ರಾವಲಕೋಟ್ (ಜುಲೈ 28): ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ಪ್ರದೇಶದಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಯ ನಡುವೆಯೇ ಪರಿಸ್ಥಿತಿ ಮತ್ತಷ್ಟು ಉದ್ವಿಗ್ನಗೊಂಡಿದೆ. ಚುನಾವಣೆಯನ್ನು ಬಹಿಷ್ಕರಿಸುವಂತೆ ಕರೆ ನೀಡಿದ್ದ ಪ್ರತಿಭಟನಾಕಾರರ ಮೇಲೆ ಪಾಕಿಸ್ತಾನಿ ಭದ್ರತಾ ಪಡೆಗಳು ಗುಂಡಿನ ದಾಳಿ ನಡೆಸಿವೆ ಎಂಬ ಗಂಭೀರ ಆರೋಪಗಳು ಕೇಳಿಬಂದಿದ್ದು, ಕಳೆದ 24 ಗಂಟೆಗಳಲ್ಲಿ ಕನಿಷ್ಠ 20 ಮಂದಿ ಮೃತಪಟ್ಟಿದ್ದಾರೆ ಹಾಗೂ 50ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ.
ಜಂಟಿ ಅವಾಮಿ ಕ್ರಿಯಾ ಸಮಿತಿ (ಜೆಎಎಸಿ) ನೇತೃತ್ವದ ಪ್ರತಿಭಟನಾ ಮೆರವಣಿಗೆಯ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎಂದು ವರದಿಗಳು ತಿಳಿಸಿದೆ. ಚುನಾವಣೆ ಬಹಿಷ್ಕಾರಕ್ಕೆ ಕರೆ ನೀಡುತ್ತಿದ್ದ ಜಂಟಿ ಅವಾಮಿ ಕ್ರಿಯಾ ಸಮಿತಿ (JAAC) ಸದಸ್ಯರನ್ನು ಗುರಿಯಾಗಿಸಿಕೊಂಡು ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸಿವೆ ಎಂಬ ಆರೋಪ ಕೇಳಿಬಂದಿದೆ. ಮೂಲಗಳ ಪ್ರಕಾರ, ಜೆಎಎಸಿ ಕೋರ್ ಕಮಿಟಿ ಸದಸ್ಯ ಹಾಗೂ ವಕ್ತಾರ ಉಮರ್ ನಜೀರ್ ಕಾಶ್ಮೀರಿ ಅವರ ಸಹೋದರ ಉಸ್ಮಾನ್ ನಜೀರ್ ಸೇರಿದಂತೆ ಹಲವು ಮಂದಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ವರದಿಗಳ ಪ್ರಕಾರ, ಈ ವರ್ಷ ಜೂನ್ 5ರಿಂದ ಪಿಒಕೆಯಲ್ಲಿ ಆರಂಭವಾದ ಪ್ರತಿಭಟನೆಗಳ ಬಳಿಕ ಮೃತಪಟ್ಟವರ ಸಂಖ್ಯೆ 80ಕ್ಕೆ ಏರಿದೆ ಎಂದು ಪ್ರತಿಭಟನಾ ಸಂಘಟನೆಗಳು ಆರೋಪಿಸಿವೆ. ಆದರೆ ಈ ಅಂಕಿಅಂಶಗಳಿಗೆ ಅಧಿಕೃತ ದೃಢೀಕರಣ ಇನ್ನೂ ದೊರೆತಿಲ್ಲ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಕೆಲವು ವಿಡಿಯೊಗಳಲ್ಲಿ ರಸ್ತೆಗಳ ಮೇಲೆ ಮೃತದೇಹಗಳು ಹಾಗೂ ಗಾಯಾಳುಗಳು ಕಾಣಿಸುತ್ತಿರುವ ದೃಶ್ಯಗಳು ವೈರಲ್ ಆಗಿವೆ. ಪಿಒಕೆಯ ಸಾಮಾಜಿಕ ಮಾಧ್ಯಮ ಬಿಡುಗಡೆ ಮಾಡಿದ ವಿಡಿಯೊ ಸಂದೇಶದಲ್ಲಿ, “ಪರಿಸ್ಥಿತಿ ಅತ್ಯಂತ ಭೀಕರವಾಗಿದೆ. ಅನೇಕ ಜನರು ಸಾವನ್ನಪ್ಪಿದ್ದು, ಅಂತರರಾಷ್ಟ್ರೀಯ ಸಮುದಾಯ ನಮ್ಮ ಬೆಂಬಲಕ್ಕೆ ಬರಬೇಕು” ಎಂದು ಮನವಿ ಮಾಡಿದ್ದಾರೆ.
ಚುನಾವಣೆ ಪ್ರಕ್ರಿಯೆ ಆರಂಭವಾದ ಬೆನ್ನಲ್ಲೇ ಪಾಕಿಸ್ತಾನ ಸರ್ಕಾರ ಸುಮಾರು 14,000ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಯನ್ನು ಪಿಒಕೆಗೆ ನಿಯೋಜಿಸಿದೆ ಎಂದು ವರದಿಯಾಗಿದೆ. ಹಲವೆಡೆ ಸ್ನೈಪರ್‌ಗಳನ್ನು ನಿಯೋಜಿಸಲಾಗಿದ್ದು, ಪ್ರತಿಭಟನಾಕಾರರನ್ನು ಚದುರಿಸಲು ಗುಂಡುಗಳು ಮತ್ತು ಅಶ್ರುವಾಯು ಶೆಲ್‌ಗಳನ್ನು ಬಳಸಲಾಗಿದೆ ಎಂದು ವದರಿಗಳು ತಿಳಿಸಿದೆ.
ಇದೇ ವೇಳೆ, ಪ್ರತಿಭಟನೆಗಳು ತೀವ್ರಗೊಂಡ ಹಿನ್ನೆಲೆಯಲ್ಲಿ ಹಲವು ಪ್ರದೇಶಗಳಲ್ಲಿ ಇಂಟರ್ನೆಟ್ ಹಾಗೂ ಮೊಬೈಲ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಕೆಲವು ಭಾಗಗಳಲ್ಲಿ ವಿದ್ಯುತ್ ಮತ್ತು ಕುಡಿಯುವ ನೀರಿನ ಪೂರೈಕೆಯಲ್ಲೂ ವ್ಯತ್ಯಯ ಉಂಟಾಗಿದೆ ಎಂದು ವರದಿಗಳು ತಿಳಿಸಿವೆ.
ಪಿಒಕೆ ವಿಧಾನಸಭೆಯ 53 ಸ್ಥಾನಗಳಲ್ಲಿ 45 ಸ್ಥಾನಗಳಿಗೆ ಮೂರು ಹಂತಗಳಲ್ಲಿ ಚುನಾವಣೆ ನಡೆಯುತ್ತಿದೆ. ಮೊದಲ ಹಂತದ ಮತದಾನ ಈಗಾಗಲೇ ಪೂರ್ಣಗೊಂಡಿದ್ದು, ಉಳಿದ ಹಂತಗಳ ಮತದಾನ ಆಗಸ್ಟ್ 2 ಮತ್ತು ಆಗಸ್ಟ್ 10ರಂದು ನಡೆಯಲಿದೆ. ಈ ನಡುವೆ ಹಿಂಸಾಚಾರ ಮತ್ತು ಭದ್ರತಾ ಪರಿಸ್ಥಿತಿ ಚುನಾವಣೆಯ ಮೇಲೆಯೇ ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ.





