ಒಂದೆಡೆ ಸ್ವಿಟ್ಜರ್ ಲೆಂಡ್ ನಲ್ಲಿ ಅಮೆರಿಕ ಮತ್ತು ಇರಾನ್ ನಡುವೆ ಯುದ್ಧ ನಿಲ್ಲಿಸುವ ಕುರಿತು ಮಹತ್ವದ ಶಾಂತಿ ಮಾತುಕತೆಗಳು ಆರಂಭವಾಗಿವೆ. ಆದರೆ ಮತ್ತೊಂದೆಡೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇರಾನ್ ನಾಯಕರ ನಡುವಿನ ತೀವ್ರ ವಾಗ್ದಾಳಿಯು ಜಾಗತಿಕವಾಗಿ ಆತಂಕ ಮೂಡಿಸಿದೆ. ಇಸ್ರೇಲ್ ನಡೆಸಿದ ದಾಳಿಯನ್ನು ಖಂಡಿಸಿ ಇರಾನ್ ಹರ್ಮುಜ್ ಜಲಸಂದಿಯನ್ನು ಮುಚ್ಚಿರುವುದರ ವಿರುದ್ಧ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಕ್ರೋಶ ವ್ಯಕ್ತಪಡಿಸಿದ್ದು, ಇರಾನ್ ಸರ್ಕಾರದ ಮುಖ್ಯಸ್ಥರನ್ನು ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಾ,“ಈ ಕೂಡಲೇ ಜಲಸಂದಿ ತೆರೆಯಿರಿ, ಇಲ್ಲವಾದರೆ ಇರಾನ್ ಉಳಿಯಲ್ಲ”ಎಂದು ಎಚ್ಚರಿಕೆ ನೀಡಿದ್ದಾರೆ.
ಹಾರ್ಮುಜ್ ಜಲಸಂಧಿ ಜಾಗತಿಕ ತೈಲ ವ್ಯಾಪಾರದ ಪ್ರಮುಖ ಮಾರ್ಗವಾಗಿರುವುದರಿಂದ, ಇದರ ಮುಚ್ಚುವಿಕೆ ಅಂತಾರಾಷ್ಟ್ರೀಯ ತೈಲ ಸರಬರಾಜು, ಸಾಗಣೆ ಮತ್ತು ಬೆಲೆಗಳ ಮೇಲೆ ದೊಡ್ಡ ಪರಿಣಾಮ ಬೀರುವ ಆತಂಕ ಹೆಚ್ಚಾಗಿದೆ.
ಜಲಸಂದಿ ಮುಚ್ಚುವಿಕೆ ಹಿಂದಿನ ಹಿನ್ನೆಲೆ
ಇತ್ತೀಚೆಗೆ ಲೆಬನಾನಿನ ಹಿಜ್ಬುಲ್ಲಾ ಉಗ್ರ ಸಂಘಟನೆಯ ಮೇಲೆ ಇಸ್ರೇಲ್ ನಡೆಸಿದ ದಾಳಿಯನ್ನು ತೀವ್ರವಾಗಿ ಖಂಡಿಸಿ, ಪ್ರತೀಕಾರದ ಕ್ರಮವಾಗಿ ಇರಾನ್ ತನ್ನ ಕಾರ್ಯತಂತ್ರದ ಪ್ರಮುಖ ಸಮುದ್ರ ಮಾರ್ಗವಾದ ಹರ್ಮುಜ್ ಜಲಸಂದಿಯನ್ನು ಮುಚ್ಚುವ ನಿರ್ಧಾರ ಕೈಗೊಂಡಿತ್ತು. ವಿಶ್ವದ ತೈಲ ಪೂರೈಕೆಯ ಸುಮಾರು 20% ಈ ಜಲಸಂದಿ ಮೂಲಕವೇ ಸಾಗುತ್ತದೆ. ಇರಾನ್ ನ ಈ ನಡೆಗೆ ಅಮೆರಿಕ ಅಧ್ಯಕ್ಷ ಟ್ರಂಪ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಟ್ರೂತ್ ಸೋಷಿಯಲ್’ ನಲ್ಲಿ ಪೋಸ್ಟ್
ತಮ್ಮದೇ ಆದ ಸಾಮಾಜಿಕ ಜಾಲತಾಣ ‘ಟ್ರೂತ್ ಸೋಷಿಯಲ್’ ನಲ್ಲೂ ಈ ಕುರಿತು ಪೋಸ್ಟ್ ಮಾಡಿರುವ ಟ್ರಂಪ್, ಇರಾನ್ ಸರ್ಕಾರದ ಮುಖ್ಯಸ್ಥರನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಅವರು ತಮ್ಮ ಪೋಸ್ಟ್ ನಲ್ಲಿ, “ಇರಾನ್ ತಕ್ಷಣ ಹರ್ಮುಜ್ ಜಲಸಂದಿಯನ್ನು ತೆರೆಯಬೇಕು. ಇಲ್ಲದಿದ್ದರೆ ಅಮೆರಿಕ ಇನ್ನಷ್ಟು ತೀವ್ರ ಸ್ವರೂಪದ ದಾಳಿ ನಡೆಸಲಿದೆ. ಇರಾನ್ ನ ಅಸ್ತಿತ್ವವೇ ಅಪಾಯದಲ್ಲಿದೆ” ಎಂದು ಎಚ್ಚರಿಸಿದ್ದಾರೆ.
