ಕಠ್ಮಂಡು: ನಿವೃತ್ತ ಮುಖ್ಯ ನ್ಯಾಯಮೂರ್ತಿ ಸುಶೀಲಾ ಕರ್ಕಿ ಅವರು ನೇಪಾಳದ ಹಂಗಾಮಿ ಪ್ರಧಾನಿಯಾಗಿ ಇಂದು (ಸೆಪ್ಟೆಂಬರ್ 12) ರಾತ್ರಿ 8:45ಕ್ಕೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಜನ್‌ಜಿ (Gen Z) ಪ್ರತಿಭಟನಾಕಾರರು, ಅಧ್ಯಕ್ಷ ರಾಮಚಂದ್ರ ಪೌಡೆಲ್, ಮತ್ತು ಸೇನಾ ಮುಖ್ಯಸ್ಥ ಅಶೋಕ್ ರಾಜ್ ಸಿಗ್ಡೆಲ್ ಅವರ ನಡುವಿನ ಒಮ್ಮತದ ನಂತರ ಈ ನಿರ್ಧಾರ ಕೈಗೊಳ್ಳಲಾಗಿದೆ.
ಕರ್ಕಿ ಅವರ ನೇತೃತ್ವದ ಹಂಗಾಮಿ ಸರ್ಕಾರದ ಸಂಪುಟವು ಚಿಕ್ಕದಾಗಿರಲಿದ್ದು, ಮೊದಲ ಸಭೆಯು ಶುಕ್ರವಾರ ರಾತ್ರಿಯೇ ನಡೆಯಲಿದೆ. ಈ ಸಂಪುಟವು ಫೆಡರಲ್ ಸಂಸತ್ತು ಮತ್ತು ಏಳು ಪ್ರಾಂತೀಯ ಸಂಸತ್ತುಗಳನ್ನು ವಿಸರ್ಜಿಸಲು ಶಿಫಾರಸು ಮಾಡುವ ಸಾಧ್ಯತೆಯಿದೆ.
ನೇಪಾಳದಲ್ಲಿ ಸಾಮಾಜಿಕ ಜಾಲತಾಣಗಳ ನಿಷೇಧ ಮತ್ತು ಭ್ರಷ್ಟಾಚಾರದ ವಿರುದ್ಧ ಜನತೆ ಭಾರೀ ಪ್ರತಿಭಟನೆ ನಡೆಸಿದ್ದರು. ಪ್ರತಿಭಟನಾಕಾರರು ಸರ್ಕಾರಿ ಕಚೇರಿಗಳು, ಸಂಸತ್ ಭವನಕ್ಕೆ ನುಗ್ಗಿ ಧ್ವಂಸ ಮಾಡಿದ್ದರು ಮತ್ತು ಕೆಲವು ಸಚಿವರ ಮೇಲೆ ಹಲ್ಲೆ ನಡೆಸಿದ್ದರು. ಈ ಉಗ್ರ ಪ್ರತಿಭಟನೆಯ ತೀವ್ರತೆಯನ್ನು ಅರಿತು, ಆಗಿನ ಪ್ರಧಾನಿ ಕೆ.ಪಿ. ಶರ್ಮಾ ಓಲಿ ರಾಜೀನಾಮೆ ಸಲ್ಲಿಸಿದ್ದರು. ಪ್ರಸ್ತುತ, ನೇಪಾಳದ ಸೇನೆಯು ಹಿಂಸಾಚಾರವನ್ನು ನಿಯಂತ್ರಣಕ್ಕೆ ತಂದಿದೆ.
ಮುಂದಿನ ಚುನಾವಣೆಯವರೆಗೆ ದೇಶವನ್ನು ಮುನ್ನಡೆಸಲು ಕರ್ಕಿ ಅವರ ನೇತೃತ್ವದಲ್ಲಿ ಹಂಗಾಮಿ ಸರ್ಕಾರ ರಚನೆಯ ಬಗ್ಗೆ ಚರ್ಚೆ ನಡೆದಿತ್ತು. ಕಠ್ಮಂಡು ಮೇಯರ್ ಬಾಲೇಂದ್ರ ಶಾ ಅವರ ಹೆಸರು ಕೂಡ ಕೇಳಿಬಂದಿತ್ತು, ಆದರೆ ಅವರು ಈ ಹುದ್ದೆಗೆ ಒಲವು ತೋರಿರಲಿಲ್ಲ ಮತ್ತು ಕರ್ಕಿ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದರು.
 
			





 
                             
                             
                             
                             
                            