ಮಾತನಾಡಿದರು. ನಾನು ಈ ಹಿಂದೆಯೂ ತಪ್ಪು ಮಾಡಿದ್ದೆ, ಈಗಲೂ ತಪ್ಪುಗಳನ್ನು ಮಾಡುತ್ತಲೇ ಇದ್ದೇನೆ, ಎನ್ನುತ್ತಾ ರಾಜಮೌಳಿ ಅವರಂತಹ  ನಿರ್ದೇಶಕರ ಕಾಂಬಿನೇಷನ್ ಸಿನಿಮಾಗಳನ್ನು ರಿಜೆಕ್ಟ್ ಮಾಡಿದ್ದನ್ನು ನೆನೆದು ನಕ್ಕರು. ಪ್ರಸ್ತುತ ಮಹೇಶ್ ಬಾಬು, ಪ್ರಿಯಾಂಕಾ ಚೋಪ್ರಾ ಹಾಗೂ ಪೃಥ್ವಿರಾಜ್ ಸುಕುಮಾರನ್ ಅಭಿನಯದ ವಾರಣಾಸಿ ಸಿನಿಮಾದ ಶೂಟಿಂಗ್ ಪೂರ್ಣಗೊಳಿಸಿ ರಿಲೀಸ್‌ಗೆ ಸಜ್ಜಾಗುತ್ತಿರುವ ರಾಜಮೌಳಿ ಜೊತೆ ಕೆಲಸ ಮಾಡಲು ತಾವೂ ಕಾತುರದಿಂದ ಕಾಯುತ್ತಿರುವುದಾಗಿ ಸೂರ್ಯ ಬಹಿರಂಗಪಡಿಸಿದರು.

ಅಂದಹಾಗೆ, ಈ ಇಬ್ಬರ ನಡುವೆ ಸುದೀರ್ಘಾವಧಿಯ ಒಡನಾಟ ಹಾಗೂ ಪರಸ್ಪರ ಗೌರವವಿದೆ. ರಾಜಮೌಳಿ ಅವರ ಆಲ್-ಟೈಮ್ ಬ್ಲಾಕ್‌ಬಸ್ಟರ್ ಮಗಧೀರ ಕಥೆಯನ್ನು ಮೊದಲು ಸೂರ್ಯ ಅವರನ್ನೇ ಮನಸ್ಸಿನಲ್ಲಿಟ್ಟುಕೊಂಡು ಸಿದ್ಧಪಡಿಸಲಾಗಿತ್ತು ಎಂಬುದನ್ನು ರಾಮ್ ಚರಣ್ ಕೂಡ ಒಪ್ಪಿಕೊಂಡಿದ್ದರು. ಅಷ್ಟೇ ಅಲ್ಲದೆ, ಬಾಹುಬಲಿ ಚಿತ್ರದ ಒಂದು ಪ್ರಮುಖ ಪಾತ್ರಕ್ಕೂ ಸೂರ್ಯ ಅವರನ್ನು ಸಂಪರ್ಕಿಸಲಾಗಿತ್ತು. ಆದರೆ, ಕೆಲವು ವೈಯಕ್ತಿಕ ಕಾರಣಗಳಿಂದ ಮತ್ತು ಪಾತ್ರದ ಕನೆಕ್ಟಿವಿಟಿ ಸಿಗದಿದ್ದರಿಂದ ಸೂರ್ಯ ಈ ಎರಡೂ ಮೆಗಾ ಪ್ರಾಜೆಕ್ಟ್‌ಗಳನ್ನು ನಿರಾಕರಿಸಬೇಕಾಯಿತು.

ಮತ್ತೊಂದೆಡೆ, ರಾಜಮೌಳಿ ಅವರಿಗೆ ಪ್ಯಾನ್ ಇಂಡಿಯಾ ಸಿನಿಮಾ ಮಾಡುವ ಐಡಿಯಾ ಬರಲು ಸೂರ್ಯ ಅವರೇ ಮೂಲ ಸ್ಪೂರ್ತಿಯಂತೆ ಹೀಗೆಂದು ರಾಜಮೌಳಿ ಕಂಗುವ ಇವೆಂಟ್‌ನಲ್ಲಿ ಹೇಳಿಕೊಂಡಿದರು.

2005ರಲ್ಲಿ ಸೂರ್ಯ ನಟನೆಯ ಗಜಿನಿ ಸಿನಿಮಾ ರಿಲೀಸ್ ಆದಾಗ, ಅವರು ಆಂಧ್ರ ಹಾಗೂ ತೆಲಂಗಾಣದ ಮೂಲೆ ಮೂಲೆಗೂ ಹೋಗಿ ಮಾಡಿದ ಪ್ರಚಾರ ಶೈಲಿಯನ್ನು ರಾಜಮೌಳಿ ಕೇಸ್ ಸ್ಟಡಿ ತರಹ ನೋಡಿದ್ದರು. ಬೇರೆ ಭಾಷೆಯ ಪ್ರೇಕ್ಷಕರನ್ನು ತಲುಪಲು ಸೂರ್ಯ ಪಟ್ಟ ಶ್ರಮವೇ ತಮಗೆ ಬಾಹುಬಲಿಯನ್ನು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮಾಡಲು ಪ್ರೇರಣೆಯಾಯಿತು ಎಂದು ರಾಜಮೌಳಿ ಮುಕ್ತವಾಗಿ ಒಪ್ಪಿಕೊಂಡಿದ್ದಾರೆ. ಮಿಸ್ ಆದ ಆ ಎರಡು ಐಕಾನಿಕ್ ಸಿನಿಮಾಗಳ ನಂತರ, ಈಗಲಾದರೂ ಈ ಇಬ್ಬರು ದಿಗ್ಗಜರು ಒಂದಾಗಲಿ ಎಂಬುದೇ ಭಾರತೀಯ ಸಿನಿಮಾ ಪ್ರೇಕ್ಷಕರ ಬಿಗ್ ಡ್ರೀಮ್.

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್

Exit mobile version