ಕರಾಚಿ: ಪಾಕಿಸ್ತಾನದ ಕರಾಚಿಯಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಕರಾಚಿಯ ಸದರ್ ಪ್ರದೇಶದಲ್ಲಿರುವ ಪ್ರಸಿದ್ಧ ಗುಲ್ ಪ್ಲಾಜಾ (Gul Plaza Mall) ಶಾಪಿಂಗ್ ಮಾಲ್‌ನಲ್ಲಿ ಸಂಭವಿಸಿದ ಬೆಂಕಿ ದುರಂತದಲ್ಲಿ ಈವರೆಗೆ 61 ಮಂದಿ ಸಾವನ್ನಪ್ಪಿರುವುದು ಖಚಿತವಾಗಿದ್ದು,ಸಾವಿನ ಸಂಕ್ಯೆ ಇನ್ನು ಹೆಚ್ಚಾಗುವ ಸಾಧ್ಯತೆ ಇದೆ.
ಒಂದೇ ಮಳಿಗೆಯಲ್ಲಿ 30 ಶವಗಳ ರಾಶಿ
ಅಗ್ನಿಶಾಮಕ ದಳದ ಕಾರ್ಯಾಚರಣೆಯ ವೇಳೆ ಅಧಿಕಾರಿಗಳು ಮಾಲ್ ಒಳಗೆ ಹೋದಾಗ ಕಂಡ ದೃಶ್ಯ ಅತ್ಯಂತ ಭಯಾನಕ. ಮಾಲ್‌ನ ಒಳಗಿದ್ದ ದುಬೈ ಕ್ರಾಕರಿ ಎಂಬ ಕೇವಲ ಒಂದೇ ಒಂದು ಮಳಿಗೆಯಲ್ಲಿ ಸುಮಾರು 30 ಶವಗಳು ಪತ್ತೆಯಾಗಿವೆ. ಬೆಂಕಿ ಹೊತ್ತಿಕೊಂಡಾಗ ಪ್ರಾಣ ಉಳಿಸಿಕೊಳ್ಳಲು ಗ್ರಾಹಕರು ಮತ್ತು ಸಿಬ್ಬಂದಿ ಮಳಿಗೆಯ ಒಳಗೆ ಹೋಗಿ ಶಟರ್ ಎಳೆದುಕೊಂಡಿದ್ದಾರೆ. ಆದರೆ, ದಟ್ಟವಾದ ಹೊಗೆ ಮತ್ತು ಆಮ್ಲಜನಕದ ಕೊರತೆಯಿಂದಾಗಿ ಆ ಮಳಿಗೆಯಲ್ಲಿದ್ದವರು ಸಾವನ್ನಪ್ಪಿದ್ದಾರೆ.
ಜನವರಿ 17 ರಂದು ಮಾಲ್‌ನ ನೆಲಮಾಳಿಗೆಯಲ್ಲಿ (Basement) ಕಾಣಿಸಿಕೊಂಡ ಸಣ್ಣ ಕಿಡಿ, ಕ್ಷಣಾರ್ಧದಲ್ಲಿ 1,200ಕ್ಕೂ ಹೆಚ್ಚು ಮಳಿಗೆಗಳಿರುವ ಬೃಹತ್ ಕಟ್ಟಡಕ್ಕೆ ವ್ಯಾಪಿಸಿತ್ತು. ಸುಮಾರು 36 ಗಂಟೆಗಳ ಕಾಲ ಸತತ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸಲಾಯಿತಾದರೂ, ಕಟ್ಟಡದ ಒಳಗಿನ ತಾಪಮಾನ ಮತ್ತು ಹೊಗೆಯಿಂದಾಗಿ ಕಾರ್ಯಾಚರಣೆ ಕಷ್ಟಕರವಾಗಿದೆ. ಘಟನೆ ನಡೆದು 5 ದಿನಗಳೇ ಕಳೆದಿದ್ದರೂ ಇಂದಿಗೂ ಶೋಧ ಕಾರ್ಯ ಮುಂದುವರಿದಿದೆ.
ಮೃತಪಟ್ಟವರಲ್ಲಿ 10 ವರ್ಷದ ಮಕ್ಕಳಿಂದ ಹಿಡಿದು 69 ವರ್ಷದ ವೃದ್ಧರವರೆಗೆ ಎಲ್ಲ ವಯೋಮಾನದವರು ಸೇರಿದ್ದಾರೆ. ಶವಾಗಾರಕ್ಕೆ ತರಲಾಗಿರುವ 21 ಶವಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದು, ಡಿಎನ್‌ಎ ಪರೀಕ್ಷೆಯಿಲ್ಲದೆ ಗುರುತು ಪತ್ತೆ ಹಚ್ಚುವುದು ಅಸಾಧ್ಯವಾಗಿದೆ ಎಂದು ತಿಳಿಸಿದ್ದಾರೆ. ಸದ್ಯ 73ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಸಿಂಧ್ ಸರ್ಕಾರದ ತನಿಖಾ ಸಮಿತಿಯ ಮುಖ್ಯಸ್ಥ ಸೈಯದ್ ಹಸನ್ ನಖ್ವಿ, ಈ ಮಾಲ್‌ನಲ್ಲಿ ಅಗ್ನಿಶಾಮಕ ಸುರಕ್ಷತಾ ವ್ಯವಸ್ಥೆಗಳು ಅಂತರಾಷ್ಟ್ರೀಯ ಮಾನದಂಡಗಳಿಗೆ ತಕ್ಕಂತೆ ಇರಲಿಲ್ಲ. ತುರ್ತು ನಿರ್ಗಮನ ದಾರಿಗಳ ಕೊರತೆ ಮತ್ತು ಅಸಮರ್ಪಕ ವೆಂಟಿಲೇಷನ್ ವ್ಯವಸ್ಥೆಯೇ ಇಷ್ಟೊಂದು ದೊಡ್ಡ ಮಟ್ಟದ ಪ್ರಾಣಹಾನಿಗೆ ಕಾರಣವಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸದ್ಯ ಮಾಲ್ ಅನ್ನು ತಾತ್ಕಾಲಿಕವಾಗಿ ಸೀಲ್ ಮಾಡಲಾಗಿದ್ದು, ತನಿಖೆ ಮುಂದುವರಿದಿದೆ.





