ವಾಷಿಂಗ್ಟನ್: ವೆನೆಜುವೆಲಾದ ವಿರೋಧ ಪಕ್ಷದ ಧೀಮಂತ ನಾಯಕಿ ಮಾರಿಯಾ ಕೊರಿನಾ ಮಚಾದೊ, ತಮಗೆ ಸಂದ ಗೌರವಾನ್ವಿತ ನೊಬೆಲ್ ಶಾಂತಿ ಪ್ರಶಸ್ತಿ ಪದಕವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಪ್ರದಾನ ಮಾಡಿದ್ದಾರೆ. ವೆನೆಜುವೆಲಾದ ಸ್ವಾತಂತ್ರ್ಯಕ್ಕಾಗಿ ಟ್ರಂಪ್ ತೋರಿದ ಅಚಲ ಬದ್ಧತೆಗೆ ನಾನು ಈ ಪ್ರಶಸ್ತಿಯನ್ನ ಅವರಿಗೆ ನೀಡುತ್ತಿದ್ದೇನೆ ಎಂದು ಹೇಳಿದ್ದಾರೆ.
ಅಮೆರಿಕದ ಪಡೆಗಳು ವೆನೆಜುವೆಲಾದ ರಾಜಧಾನಿ ಕ್ಯಾರಕಾಸ್‌ನಲ್ಲಿ ಕಾರ್ಯಾಚರಣೆ ನಡೆಸಿ, ಅಧ್ಯಕ್ಷ ನಿಕೋಲಸ್ ಮಡುರೊ ಅವರನ್ನು ಮಾದಕವಸ್ತು ಕಳ್ಳಸಾಗಣೆ ಆರೋಪದ ಮೇಲೆ ವಶಪಡಿಸಿಕೊಂಡ ಕೆಲವೇ ವಾರಗಳ ನಂತರ ಈ ಭೇಟಿ ನಡೆದಿದೆ. ಮಡುರೊ ಪದಚ್ಯುತಿಯ ನಂತರ ಟ್ರಂಪ್ ಮತ್ತು ಮಚಾದೊ ಮೊದಲ ಬಾರಿಗೆ ಮುಖಾಮುಖಿಯಾಗಿದ್ದಾರೆ. ಈ ಭೇಟಿಯನ್ನು ಮಚಾದೊ ವೆನೆಜುವೆಲಾದ ಪಾಲಿಗೆ ಒಂದು ಐತಿಹಾಸಿಕ ದಿನ ಎಂದು ಕರೆದಿದ್ದಾರೆ.
ಮಚಾದೊ ಅವರು ತಮ್ಮ ಪದಕವನ್ನು ಟ್ರಂಪ್‌ಗೆ ನೀಡಿದ ನಡೆಯನ್ನು ಟ್ರಂಪ್ ಸಾಮಾಜಿಕ ಮಾಧ್ಯಮದಲ್ಲಿ ಶ್ಲಾಘಿಸಿದ್ದಾರೆ. ಇದು ಪರಸ್ಪರ ಗೌರವದ ಅದ್ಭುತ ಸೂಚಕ ಎಂದು ಅವರು ಸಂಭ್ರಮಿಸಿದ್ದಾರೆ. ಆದರೆ, ನಾರ್ವೆಯ ನೊಬೆಲ್ ಸಮಿತಿಯು ಈ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದು, ನೊಬೆಲ್ ಪ್ರಶಸ್ತಿಯು ವ್ಯಕ್ತಿಗತ ಗೌರವವಾಗಿದ್ದು, ಅದನ್ನು ಕಾನೂನಾತ್ಮಕವಾಗಿ ವರ್ಗಾಯಿಸಲು ಅಥವಾ ಹಸ್ತಾಂತರಿಸಲು ಸಾಧ್ಯವಿಲ್ಲ ಎಂದು ವಿರೋಧಿಸಿದೆ.
ಕುತೂಹಲಕಾರಿ ಸಂಗತಿಯೆಂದರೆ, 2024ರ ಚುನಾವಣೆಯಲ್ಲಿ ಮಚಾದೊ ಅವರ ಚಳುವಳಿ ಗೆಲುವು ಸಾಧಿಸಿದೆ ಎಂದು ಹೇಳಿಕೊಂಡರೂ, ಟ್ರಂಪ್ ಅವರನ್ನು ವೆನೆಜುವೆಲಾದ ಅಧಿಕೃತ ನಾಯಕಿ ಎಂದು ಅಂಗೀಕರಿಸಲು ನಿರಾಕರಿಸಿದ್ದಾರೆ. ಬದಲಾಗಿ, ಮಡುರೊ ಅವರ ಮಾಜಿ ಉಪಾಧ್ಯಕ್ಷೆ ಡೆಲ್ಸಿ ರೊಡ್ರಿಗಸ್ ಅವರನ್ನು ಹಂಗಾಮಿ ರಾಷ್ಟ್ರದ ಮುಖ್ಯಸ್ಥೆಯಾಗಿ ಪರಿಗಣಿಸಿ ಅವರೊಂದಿಗೆ ಟ್ರಂಪ್ ವ್ಯವಹರಿಸುತ್ತಿದ್ದಾರೆ. ಈ ಗೊಂದಲಗಳ ನಡುವೆಯೂ ಮಚಾದೊ ಅವರನ್ನು ಅದ್ಭುತ ಮಹಿಳೆ ಎಂದು ಕರೆದಿರುವ ಟ್ರಂಪ್, ಅವರನ್ನು ಭೇಟಿಯಾಗುವುದು ತಮಗೆ ಸಂದ ಮಹಾ ಗೌರವ ಎಂದಿದ್ದಾರೆ.
ಶ್ವೇತಭವನದ ಗೇಟ್‌ಗಳ ಮುಂದೆ ಜಮಾಯಿಸಿದ್ದ ನೂರಾರು ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಮಚಾದೊ, ಸ್ಪ್ಯಾನಿಷ್ ಭಾಷೆಯಲ್ಲಿ ನಾವು ಅಧ್ಯಕ್ಷ ಟ್ರಂಪ್ ಅವರನ್ನು ಪೂರ್ಣವಾಗಿ ನಂಬಬಹುದು ಎಂದು ಹೇಳಿದರು. ನಂತರ ಇಂಗ್ಲಿಷ್‌ನಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತಾ, ನಮ್ಮ ದೇಶದ ಸ್ವಾತಂತ್ರ್ಯದ ಹೋರಾಟದೊಂದಿಗೆ ಟ್ರಂಪ್ ಹೊಂದಿರುವ ಅನನ್ಯ ಬದ್ಧತೆಗಾಗಿ ನಾನು ಅವರಿಗೆ ಈ ಪದಕವನ್ನು ಪ್ರದಾನ ಮಾಡಿದ್ದೇನೆ ಎಂದು ಸ್ಪಷ್ಟಪಡಿಸಿದರು.





