ಹವಾನಾ: ವೆನೆಜುವೆಲಾದ ರಾಜಕೀಯ ಇತಿಹಾಸದಲ್ಲಿ ಶನಿವಾರ (ಜನವರಿ 3) ನಡೆದ ಬೆಳವಣಿಗೆಯೊಂದರಲ್ಲಿ, ಅಧ್ಯಕ್ಷ ನಿಕೋಲಸ್ ಮಡುರೊ ಮತ್ತು ಅವರ ಪತ್ನಿ ಸಿಲಿಯಾ ಫ್ಲೋರೆಸ್ ಅವರನ್ನು ಅಮೆರಿಕದ ವಿಶೇಷ ಪಡೆಗಳು ವಶಕ್ಕೆ ಪಡೆದಿವೆ. ಈ ಕಾರ್ಯಾಚರಣೆಯ ವೇಳೆ ನಡೆದ ಭೀಕರ ಸಂಘರ್ಷದಲ್ಲಿ 32 ನಾಗರಿಕರು (ಕ್ಯೂಬಾ ಮೂಲದವರು) ಮೃತಪಟ್ಟಿದ್ದಾರೆ ಎಂದು ಕ್ಯೂಬಾ ಸರ್ಕಾರ ಅಧಿಕೃತವಾಗಿ ಪ್ರಕಟಿಸಿದೆ.
ಘಟನೆಯ ವಿವರ:
ವೆನೆಜುವೆಲಾದ ರಾಜಧಾನಿ ಕಾರಕಾಸ್ನಲ್ಲಿ ನಡೆದ ಈ ದಾಳಿಯು ಇಡೀ ಜಗತ್ತನ್ನು ಬೆಚ್ಚಿಬೀಳಿಸಿದೆ. ಮಡುರೊ ಅವರಿಗೆ ಮೊದಲಿನಿಂದಲೂ ಭದ್ರತೆ ಒದಗಿಸುತ್ತಿದ್ದ ಕ್ಯೂಬಾದ ಸಶಸ್ತ್ರ ಪಡೆಗಳು ಮತ್ತು ಗುಪ್ತಚರ ಸಂಸ್ಥೆಯ ಸದಸ್ಯರು ಅಮೆರಿಕದ ಪಡೆಗಳನ್ನು ತಡೆಯಲು ಪ್ರಯತ್ನಿಸಿದಾಗ ನಡೆದ ಬಾಂಬ್ ದಾಳಿ ಮತ್ತು ನೇರ ಸಮರದಲ್ಲಿ 32 ಮಂದಿ ವೀರಮರಣ ಹೊಂದಿದ್ದಾರೆ. ಮೃತರ ಗೌರವಾರ್ಥವಾಗಿ ಕ್ಯೂಬಾ ಸರ್ಕಾರವು ಜನವರಿ 5 ಮತ್ತು 6 ರಂದು ರಾಷ್ಟ್ರೀಯ ಶೋಕಾಚರಣೆಯನ್ನು ಘೋಷಿಸಿದೆ.
ಅಮೆರಿಕದ ಆರೋಪಗಳೇನು ?
63 ವರ್ಷದ ಮಡುರೊ ಅವರ ಮೇಲೆ ಅಮೆರಿಕವು ಗಂಭೀರ ಆರೋಪಗಳನ್ನು ಹೊರಿಸಿದೆ. 2020ರಿಂದಲೇ ಮಡುರೊ ವಿರುದ್ಧ ಮಾದಕ ವಸ್ತು ಸಾಗಣೆ ಮತ್ತು ಅಂತರಾಷ್ಟ್ರೀಯ ಭಯೋತ್ಪಾದನಾ ಸಂಚಿನ ಆರೋಪಗಳನ್ನು ದಾಖಲಿಸಲಾಗಿತ್ತು. ವೆನೆಜುವೆಲಾವನ್ನು ಅಕ್ರಮ ಚಟುವಟಿಕೆಗಳ ಕೇಂದ್ರವಾಗಿಸಿಕೊಂಡಿದ್ದಾರೆ ಎಂಬುದು ಅಮೆರಿಕದ ವಾದ. ಸದ್ಯ ಮಡುರೊ ಅವರನ್ನು ನ್ಯೂಯಾರ್ಕ್ನ ಕಾರಾಗೃಹದಲ್ಲಿ ಇರಿಸಲಾಗಿದ್ದು, ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮಡುರೊ ಜೈಲಿನಲ್ಲಿರುವ ಫೋಟೋವನ್ನು ಹಂಚಿಕೊಂಡಿದ್ದು, ಅದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮಡುರೊ ಬಂಧನದ ಬೆನ್ನಲ್ಲೇ ಅಮೆರಿಕವು ನೆರೆಯ ಕೊಲಂಬಿಯಾದ ಅಧ್ಯಕ್ಷರಿಗೂ ಎಚ್ಚರಿಕೆ ನೀಡಿದೆ. ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಕೊಲಂಬಿಯಾ ಅಧ್ಯಕ್ಷ ಗುಸ್ಟಾವೊ ಪೆಟ್ರೋ, ಅಮೆರಿಕದ ಈ ಕ್ರಮವು ಲ್ಯಾಟಿನ್ ಅಮೆರಿಕದ ಸಾರ್ವಭೌಮತ್ವದ ಮೇಲಿನ ದಾಳಿಯಾಗಿದೆ. ಇದು ಮಾನವೀಯ ಬಿಕ್ಕಟ್ಟಿಗೆ ದಾರಿ ಮಾಡಿಕೊಡುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಮಡುರೊ ಅವರು ಪುಟ್ಟಪರ್ತಿಯ ಶ್ರೀ ಸತ್ಯಸಾಯಿಬಾಬಾ ಅವರ ಪರಮ ಭಕ್ತರಾಗಿದ್ದರು. ಅವರ ಅಧಿಕೃತ ಕಚೇರಿಗಳಲ್ಲಿ ಸಾಯಿಬಾಬಾ ಅವರ ಭಾವಚಿತ್ರಗಳಿರುತ್ತಿದ್ದವು ಮತ್ತು ಅವರು ಹಲವು ಬಾರಿ ಭಾರತಕ್ಕೆ ಭೇಟಿ ನೀಡುವ ಇಚ್ಛೆಯನ್ನೂ ವ್ಯಕ್ತಪಡಿಸಿದ್ದರು. ಆದರೆ ಇವರ ಬಂದನದಿಂದ ಇಡೀ ವಿಶ್ವ ಆತಂಕ ವ್ಯಕ್ತಪಡಿಸಿದೆ.





