ವಾಷಿಂಗ್ಟನ್: ಅಮೆರಿಕದ ವಶದಲ್ಲಿರುವ ವೆನೆಜುವೆಲಾ ಅಧ್ಯಕ್ಷ ನಿಕೋಲಾಸ್ ಮಡುರೊ ಅವರ ಜೀವನದ ಬಗ್ಗೆ ಒಂದರ ಹಿಂದೆ ಒಂದರಂತೆ ಅಚ್ಚರಿಯ ಸಂಗತಿಗಳು ಬೆಳಕಿಗೆ ಬರುತ್ತಿವೆ. ಡ್ರಗ್ಸ್ ಮಾಫಿಯಾಗೆ ಬೆಂಬಲ ನೀಡಿದ ಆರೋಪ, ಅಂತಾರಾಷ್ಟ್ರೀಯ ರಾಜಕೀಯ ಸಂಘರ್ಷಗಳ ನಡುವೆಯೇ, ಮಡುರೊ ಅವರ ಆಧ್ಯಾತ್ಮಿಕ ನಂಟೊಂದು ಈಗ ಮತ್ತೆ ಚರ್ಚೆಗೆ ಬಂದಿದೆ. ಭಾರತದ ಪುಟ್ಟಪರ್ತಿಯ ದಿವಂಗತ ದೇವಮಾನವ ಶ್ರೀ ಸತ್ಯಸಾಯಿ ಬಾಬಾ ಅವರ ಭಕ್ತನಾಗಿದ್ದ ಎಂದು ತಿಳಿದು ಬಂದಿದೆ.
ಕ್ಯಾಥೊಲಿಕ್ ಕುಟುಂಬದಲ್ಲಿ ಬೆಳೆದ ನಿಕೋಲಾಸ್ ಮಡುರೊ, ಸಾಯಿಬಾಬಾ ಅವರ ಕಟ್ಟಾ ಅನುಯಾಯಿಯಾಗಿದ್ದು ಪತ್ನಿ ಸಿಲಿಯಾ ಫ್ಲೋರ್ಸ್ ಅವರ ಪ್ರಭಾವದಿಂದ ಎನ್ನಲಾಗಿದೆ. ಸಿಲಿಯಾ ಫ್ಲೋರ್ಸ್ ವೃತ್ತಿಯಲ್ಲಿ ವಕೀಲೆ ಹಾಗೂ ನಂತರ ಶಾಸಕರಾಗಿದ್ದು, ಆಧ್ಯಾತ್ಮಿಕ ವಿಚಾರಗಳಲ್ಲಿ ಗಾಢ ನಂಬಿಕೆ ಹೊಂದಿದ್ದವರು. ಅವರ ಮೂಲಕವೇ ಮಡುರೊ ಸಾಯಿಬಾಬಾ ಉಪದೇಶಗಳು, ಮಾನವೀಯತೆ ಮತ್ತು ಆಧ್ಯಾತ್ಮಿಕ ತತ್ವಗಳತ್ತ ಆಕರ್ಷಿತರಾದರು.
2005ರಲ್ಲಿ ವೆನೆಜುವೆಲಾದ ವಿದೇಶಾಂಗ ಸಚಿವರಾಗಿದ್ದಾಗ ನಿಕೋಲಾಸ್ ಮಡುರೊ ಮತ್ತು ಅವರ ಪತ್ನಿ ಭಾರತಕ್ಕೆ ಭೇಟಿ ನೀಡಿದ್ದರು. ಆ ಸಂದರ್ಭದಲ್ಲಿ ಆಂಧ್ರಪ್ರದೇಶದ ಪುಟ್ಟಪರ್ತಿಯಲ್ಲಿರುವ ಪ್ರಶಾಂತಿ ನಿಲಯಕ್ಕೆ ತೆರಳಿ ಶ್ರೀ ಸತ್ಯಸಾಯಿ ಬಾಬಾ ಅವರನ್ನು ಭೇಟಿಯಾದರು. ಸಾಯಿಬಾಬಾ ಅವರೊಂದಿಗೆ ಮಡುರೊ ದಂಪತಿಗೆ ವೈಯಕ್ತಿಕ ಸಂದರ್ಶನವೂ ಲಭಿಸಿತ್ತು. ಮಡುರೊ ಬಾಬಾ ಅವರ ಪಾದಗಳ ಬಳಿ ಕುಳಿತಿರುವ ಚಿತ್ರಗಳು ಆಗ ಹರಿದಾಡಿದ್ದವು.
