ಆಕ್ಲೆಂಡ್: ಜಗತ್ತಿನಾದ್ಯಂತ ಹೊಸ ವರ್ಷದ ಸಂಭ್ರಮದ ಅಲೆ ಎದ್ದಿದ್ದು, ದಕ್ಷಿಣ ಪೆಸಿಫಿಕ್ ರಾಷ್ಟ್ರಗಳು 2026ನೇ ಸಾಲನ್ನು ಅತ್ಯಂತ ಸಡಗರದಿಂದ ಸ್ವಾಗತಿಸಿವೆ. ನ್ಯೂಜಿಲೆಂಡ್‌ನ ಪ್ರಮುಖ ಮಹಾನಗರವಾದ ಆಕ್ಲೆಂಡ್ (Auckland), ತನ್ನ ಐಕಾನಿಕ್ ಸ್ಕೈ ಟವರ್ (Sky Tower) ನಿಂದ ನಡೆಸಿದ ಅದ್ಭುತ ಪಟಾಕಿ ಪ್ರದರ್ಶನದ ಮೂಲಕ 2025ಕ್ಕೆ ವಿದಾಯ ಹೇಳಿ, ಹೊಸ ವರ್ಷಕ್ಕೆ ಅದ್ಧೂರಿ ನಾಂದಿ ಹಾಡಿದೆ.
ಮೊದಲು ಹೊಸ ವರ್ಷ ಸ್ವಾಗತಿಸಿದ ರಾಷ್ಟ್ರ
ಭೂಮಿಯ ಕಾಲಮಾನದ ಪ್ರಕಾರ, ಪೆಸಿಫಿಕ್ ದ್ವೀಪ ರಾಷ್ಟ್ರವಾದ ಕಿರಿಬಾಟಿ (Kiribati) 2026 ಅನ್ನು ಸ್ವಾಗತಿಸಿದ ವಿಶ್ವದ ಮೊದಲ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಲೈನ್ ದ್ವೀಪಗಳಲ್ಲಿ ಮಧ್ಯರಾತ್ರಿ 12 ಗಂಟೆಯಾಗುತ್ತಿದ್ದಂತೆ ಅಧಿಕೃತವಾಗಿ ಜಾಗತಿಕ ಮಟ್ಟದ ಹೊಸ ವರ್ಷದ ಹಬ್ಬಗಳು ಆರಂಭವಾಗಿದೆ. ಇದರ ಬೆನ್ನಲ್ಲೇ ಸುಮಾರು 1.7 ಮಿಲಿಯನ್ ಜನಸಂಖ್ಯೆ ಹೊಂದಿರುವ ಆಕ್ಲೆಂಡ್ ನಗರವು 2026ಕ್ಕೆ ಅದ್ದೂರಿ ಸ್ವಾಗತ ಕೋರಿದೆ.
