ಕೆನಡಾದ ಮಾಜಿ ಪ್ರಧಾನಿ ಜಸ್ಟಿನ್ ಟ್ರುಡೊ ಮತ್ತು ಖ್ಯಾತ ಗಾಯಕಿ ಕೇಟಿ ಪೆರ್ರಿ ಅವರಿಬ್ಬರ ನಡುವಿನ ಊಹಾಪೋಹಗಳು ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಸದ್ದು ಮಾಡುತ್ತಿವೆ. ಕಳೆದ ಸೆಪ್ಟೆಂಬರ್‌ನಲ್ಲಿ ಕ್ಯಾಲಿಫೋರ್ನಿಯಾದ ಸಾಂಟಾ ಬಾರ್ಬರಾ ಕರಾವಳಿಯಲ್ಲಿ ತೆಗೆದ ಚಿತ್ರವೊಂದರಲ್ಲಿ ಈ ಜೋಡಿ ತಬ್ಬಿಕೊಂಡು ಚುಂಬಿಸುತ್ತಿರುವುದು ಕಂಡುಬಂದಿದೆ. ಈ ಫೋಟೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಕೇಟಿ ಪೆರ್ರಿ ಕಪ್ಪು ಬಣ್ಣದ ಈಜುಡುಗೆಯಲ್ಲಿ ಕಾಣಿಸಿಕೊಂಡಿದ್ದು, ಜಸ್ಟಿನ್ ಟ್ರುಡೊ ಶರ್ಟ್‌ರಹಿತವಾಗಿ ಜೀನ್ಸ್ ಧರಿಸಿದ್ದರು. ಈ ಚಿತ್ರವನ್ನು ತೆಗೆದ ಒಬ್ಬ ಪ್ರತ್ಯಕ್ಷದರ್ಶಿಯೊಬ್ಬರು, ಈ ಜೋಡಿ ತಿಮಿಂಗಿಲ ವೀಕ್ಷಣೆಗಾಗಿ ದೋಣಿಯನ್ನು ನಿಲ್ಲಿಸಿ, ಏಕಾಂತದಲ್ಲಿ ಸಮಯ ಕಳೆದಿದ್ದಾರೆ ಎಂದು ತಿಳಿಸಿದ್ದಾರೆ. “ಟ್ರುಡೊ ಅವರ ತೋಳಿನ ಹಚ್ಚೆಯನ್ನು ನೋಡುವವರೆಗೂ ಕೇಟಿ ಯಾರೊಂದಿಗೆ ಇದ್ದಾಳೆಂದು ತಿಳಿದಿರಲಿಲ್ಲ. ಬಳಿಕ ಅದು ಜಸ್ಟಿನ್ ಟ್ರುಡೊ ಎಂದು ಗೊತ್ತಾಯಿತು,” ಎಂದು ಆ ಪ್ರತ್ಯಕ್ಷದರ್ಶಿ ಮಾಧ್ಯಮವೊಂದಕ್ಕೆ ಹೇಳಿದ್ದಾರೆ.
ಈ ಘಟನೆಯ ಮೊದಲು, ಕಳೆದ ಜುಲೈನಲ್ಲಿ ಈ ಜೋಡಿ ಮಾಂಟ್ರಿಯಲ್‌ನ ರೆಸ್ಟೋರೆಂಟ್‌ವೊಂದರಲ್ಲಿ ಜೊತೆಯಾಗಿ ಕಾಣಿಸಿಕೊಂಡಿತ್ತು. ಈ ಘಟನೆಯಿಂದಾಗಿ ಇವರಿಬ್ಬರು ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಊಹಾಪೋಹಗಳು ಶುರುವಾಗಿದ್ದವು. ಅನಂತರ, ಮೌಂಟ್ ರಾಯಲ್ ಪಾರ್ಕ್‌ನಲ್ಲಿ ಇವರಿಬ್ಬರು ಸುತ್ತಾಡುತ್ತಿರುವ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದವು.
ಕೇಟಿ ಪೆರ್ರಿ ಈ ವರ್ಷದ ಆರಂಭದಲ್ಲಿ ನಟ ಓರ್ಲ್ಯಾಂಡ್ ಬ್ಲೂಮ್ ಅವರೊಂದಿಗಿನ ಸಂಬಂಧವನ್ನು ಕೊನೆಗೊಳಿಸಿದ್ದರು. ಇದೇ ರೀತಿ, ಜಸ್ಟಿನ್ ಟ್ರುಡೊ ಕೂಡ 2023 ರಲ್ಲಿ ತಮ್ಮ ಪತ್ನಿ ಸೋಫಿ ಗ್ರೆಗೊಯಿರ್ ಅವರೊಂದಿಗಿನ ವೈವಾಹಿಕ ಸಂಬಂಧವನ್ನು ಮುರಿದುಕೊಂಡಿದ್ದರು. ಈ ಘಟನೆಗಳ ನಂತರ ಇವರಿಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ದು, ಜನರ ಗಮನ ಸೆಳೆದಿದೆ.
ಈ ವೈರಲ್ ಚಿತ್ರಗಳ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ವಿವಿಧ ಪ್ರತಿಕ್ರಿಯೆಗಳು ಕೇಳಿಬಂದಿವೆ. ಕೆಲವರು ಈ ಜೋಡಿಯನ್ನು ಸಮರ್ಥಿಸಿದರೆ, ಇನ್ನೂ ಕೆಲವರು ಇದು ಕೇವಲ ವದಂತಿಯಷ್ಟೇ ಎಂದು ವಾದಿಸಿದ್ದಾರೆ. ಆದರೆ, ಈ ಚಿತ್ರಗಳು ಖಂಡಿತವಾಗಿಯೂ ಜನರ ಕುತೂಹಲವನ್ನು ಕೆರಳಿಸಿವೆ. ಜಸ್ಟಿನ್ ಟ್ರುಡೊ ಮತ್ತು ಕೇಟಿ ಪೆರ್ರಿ ತಮ್ಮ ಸಂಬಂಧವನ್ನು ಅಧಿಕೃತವಾಗಿ ದೃಢಪಡಿಸಿಲ್ಲವಾದರೂ, ಈ ಚಿತ್ರಗಳು ಇವರಿಬ್ಬರ ನಡುವಿನ ಒಡನಾಟವನ್ನು ಸೂಚಿಸುತ್ತವೆ.