ಇಸ್ಲಾಮಾಬಾದ್: ಪಾಕಿಸ್ತಾನದಲ್ಲೂ ಮರುನಾಮಕರಣದ ‘ಹವಾ’ ಇದೀಗ ಜೋರಾಗಿದೆ. ಪಾಕಿಸ್ತಾನದ ಪಂಜಾಬ್ ಸರ್ಕಾರ ಲಾಹೋರ್ ಮತ್ತು ಅದರ ಸುತ್ತಮುತ್ತಲಿನ ಹಲವಾರು ಐತಿಹಾಸಿಕ ಪ್ರದೇಶಗಳಿಗೆ ಹಳೆಯ ಹೆಸರುಗಳನ್ನು ಮರುಸ್ಥಾಪಿಸಲು ಮುಂದಾಗಿದೆ. ಈ ಕ್ರಮವು ರಾಜಕೀಯ ವಲಯಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಪಂಜಾಬ್ ಮುಖ್ಯಮಂತ್ರಿ ಮರ್ಯಮ್ ನವಾಜ್ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಧಾರಕ್ಕೆ ಅನುಮೋದನೆ ನೀಡಲಾಗಿದೆ. ಲಾಹೋರ್ ನಗರದ ಐತಿಹಾಸಿಕ ಗುರುತು ಮತ್ತು ಬಹುಸಂಸ್ಕೃತಿಯ ಪರಂಪರೆಯನ್ನು ಪುನರುಜ್ಜೀವನಗೊಳಿಸುವ ಉದ್ದೇಶದಿಂದ ಈ ಯೋಜನೆ ಜಾರಿಗೆ ತರಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಉಪಕ್ರಮದ ಹಿಂದೆ ಮಾಜಿ ಪ್ರಧಾನಿ ನವಾಜ್ ಷರೀಫ್ ಪ್ರಮುಖ ಪಾತ್ರವಹಿಸಿದ್ದಾರೆ ಎನ್ನಲಾಗಿದೆ. ಲಾಹೋರ್ ಹೆರಿಟೇಜ್ ಏರಿಯಾಸ್ ರಿವೈವಲ್ ಯೋಜನೆಯ ಭಾಗವಾಗಿ ನಗರದ ಹಲವಾರು ಹಳೆಯ ಬೀದಿಗಳು, ರಸ್ತೆ ಮತ್ತು ಪ್ರದೇಶಗಳ ಮೂಲ ಹೆಸರುಗಳನ್ನು ಮತ್ತೆ ಅಧಿಕೃತವಾಗಿ ಬಳಕೆಗೆ ತರಲು ಸರ್ಕಾರ ಮುಂದಾಗಿದೆ.
ಈ ಮರುನಾಮಕರಣದಲ್ಲಿ ‘ಇಸ್ಲಾಂಪುರ’ ಹೆಸರು ಹೆಚ್ಚು ಗಮನ ಸೆಳೆದಿದೆ. ಇದನ್ನು ಈಗ ಮತ್ತೆ ‘ಕೃಷ್ಣನಗರ’ ಎಂದು ಕರೆಯಲಾಗುತ್ತಿದೆ. ಇದೇ ರೀತಿ ‘ಬಾಬರಿ ಮಸೀದಿ ಚೌಕ್’ ಅನ್ನು ‘ಜೈನ್ ಮಂದಿರ್ ಚೌಕ್’ ಎಂದು ಮರುನಾಮಕರಣ ಮಾಡಲಾಗಿದೆ. ಇದಲ್ಲದೆ ಲಕ್ಷ್ಮಿ ಚೌಕ್, ಸಂತನಗರ, ಧರ್ಮಪುರ, ಮೋಹನ್ ಲಾಲ್ ಬಜಾರ್, ಭಗವಾನ್ ಪುರ, ಶಾಂತಿ ನಗರ, ಟೆಂಪಲ್ ಸ್ಟ್ರೀಟ್, ರಾಮ್ ಗಲಿ ಸೇರಿದಂತೆ ಅನೇಕ ಪ್ರದೇಶಗಳ ಹಳೆಯ ಹೆಸರುಗಳನ್ನು ಪುನಃಸ್ಥಾಪಿಸಲಾಗುತ್ತಿದೆ.
ಇದಕ್ಕೂ ಮೊದಲು ದಶಕಗಳ ಹಿಂದೆ ಬ್ರಿಟಿಷ್ ಯುಗದ ಹಾಗೂ ಹಿಂದೂ-ಸಿಖ್ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಹೆಸರುಗಳನ್ನು ಬದಲಿಸಿ ಇಸ್ಲಾಮಿಕ್ ಅಥವಾ ಸ್ಥಳೀಯ ರಾಜಕೀಯ ವ್ಯಕ್ತಿಗಳ ಹೆಸರನ್ನು ಇಡಲಾಗಿತ್ತು. ಆದರೆ ಇದೀಗ ಲಾಹೋರ್‌ನ ಮೂಲ ಐತಿಹಾಸಿಕ ಸ್ವರೂಪವನ್ನು ಮರಳಿ ತರುವ ನಿಟ್ಟಿನಲ್ಲಿ ಸರ್ಕಾರ ಈ ಹೆಜ್ಜೆ ಇಟ್ಟಿದೆ.