ಸ್ಕೈ ಟವರ್‌ನಲ್ಲಿ ಪಟಾಕಿಗಳ ಚಿತ್ತಾರ
ನ್ಯೂಜಿಲೆಂಡ್‌ನ ಅತಿ ಎತ್ತರದ ಕಟ್ಟಡವಾದ ಸ್ಕೈ ಟವರ್‌ನಲ್ಲಿ ನಡೆದ 5 ನಿಮಿಷಗಳ ಪ್ರದರ್ಶನವು ಎಲ್ಲರ ಗಮನ ಸೆಳೆಯಿತು. 240 ಮೀಟರ್ ಎತ್ತರದ ಈ ಟವರ್‌ನ ವಿವಿಧ ಮಹಡಿಗಳಿಂದ ಸುಮಾರು 3,500ಕ್ಕೂ ಹೆಚ್ಚು ಪೈರೋಟೆಕ್ನಿಕ್‌ಗಳನ್ನು ಉಡಾಯಿಸಲಾಯಿತು. ಸುಮಾರು 500 ಕೆ.ಜಿಗೂ ಅಧಿಕ ಸ್ಫೋಟಕಗಳನ್ನು ಬಳಸಿ ಆಕಾಶದಲ್ಲಿ ಬಣ್ಣಬಣ್ಣದ ಚಿತ್ತಾರ ಮೂಡಿಸಲಾಯಿತು. ಗುಡುಗು ಸಹಿತ ಮಳೆಯ ಮುನ್ಸೂಚನೆ ಇದ್ದರೂ, ಸಾವಿರಾರು ಪ್ರವಾಸಿಗರು ಮತ್ತು ಸ್ಥಳೀಯರು ನಗರದ ಮಧ್ಯಭಾಗದಲ್ಲಿ ಒಗ್ಗೂಡಿ ಹರ್ಷೋದ್ಗಾರಗಳೊಂದಿಗೆ 2026ರ ಆರಂಭವನ್ನ ಸಂಭ್ರಮಿಸಿದರು. ಹವಾಮಾನ ವೈಪರೀತ್ಯದ ಕಾರಣ ಕೆಲವು ಸಣ್ಣ ಸಮುದಾಯ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿತ್ತಾದರೂ, ಸ್ಕೈ ಟವರ್‌ನ ಮುಖ್ಯ ಕಾರ್ಯಕ್ರಮವು ಯಾವುದೇ ಅಡೆತಡೆಯಿಲ್ಲದೆ ಯಶಸ್ವಿಯಾಗಿ ನಡೆಯಿತು.
ಲೇಸರ್ ಮತ್ತು ಬೆಳಕಿನ ಮೆರುಗು
ಪಟಾಕಿ ಪ್ರದರ್ಶನಕ್ಕೂ ಮುನ್ನ ರಾತ್ರಿ 9 ಗಂಟೆಯಿಂದಲೇ ಸ್ಕೈ ಟವರ್ ಮೇಲೆ ಲೇಸರ್ ಶೋ ಮತ್ತು ಪ್ರೊಜೆಕ್ಷನ್ ಆರಂಭವಾಗಿತ್ತು. ಸಾರ್ವಜನಿಕರು ಸಲ್ಲಿಸಿದ್ದ ವಿಶೇಷ ಕ್ಷಣಗಳ ಫೋಟೋಗಳನ್ನು ಟವರ್ ಮೇಲೆ ಪ್ರದರ್ಶಿಸಲಾಯಿತು. ಅಲ್ಲದೆ, ಆಕ್ಲೆಂಡ್ ಹಾರ್ಬರ್ ಬ್ರಿಡ್ಜ್ ಕೂಡ ಆಕರ್ಷಕ ಬೆಳಕಿನ ಅಲಂಕಾರದೊಂದಿಗೆ ಹೊಸ ವರ್ಷಕ್ಕೆ ಮೆರುಗು ನೀಡಿತು.
ಬಿಗಿ ಭದ್ರತೆ ಮತ್ತು ಸಾರ್ವಜನಿಕ ಸುರಕ್ಷತೆ
ನಗರದ ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿ ಜನಸಂದಣಿಯನ್ನು ನಿಯಂತ್ರಿಸಲು ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರು. ನಗರ ಕೇಂದ್ರಗಳಲ್ಲಿ ವಾಹನ ಸಂಚಾರವನ್ನು ನಿರ್ಬಂಧಿಸಿ, ಪಾದಚಾರಿಗಳಿಗೆ ಮುಕ್ತ ಅವಕಾಶ ಕಲ್ಪಿಸಲಾಗಿತ್ತು. ಹಂತ ಹಂತವಾಗಿ ಓಷಿಯಾನಿಯಾ ಭಾಗಗಳಿಂದ ಪ್ರಾರಂಭವಾದ ಈ ಆಚರಣೆಯು ಮುಂದಿನ ಕೆಲವು ಗಂಟೆಗಳಲ್ಲಿ ಏಷ್ಯಾ, ಯುರೋಪ್ ಮತ್ತು ಅಮೆರಿಕಾ ಖಂಡಗಳಲ್ಲೂ ಆರಂಭವಾಗಲಿದೆ.