ಮಡುರೊ ಅಧ್ಯಕ್ಷರಾದ ಬಳಿಕವೂ ಈ ಭಕ್ತಿಯ ನಂಟು ಮುಂದುವರಿದಿತ್ತು. ವೆನೆಜುವೆಲಾದ ಅಧ್ಯಕ್ಷರ ಕಚೇರಿಯಲ್ಲಿ ಸಾಯಿಬಾಬಾ ಅವರ ಭಾವಚಿತ್ರವು ರಾಷ್ಟ್ರೀಯ ನಾಯಕರ ಚಿತ್ರಗಳ ಜೊತೆಗೆ ಇರಿಸಲಾಗಿತ್ತು ಎಂಬ ವರದಿಗಳು ಅಂದಿನ ಕಾಲದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದ್ದವು. ಲ್ಯಾಟಿನ್ ಅಮೆರಿಕದ ರಾಷ್ಟ್ರಾಧ್ಯಕ್ಷನೊಬ್ಬ ಭಾರತೀಯ ದೇವಮಾನವಿಗೆ ಈ ಮಟ್ಟದ ಗೌರವ ನೀಡಿರುವುದು ಅಂತರರಾಷ್ಟ್ರೀಯ ಮಟ್ಟದಲ್ಲಿ ವಿಶೇಷ ಗಮನ ಸೆಳೆದಿತ್ತು.
ಏಪ್ರಿಲ್ 2011ರಲ್ಲಿ ಶ್ರೀ ಸತ್ಯಸಾಯಿ ಬಾಬಾ ನಿಧನರಾದರು. ಆಗ ಹ್ಯುಗೋ ಚಾವೆಜ್ ಸರ್ಕಾರದಲ್ಲಿ ವಿದೇಶಾಂಗ ಸಚಿವರಾಗಿದ್ದ ಮಡುರೊ, ವೆನೆಜುವೆಲಾದ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಅಧಿಕೃತವಾಗಿ ಸಂತಾಪ ಸೂಚಿಸಿದರು. ಸಾಯಿಬಾಬಾ ಅವರ “ಮಾನವೀಯತೆಗೆ ಸಲ್ಲಿಸಿದ ಆಧ್ಯಾತ್ಮಿಕ ಕೊಡುಗೆ”ಯನ್ನು ಗೌರವಿಸಿ ರಾಷ್ಟ್ರೀಯ ಶೋಕಾಚರಣೆಯ ದಿನವನ್ನೇ ಘೋಷಿಸಲಾಯಿತು. ಇದು ಭಾರತ–ವೆನೆಜುವೆಲಾ ಆಧ್ಯಾತ್ಮಿಕ ನಂಟಿನ ಅಪರೂಪದ ಉದಾಹರಣೆಯಾಗಿತ್ತು.
ಇದಕ್ಕೂ ಮುಂದೆ, ನವೆಂಬರ್ 23, 2025ರಂದು ಸಾಯಿಬಾಬಾ ಅವರ ಜನ್ಮ 100ನೇ ವಾರ್ಷಿಕೋತ್ಸವದ ಸಂದರ್ಭದಲ್ಲೂ ಮಡುರೊ ಸರ್ಕಾರ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿ ಗೌರವ ಸಲ್ಲಿಸಿತ್ತು.
ಡ್ರಗ್ಸ್ ಮಾಫಿಯಾಗೆ ಉತ್ತೇಜನ ನೀಡಿದ ಆರೋಪದಡಿ ಅಮೆರಿಕ ನಿಕೋಲಾಸ್ ಮಡುರೊ ಅವರನ್ನು ಬಂಧಿಸಿರುವುದಾಗಿ ಘೋಷಿಸಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, “ಮಡುರೊಗೆ ಹಲವು ಬಾರಿ ಎಚ್ಚರಿಕೆ ನೀಡಲಾಗಿತ್ತು. ಆದರೆ ಆತ ಡ್ರಗ್ಸ್ ಜಾಲವನ್ನು ಪೋಷಿಸುತ್ತಿದ್ದ. ಇದು ಅಮೆರಿಕದ ಭದ್ರತೆಗೆ ಭಾರಿ ಬೆದರಿಕೆ ಆಗಿತ್ತು” ಎಂದು ಹೇಳಿದ್ದಾರೆ.
‘ಆಪರೇಷನ್ ಅಬ್ಸಲ್ಯೂಟ್ ರಿಸಾಲ್ವ್’ ಹೆಸರಿನ ಸೇನಾ ಕಾರ್ಯಾಚರಣೆಯಲ್ಲಿ ಎಫ್-18, ಎಫ್-22, ಎಫ್-35 ಯುದ್ಧ ವಿಮಾನಗಳು, ಬಿ-1 ಬಾಂಬರ್‌ಗಳು ಮತ್ತು ಡ್ರೋನ್‌ಗಳು ಸೇರಿ 150ಕ್ಕೂ ಹೆಚ್ಚು ಯುದ್ಧ ವಿಮಾನಗಳನ್ನು ಬಳಸಲಾಗಿದೆ ಎನ್ನಲಾಗಿದೆ. ಕ್ಯಾರಕಸ್‌ನಲ್ಲಿನ ಅಧ್ಯಕ್ಷೀಯ ನಿವಾಸದ ಸುರಕ್ಷಿತ ಕೊಠಡಿಗೆ ಮಡುರೊ ತಲುಪುವ ಮೊದಲೇ ಅಮೆರಿಕ ಸೇನೆ ಅವರನ್ನು ವಶಕ್ಕೆ ಪಡೆದಿದೆ ಎಂಬುದಾಗಿ ಹೇಳಲಾಗಿದೆ.