ಈ ಕ್ರಮವನ್ನು ಸ್ಥಳೀಯ ನಿವಾಸಿಗಳು, ಇತಿಹಾಸಕಾರರು ಮತ್ತು ವಿದ್ವಾಂಸರು ಸ್ವಾಗತಿಸಿದ್ದಾರೆ. ಬೀಕನ್‌ಹೌಸ್ ನ್ಯಾಷನಲ್ ಯೂನಿವರ್ಸಿಟಿಯ ಉಪನ್ಯಾಸಕ ಸಾದ್ ಮಲಿಕ್ ಮಾತನಾಡಿ, “ಸರ್ಕಾರ ಅಧಿಕೃತವಾಗಿ ಹೆಸರುಗಳನ್ನು ಬದಲಿಸಿದ್ದರೂ, ಲಾಹೋರ್ ಜನರು ತಲೆಮಾರುಗಳಿಂದಲೂ ಮೂಲ ಹೆಸರನ್ನೇ ಬಳಸುತ್ತಿದ್ದರು. ಈಗ ಸರ್ಕಾರವೂ ಅದನ್ನು ಮಾನ್ಯತೆ ನೀಡುತ್ತಿದೆ” ಎಂದು ಹೇಳಿದ್ದಾರೆ.
ಧಾರ್ಮಿಕ ವಿದ್ವಾಂಸ ಮೌಲಾನಾ ವಾಜಿದ್ ಖಾದ್ರಿಯವರೂ ಈ ಕ್ರಮವನ್ನು ಬೆಂಬಲಿಸಿದ್ದಾರೆ. “ಐತಿಹಾಸಿಕ ಹೆಸರುಗಳನ್ನು ಮರುಸ್ಥಾಪಿಸುವುದರಿಂದ ಧರ್ಮಕ್ಕೆ ಯಾವುದೇ ಧಕ್ಕೆಯಾಗುವುದಿಲ್ಲ. 1990ರ ದಶಕದಲ್ಲಿ ನಡೆದ ಕೆಲವು ಮರುನಾಮಕರಣಗಳು ರಾಜಕೀಯ ಉದ್ದೇಶದಿಂದ ಪ್ರೇರಿತವಾಗಿದ್ದವು” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಇದರ ಜೊತೆಗೆ ಲಾಹೋರ್‌ನ ಮಿಂಟೋ ಪಾರ್ಕ್‌ನಲ್ಲಿದ್ದ ಮೂರು ಕ್ರಿಕೆಟ್ ಮೈದಾನಗಳು ಮತ್ತು ಸಾಂಪ್ರದಾಯಿಕ ಕುಸ್ತಿ ಕ್ರೀಡಾಂಗಣವನ್ನು ಪುನಃಸ್ಥಾಪಿಸುವ ಪ್ರಸ್ತಾವವನ್ನೂ ನವಾಜ್ ಷರೀಫ್ ಮಾಡಿದ್ದಾರೆ. ಈ ಕ್ರೀಡಾಂಗಣಗಳು ಒಮ್ಮೆ ಗಾಮಾ ಪೆಹಲ್ವಾನ್, ಗೂಂಗಾ ಪೆಹಲ್ವಾನ್ ಹಾಗೂ ಇಮಾಮ್ ಬಕ್ಷ್‌ರಂತಹ ದಿಗ್ಗಜ ಕುಸ್ತಿಪಟುಗಳ ಕೇಂದ್ರವಾಗಿದ್ದವು.
ಒಟ್ಟಿನಲ್ಲಿ ಪಾಕಿಸ್ತಾನ ಸರ್ಕಾರದ ಈ ಕ್ರಮವು ಕೇವಲ ಹೆಸರು ಬದಲಾವಣೆಯಷ್ಟೇ ಅಲ್ಲ, ತನ್ನ ಇತಿಹಾಸದ ಬಹುಸಾಂಸ್ಕೃತಿಕ ಗುರುತನ್ನು ಮತ್ತೆ ಒಪ್ಪಿಕೊಳ್ಳುವ ಪ್ರಯತ್ನವಾಗಿಯೂ ಕಾಣಲಾಗುತ್ತಿದೆ. ಆದರೆ ಕೆಲವರು ಇದನ್ನು ರಾಜಕೀಯ ತಂತ್ರ ಎಂದು ಟೀಕಿಸುತ್ತಿದ್ದರೆ, ಮತ್ತೊಬ್ಬರು ಇದನ್ನು ಪರಂಪರೆ ಸಂರಕ್ಷಣೆಯ ಮಹತ್ವದ ಹೆಜ್ಜೆ ಎಂದು ಕೊಂಡಾಡುತ್ತಿದ್ದಾರೆ.
