ವಾಷಿಂಗ್ಟನ್: ಪಾಕಿಸ್ತಾನದ ಮಾಜಿ ಅಧ್ಯಕ್ಷ ಮತ್ತು ಸರ್ವಾಧಿಕಾರಿ ಪರ್ವೇಜ್ ಮುಷರಫ್ ಅವರ ಕಾಲದಲ್ಲಿ ಅಮೆರಿಕ ಜೊತೆಗಿನ ಸಂಬಂಧವು ಗಟ್ಟಿಯಾಗಿತ್ತು. ಈ ಸಂಬಂಧದ ಹಿಂದಿನ ಆಘಾತಕಾರಿ ರಹಸ್ಯವನ್ನು ಸಿಐಎಯ ಮಾಜಿ ಅಧಿಕಾರಿ ಜಾನ್ ಕಿರಿಯಾಕು ಬಯಲಿಗೆಳೆದಿದ್ದಾರೆ.
“ಪರ್ವೇಜ್ ಮುಷರಫ್ ಅವರನ್ನು ನಾವು ಅಕ್ಷರಶಃ ಖರೀದಿಸಿದ್ದೆವು! ಅವರ ಆಡಳಿತಾವಧಿಯಲ್ಲಿ ಪಾಕಿಸ್ತಾನದ ಪರಮಾಣು ಶಸ್ತ್ರಾಗಾರದ ನಿಯಂತ್ರಣವೂ ಅಮೆರಿಕದ ವಶಕ್ಕೆ ಬಂದಿತ್ತು” ಎಂದು ಅವರು ಎಎನ್‌ಐಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಮುಷರಫ್ ಅವರ ಆಡಳಿತದ ಸಮಯದಲ್ಲಿ ಅಮೆರಿಕವು ಪಾಕಿಸ್ತಾನಕ್ಕೆ ಸಾವಿರಾರು ಕೋಟಿ ಡಾಲರ್‌ಗಳ ಆರ್ಥಿಕ ಮತ್ತು ಮಿಲಿಟರಿ ನೆರವನ್ನು ಒದಗಿಸಿತ್ತು. “ನಾವು ಮುಷರಫ್ ಅವರನ್ನು ನಿಯಮಿತವಾಗಿ ಭೇಟಿಯಾಗುತ್ತಿದ್ದೆವು. ಅವರು, ‘ನೀವು ಏನೇ ತೆಗೆದುಕೊಳ್ಳಿ, ಆದರೆ ನಮ್ಮ ಸೇನೆಯನ್ನು ಸಂತೋಷವಾಗಿಡಿ’ ಎಂದು ಹೇಳುತ್ತಿದ್ದರು,” ಎಂದು ಕಿರಿಯಾಕು ತಿಳಿಸಿದ್ದಾರೆ.
ಈ ಒಪ್ಪಂದದ ಭಾಗವಾಗಿ, ಪಾಕಿಸ್ತಾನದ ಸೇನೆಗೆ ಯಥೇಚ್ಛ ನೆರವು ನೀಡಲಾಯಿತು ಮತ್ತು ಅದಕ್ಕೆ ಬದಲಾಗಿ ಅಣ್ವಸ್ತ್ರ ಶಸ್ತ್ರಾಗಾರದ ಕೀಲಿಯನ್ನು ಅಮೆರಿಕಕ್ಕೆ ಒಪ್ಪಿಸಲಾಯಿತು. “ಪಾಕ್ ಸೇನೆಯು ಅಲ್ ಖೈದಾದ ಬಗ್ಗೆ ಎಂದಿಗೂ ಚಿಂತಿಸಲಿಲ್ಲ. ಅವರ ಗಮನವೆಲ್ಲ ಭಾರತದ ಮೇಲೆಯೇ ಇತ್ತು. ಆದ್ದರಿಂದ ಮುಷರಫ್ ಸೇನೆ ಮತ್ತು ಉಗ್ರರನ್ನು ಸಂತುಷ್ಟಗೊಳಿಸಲು ಶ್ರಮಿಸುತ್ತಿದ್ದರು,” ಎಂದು ಕಿರಿಯಾಕು ವಿವರಿಸಿದ್ದಾರೆ.
ಕಿರಿಯಾಕುಅವರು, “ನಿರಂಕುಶ ಆಡಳಿತದಲ್ಲಿ ಸಾರ್ವಜನಿಕರ ಅಭಿಪ್ರಾಯ ಅಥವಾ ಮಾಧ್ಯಮಗಳ ಕುರಿತು ಚಿಂತಿಸುವ ಅಗತ್ಯವಿಲ್ಲ. ಅಂತಹ ಆಡಳಿತಗಾರರ ನಿರ್ಣಯವೇ ಅಂತಿಮವಾಗಿರುತ್ತದೆ. ಇದರಿಂದ ಅಮೆರಿಕಕ್ಕೆ ಒಪ್ಪಂದಗಳನ್ನು ಮಾಡಿಕೊಳ್ಳಲು ಸುಲಭವಾಗುತ್ತದೆ,” ಎಂದು ಅವರು ತಿಳಿಸಿದ್ದಾರೆ. ಈ ಒಪ್ಪಂದದ ಫಲವಾಗಿ, ಪಾಕಿಸ್ತಾನದ ಅಣ್ವಸ್ತ್ರ ಶಸ್ತ್ರಾಗಾರದ ಒಂದು ಭಾಗದ ನಿಯಂತ್ರಣವನ್ನು ಅಮೆರಿಕ ಪಡೆದುಕೊಂಡಿತು.
ಇದೇ ವೇಳೆ, ಕಿರಿಯಾಕು ಭಾರತ-ಪಾಕಿಸ್ತಾನ ಸಂಬಂಧದ ಬಗ್ಗೆಯೂ ಮಾತನಾಡಿದ್ದಾರೆ. “ಪಾಕಿಸ್ತಾನವು ಸಾಂಪ್ರದಾಯಿಕ ಯುದ್ಧದಲ್ಲಿ ಭಾರತವನ್ನು ಎಂದಿಗೂ ಸೋಲಿಸಲು ಸಾಧ್ಯವಿಲ್ಲ. ಇದು ಸರಳ ಸತ್ಯ. ಭಾರತದೊಂದಿಗಿನ ಯುದ್ಧದಿಂದ ಪಾಕಿಸ್ತಾನಕ್ಕೆ ಯಾವುದೇ ಲಾಭವಿಲ್ಲ. ಭಾರತವನ್ನು ಕೆರಳಿಸುವುದರಿಂದ ಪಾಕಿಸ್ತಾನದ ಹಿತಾಸಕ್ತಿಗೇ ಹಾನಿಯಾಗುತ್ತದೆ,” ಎಂದು ಅವರು ಎಚ್ಚರಿಸಿದ್ದಾರೆ. ಇದರಿಂದ ಪಾಕಿಸ್ತಾನವು ತನ್ನ ರಾಜಕೀಯ ಮತ್ತು ರಾಜತಾಂತ್ರಿಕ ನೀತಿಗಳನ್ನು ಪುನರ್‌ಪರಿಶೀಲಿಸಬೇಕಾಗಿದೆ ಎಂದು ಅವರು ಸಲಹೆ ನೀಡಿದ್ದಾರೆ.
 
			
 
					




 
                             
                             
                             
                             
                            