ಟ್ರಂಪ್ ಅವರ ಈ ಬೆದರಿಕೆಯನ್ನು ಇರಾನ್‌ನ ಮುಖ್ಯ ಸಮಾಲೋಚಕ ಮೊಹಮ್ಮದ್ ಬಘರ್ ಘಲಿಬಾಫ್ ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ. ಅಮೆರಿಕದ ಬೆದರಿಕೆಗಳಿಗೆ ನಾವು ಯಾವುದೇ ಬೆಲೆ ಕೊಡುವುದಿಲ್ಲ. ಟ್ರಂಪ್ ತಮ್ಮ ಹೇಳಿಕೆಗಳನ್ನು ನೀಡುವಾಗ ಜಾಗರೂಕರಾಗಿರಬೇಕು. ಅವರ ಬೆದರಿಕೆಗಳು ನಿಜವಾಗಿಯೂ ಕೆಲಸ ಮಾಡುತ್ತಿದ್ದರೆ, ಇಂದು ಅಮೆರಿಕ ಈ ಮಟ್ಟದ ಹತಾಶೆಗೆ ತಲುಪುತ್ತಿರಲಿಲ್ಲ ಎಂದು ಗಾಲಿಬಾಫ್ ಸವಾಲು ಹಾಕಿದ್ದಾರೆ. ಎಷ್ಟು ಬೇಕಾದರೂ ಮಾತನಾಡಿಕೊಳ್ಳಲಿ, ನಮ್ಮ ಸಶಸ್ತ್ರ ಪಡೆಗಳು ವಿಭಿನ್ನವಾಗಿ ಪ್ರತಿಕ್ರಿಯಿಸಲು ಸಜ್ಜಾಗಿವೆ. ನಾವು ಕೇವಲ ಮಾತನಾಡುವವರಲ್ಲ, ಯುದ್ಧಭೂಮಿಯಲ್ಲಿ ಕಾರ್ಯನಿರ್ವಹಿಸುವವರು ಎಂದು ಪ್ರತ್ಯುತ್ತರ ನೀಡಿದ್ದಾರೆ.
ವಾಗ್ದಾಳಿಯ ನಡುವೆಯೂ ಮಾತುಕತೆ ಮುಂದುವರಿಕೆ
ಈ ತೀವ್ರ ವಾಗ್ದಾಳಿಗಳ ನಡುವೆಯೂ ಸ್ವಿಟ್ಜರ್ ಲೆಂಡ್ ನಲ್ಲಿ ಉಭಯ ದೇಶಗಳ ಮುಖಂಡರು ಶಾಂತಿ ಮಾತುಕತೆ ನಡೆಸುತ್ತಿದ್ದಾರೆ. ಅಮೆರಿಕ ಪರವಾಗಿ ಉಪಾಧ್ಯಕ್ಷ ಜೆಡಿ ವ್ಯಾನ್ಸ್, ಟ್ರಂಪ್ ಅವರ ಅಳಿಯ ಜೇರೆಡ್ ಕುಶ್ನರ್ ಮತ್ತು ವಿಶೇಷ ರಾಯಭಾರಿ ಸ್ಟೀವನ್ ಚಾರ್ಲ್ಸ್ ವಿಟ್‌ಕಾಫ್ ಚರ್ಚೆಯಲ್ಲಿ ಭಾಗವಹಿಸಿದ್ದಾರೆ.





