ಅಮೆರಿಕಾದಿಂದ ಜಗತ್ತಿನಾದ್ಯಂತ ರಫ್ತಾಗುವ ಅತ್ಯಂತ ಜನಪ್ರಿಯ ಸಿಹಿ ಮಿಠಾಯಿ ಬ್ರ್ಯಾಂಡ್ ಜಾಲಿ ರಾಂಚರ್ (Jolly Rancher) ಈಗ ಭಾರೀ ವಿವಾದಕ್ಕೆ ಸಿಲುಕಿದೆ. ಈ ಮಿಠಾಯಿಗಳಲ್ಲಿ ಕ್ಯಾನ್ಸರ್ ಉಂಟುಮಾಡುವ ಅಪಾಯಕಾರಿ ರಾಸಾಯನಿಕಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ, ಬ್ರಿಟನ್ (UK) ಸರ್ಕಾರವು ಮಾರುಕಟ್ಟೆಯಿಂದ ಈ ಉತ್ಪನ್ನಗಳನ್ನು ತುರ್ತಾಗಿ ವಾಪಸ್ ಪಡೆಯಲು (Recall) ಆದೇಶಿಸಿದೆ.
ಪತ್ತೆಯಾದ ಅಪಾಯಕಾರಿ ರಾಸಾಯನಿಕಗಳು ಯಾವುವು?
ಬ್ರಿಟನ್‌ನ ಆಹಾರ ಸುರಕ್ಷತಾ ಸಂಸ್ಥೆ (FSA) ನಡೆಸಿರುವ ತಪಾಸಣೆಯಲ್ಲಿ ಈ ಮಿಠಾಯಿಗಳಲ್ಲಿ ಎರಡು ಪ್ರಮುಖ ಖನಿಜ ತೈಲ ರಾಸಾಯನಿಕಗಳು ಪತ್ತೆಯಾಗಿವೆ:
-
MOAH (Mineral Oil Aromatic Hydrocarbons): ಇದು ಅತ್ಯಂತ ಅಪಾಯಕಾರಿ ರಾಸಾಯನಿಕವಾಗಿದ್ದು, ಮಾನವನ ಡಿಎನ್ಎ (DNA) ರಚನೆಯನ್ನೇ ಹಾನಿಗೊಳಿಸುವ ಸಾಮರ್ಥ್ಯ ಹೊಂದಿದೆ.
-
MOSH (Mineral Oil Saturated Hydrocarbons): ಇವು ಮಾನವನ ದೇಹದ ಅಂಗಾಂಗಗಳಲ್ಲಿ ಸಂಗ್ರಹವಾಗಿ ದೀರ್ಘಕಾಲದ ಆರೋಗ್ಯ ಸಮಸ್ಯೆಗಳನ್ನು ತಂದೊಡ್ಡುತ್ತವೆ.
ಬ್ರಿಟನ್‌ನ ಕಟ್ಟುನಿಟ್ಟಾದ ಆಹಾರ ನಿಯಮಗಳ ಪ್ರಕಾರ, ಆಹಾರ ಪದಾರ್ಥಗಳಲ್ಲಿ ಈ ರಾಸಾಯನಿಕಗಳ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಕ್ಯಾನ್ಸರ್ ಭೀತಿ
ವಿಶೇಷವಾಗಿ ಈ ಮಿಠಾಯಿಗಳನ್ನು ಮಕ್ಕಳು ಅತಿಯಾಗಿ ಇಷ್ಟಪಟ್ಟು ತಿನ್ನುತ್ತಾರೆ. ಎಫ್‌ಎಸ್‌ಎ ತಿಳಿಸಿದ ಪ್ರಕಾರ, MOAH ರಾಸಾಯನಿಕವು ಕ್ಯಾನ್ಸರ್‌ಕಾರಕ (Carcinogenic) ಗುಣವನ್ನು ಹೊಂದಿದೆ. ಸಣ್ಣ ವಯಸ್ಸಿನ ಮಕ್ಕಳು ಇಂತಹ ರಾಸಾಯನಿಕಯುಕ್ತ ಮಿಠಾಯಿಗಳನ್ನು ಸೇವಿಸುವುದರಿಂದ ಅವರ ಬೆಳವಣಿಗೆಯ ಮೇಲೆ ಗಂಭೀರ ಪರಿಣಾಮ ಬೀರುವುದಲ್ಲದೆ, ಭವಿಷ್ಯದಲ್ಲಿ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ವೈದ್ಯಕೀಯ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.
ಜಾಲಿ ರಾಂಚರ್ ಬ್ರ್ಯಾಂಡ್‌ನ ಪ್ರಮುಖ ಉತ್ಪನ್ನಗಳಾದ ಜಾಲಿ ರಾಂಚರ್ ಹಾರ್ಡ್ ಕ್ಯಾಂಡಿ (Hard Candy), ಮಿಸ್‌ಫಿಟ್ಸ್ ಗಮ್ಮೀಸ್ (Misfits Gummies), ಹಾರ್ಡ್ ಕ್ಯಾಂಡಿ ಫ್ರೂಟಿ 2 ಇನ್ 1, ಬೆರಿ ಗಮ್ಮೀಸ್ (Berry Gummies), ಫಿಲ್ಡ್ ಪಾಪ್ಸ್ (Filled Pops), ಫ್ರೀಜ್ ಡ್ರೈಡ್ ಕ್ಯಾಂಡಿ (Freeze Dried Candy) ಗಳನ್ನ ಮಾರುಕಟ್ಟೆಯಿಂದ ತೆಗೆದುಹಾಕಲಾಗುತ್ತಿದೆ.
ಈ ಉತ್ಪನ್ನಗಳ ತಯಾರಕ ಸಂಸ್ಥೆಯಾದ ಅಮೆರಿಕದ ‘ದಿ ಹರ್ಷ ಕಂಪನಿ’ (The Hershey Company) ಈಗಾಗಲೇ ಬ್ರಿಟನ್ ಮಾರುಕಟ್ಟೆಗೆ ಅಧಿಕೃತ ಪೂರೈಕೆಯನ್ನು ನಿಲ್ಲಿಸಿದೆ. ಆದರೂ, ಮೂರನೇ ವ್ಯಕ್ತಿಗಳ ಮೂಲಕ (Import) ಆಮದು ಮಾಡಿಕೊಳ್ಳಲಾಗುತ್ತಿದ್ದ ಈ ಮಿಠಾಯಿಗಳನ್ನು ಈಗ ಸಂಪೂರ್ಣವಾಗಿ ವಾಪಸ್ ಪಡೆಯಲಾಗುತ್ತಿದೆ. ಗ್ರಾಹಕರು ಒಂದು ವೇಳೆ ಈ ಮಿಠಾಯಿಗಳನ್ನು ಈಗಾಗಲೇ ಖರೀದಿಸಿದ್ದರೆ, ಅವುಗಳನ್ನು ಯಾವುದೇ ಕಾರಣಕ್ಕೂ ಸೇವಿಸದೆ ವಿಲೇವಾರಿ ಮಾಡಲು ಸೂಚಿಸಲಾಗಿದೆ.





