ಮಂಗಳೂರು: ಅರಬ್ಬೀ ಸಮುದ್ರದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ, ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ಕರಾವಳಿ ರಾಜ್ಯಗಳ ಮೀನುಗಾರರಿಗೆ ಹವಾಮಾನ ಇಲಾಖೆ ತುರ್ತು ಎಚ್ಚರಿಕೆ ನೀಡಿದೆ. ಮೇ 20ರಿಂದ ಮೇ 25ರವರೆಗೆ ಸಮುದ್ರಕ್ಕೆ ಇಳಿಯದಂತೆ ಮತ್ತು ಈಗಾಗಲೇ ಸಮುದ್ರದಲ್ಲಿರುವವರು ತಕ್ಷಣ ದಡ ಸೇರುವಂತೆ ಸೂಚಿಸಲಾಗಿದೆ.
ಕರ್ನಾಟಕ ಕರಾವಳಿ ಭಾಗಗಳಲ್ಲಿ ಮುಂದಿನ ಐದು ದಿನಗಳ ಕಾಲ ಸಮುದ್ರ ತೀವ್ರ ಅಸ್ಥಿರತೆಗೊಳ್ಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮಂಗಳೂರು, ಉಡುಪಿ, ಕಾರವಾರ ಸೇರಿದಂತೆ ಕರಾವಳಿ ಜಿಲ್ಲೆಗಳಲ್ಲಿ ಗಾಳಿಯ ವೇಗ ಹೆಚ್ಚಾಗುವ ಮುನ್ಸೂಚನೆ ನೀಡಲಾಗಿದೆ. ಕರಾವಳಿ ಪ್ರದೇಶಗಳಲ್ಲಿ ಗಂಟೆಗೆ 40ರಿಂದ 50 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದ್ದು, ಕೆಲವು ಕಡೆಗಳಲ್ಲಿ ಈ ವೇಗ 60 ಕಿ.ಮೀ ವರೆಗೆ ತಲುಪುವ ಸಾಧ್ಯತೆ ಇದೆ.
ಅರಬ್ಬೀ ಸಮುದ್ರದ ನೈಋತ್ಯ ಭಾಗ ಹಾಗೂ ಸೊಮಾಲಿಯಾ ಕರಾವಳಿ ಪ್ರದೇಶಗಳಲ್ಲಿ ತೀವ್ರ ಗಾಳಿ ಬೀಸುವ ನಿರೀಕ್ಷೆಯಿದ್ದು, ಗಾಳಿಯ ವೇಗ ಗಂಟೆಗೆ 65 ಕಿ.ಮೀ ತಲುಪುವ ಸಾಧ್ಯತೆಯಿದೆ. ಈ ಹಿನ್ನೆಲೆ ಕರ್ನಾಟಕ, ಕೇರಳ, ಲಕ್ಷದ್ವೀಪ, ಮಾಲ್ಡೀವ್ಸ್ ಹಾಗೂ ಕೊಮೊರಿನ್ ಸಮುದ್ರ ಪ್ರದೇಶಗಳಿಗೆ ವಿಶೇಷ ಅಲರ್ಟ್ ಘೋಷಿಸಲಾಗಿದೆ.
ಈಗಾಗಲೇ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿರುವವರು ಕೂಡಲೇ ದಡ ಸೇರುವಂತೆ ಸೂಚಿಸಲಾಗಿದೆ. ಯಾವುದೇ ರೀತಿಯ ಸಾಹಸಕ್ಕೆ ಮುಂದಾಗಬಾರದು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಸಮುದ್ರದ ಅಲೆಗಳ ಎತ್ತರ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಸಣ್ಣ ದೋಣಿಗಳು ಹಾಗೂ ಬೋಟುಗಳು ಸಮುದ್ರಕ್ಕೆ ಇಳಿಯದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ಇದಷ್ಟೇ ಅಲ್ಲದೆ, ಮನ್ನಾರ್ ಕೊಲ್ಲಿ, ಬಂಗಾಳ ಕೊಲ್ಲಿ ಹಾಗೂ ಅಂಡಮಾನ್ ಸಮುದ್ರ ಪ್ರದೇಶಗಳಲ್ಲೂ ಹವಾಮಾನ ವೈಪರೀತ್ಯ ಉಂಟಾಗುವ ಸಾಧ್ಯತೆ ಇದೆ. ಮುಂದಿನ ಐದು ದಿನಗಳ ಕಾಲ ಈ ಪ್ರದೇಶಗಳಲ್ಲೂ ಬಿರುಗಾಳಿ ಹಾಗೂ ಮಳೆಯ ಅಬ್ಬರ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಶ್ರೀಲಂಕಾ ಕರಾವಳಿ ಮತ್ತು ನೈಋತ್ಯ ಬಂಗಾಳ ಕೊಲ್ಲಿಯಲ್ಲಿ ಕೂಡ ಗಂಟೆಗೆ 65 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ.
ಕರ್ನಾಟಕ ಮಾತ್ರವಲ್ಲದೆ ಗೋವಾ, ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಗುಜರಾತ್ ಹಾಗೂ ಮಹಾರಾಷ್ಟ್ರ ಸೇರಿದಂತೆ ಹಲವು ಕರಾವಳಿ ರಾಜ್ಯಗಳಿಗೆ ತುರ್ತು ಎಚ್ಚರಿಕಾ ಸಂದೇಶ ರವಾನಿಸಲಾಗಿದೆ. ಅಲ್ಲದೆ ಒಡಿಶಾ, ಪಶ್ಚಿಮ ಬಂಗಾಳ ಮತ್ತು ಪುದುಚೇರಿ ರಾಜ್ಯಗಳ ವಿಪತ್ತು ನಿರ್ವಹಣಾ ಕೇಂದ್ರಗಳಿಗೂ ಹೈ ಅಲರ್ಟ್ ಘೋಷಿಸಲಾಗಿದೆ.
ಹವಾಮಾನ ಇಲಾಖೆಯ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಜನರಿಗೆ ಮನವಿ ಮಾಡಲಾಗಿದೆ. ಮೀನುಗಾರರು ಯಾವುದೇ ಕಾರಣಕ್ಕೂ ಸಮುದ್ರಕ್ಕೆ ಇಳಿಯಬಾರದು ಎಂದು ಅಧಿಕಾರಿಗಳು ಪುನರುಚ್ಚರಿಸಿದ್ದಾರೆ. ಕರಾವಳಿ ಭಾಗದ ಜನರು ಕೂಡ ಅನಗತ್ಯವಾಗಿ ಸಮುದ್ರ ತೀರಗಳಿಗೆ ತೆರಳದಂತೆ ಸೂಚಿಸಲಾಗಿದೆ.
