ಕಾಠ್ಮಂಡು: ನೇಪಾಳದ ಕಾಠ್ಮಂಡುವಿನಲ್ಲಿ ನಡೆದ ಜನ್‌ಜಿ (Gen Z) ಪ್ರತಿಭಟನೆಗಳ ಉಗ್ರ ಸ್ವರೂಪದಿಂದಾಗಿ ಉತ್ತರ ಪ್ರದೇಶದ ಗಾಜಿಯಾಬಾದ್ ಮೂಲದ 57 ವರ್ಷದ ಮಹಿಳೆಯೊಬ್ಬರು ಹೊಟೇಲ್‌ನಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದಾಗ ಸಾವನ್ನಪ್ಪಿರುವ ಘಟನೆ ನಡೆದಿದೆ.
ರಾಜೇಶ್ ಗೋಲಾ ಎಂಬ ಈ ಮಹಿಳೆ, ಸೆಪ್ಟೆಂಬರ್ 7ರಂದು ತಮ್ಮ ಪತಿ ರಾಮವೀರ್ ಸಿಂಗ್ ಗೋಲಾ ಅವರೊಂದಿಗೆ ನೇಪಾಳಕ್ಕೆ ಭೇಟಿಗಾಗಿ ತೆರಳಿದ್ದರು ಮತ್ತು ಕಾಠ್ಮಂಡುವಿನ ಹಯಾತ್ ರೀಜೆನ್ಸಿ ಹೋಟೆಲ್‌ನಲ್ಲಿ ತಂಗಿದ್ದರು. ಆದರೆ, ಸೆಪ್ಟೆಂಬರ್ 9ರಂದು “ಜನ್‌ಜಿ” ಪ್ರತಿಭಟನೆಗಳು ತೀವ್ರಗೊಂಡಾಗ, ಪ್ರತಿಭಟನಾಕಾರರು ಹೋಟೆಲ್‌ಗೆ ಬೆಂಕಿ ಹಚ್ಚಿದರು.
ತಪ್ಪಿಸಿಕೊಳ್ಳುವ ಪ್ರಯತ್ನ:
ಬೆಂಕಿಯಿಂದ ತಪ್ಪಿಸಿಕೊಳ್ಳಲು ರಾಜೇಶ್ ಗೋಲಾ ಕಿಟಕಿಯ ಮೂಲಕ ಜಿಗಿಯಲು ಯತ್ನಿಸಿದರು. ಬೆಂಕಿಯು ಎಲ್ಲಾ ತಪ್ಪಿಸಿಕೊಳ್ಳುವ ಮಾರ್ಗಗಳನ್ನು ಮುಚ್ಚಿತ್ತಿದ್ದಂತೆ ರಕ್ಷಕರು ನೆಲದ ಮೇಲೆ ಹಾಸಿಗೆಗಳನ್ನು ಇರಿಸಿ, ಕಿಟಕಿಯಿಂದ ಜಿಗಿಯುವಂತೆ ಸೂಚಿಸಿದರು.
ರಾಜೇಶ್ ಗೋಲಾ ಮತ್ತು ರಾಮವೀರ್ ಸಿಂಗ್ ಗೋಲಾ ನಾಲ್ಕನೇ ಮಹಡಿಯಿಂದ ಹಾಸಿಗೆಯ ಮೇಲೆ ಜಿಗಿದರು. ರಾಮವೀರ್‌ಗೆ ಸಣ್ಣಪುಟ್ಟ ಗಾಯಗಳಾದರೆ, ರಾಜೇಶ್ ಗೋಲಾ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಮೃತಪಟ್ಟರು. ಅವರ ಮಗ ವಿಶಾಲ್ ಗೋಲಾ, ಸುದ್ದಿಗಾರರೊಂದಿಗೆ ಮಾತನಾಡುತ್ತಾ, “ತಪ್ಪಿಸಿಕೊಳ್ಳುವ ಸಂದರ್ಭದಲ್ಲಿ ನನ್ನ ತಾಯಿಯನ್ನು ತಂದೆಯಿಂದ ಬೇರ್ಪಡಿಸಲಾಯಿತು. ಒಂದುವೇಳೆ ತಾಯಿ ತಂದೆಯೊಂದಿಗೆ ಇದ್ದಿದ್ದರೆ, ಅವರು ಜೀವಂತವಾಗಿರುತ್ತಿದ್ದರು” ಎಂದು ಭಾವುಕರಾಗಿ ಹೇಳಿದ್ದಾರೆ.
 
			





 
                             
                             
                             
                             
                            