ಮಿಯಾಮಿ: ಜಗತ್ತನ್ನೇ ಬೆಚ್ಚಿಬೀಳಿಸಿದ್ದ ಲೈಂಗಿಕ ಹಗರಣದ ರೂವಾರಿ ಜೆಫ್ರಿ ಎಪ್‌ಸ್ಟೈನ್ 2019ರಲ್ಲೇ ಜೈಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ಅಧಿಕೃತ ಮಾಹಿತಿ. ಆದರೆ, ಅವರು ಇಂದಿಗೂ ಬದುಕಿದ್ದಾರೆ ಎಂಬ ವದಂತಿಗದೆ. ಅದಕ್ಕೆ ಸಾಕ್ಷಿಯಂತೆ ಇತ್ತೀಚೆಗೆ ಫ್ಲೋರಿಡಾದ ರಸ್ತೆಯೊಂದರಲ್ಲಿ ಎಪ್‌ಸ್ಟೈನ್ ಅವರನ್ನು ಹೋಲುವ ವ್ಯಕ್ತಿಯೊಬ್ಬರು ಕಾರು ಚಲಾಯಿಸುತ್ತಿರುವ ವಿಡಿಯೋ ವೈರಲ್ ಆಗಿದ್ದು, ಜನರಲ್ಲಿ ತೀವ್ರ ಕುತೂಹಲ ಮೂಡಿಸಿತ್ತು.
ವೈರಲ್ ವಿಡಿಯೋದಲ್ಲೇನಿತ್ತು ?
ಮಾರ್ಚ್ 13 ರಂದು ಫ್ಲೋರಿಡಾದ ಆಂದ್ರೂ ಪೋಸಿ ಎಂಬುವವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದರು. ಅದರಲ್ಲಿ ಸನ್‌ಗ್ಲಾಸ್ ಮತ್ತು ಬಿಳಿ ಟೋಪಿ ಧರಿಸಿದ್ದ ವೃದ್ಧರೊಬ್ಬರು ಐಷಾರಾಮಿ ಕಾರನ್ನು ಚಲಾಯಿಸುತ್ತಿದ್ದರು. ನೋಡಲು ಅಕ್ಷರಶಃ ಜೆಫ್ರಿ ಎಪ್‌ಸ್ಟೈನ್ ರೀತಿಯೇ ಇದ್ದ ಆ ವ್ಯಕ್ತಿಯನ್ನು ನೋಡಿ ಆಂದ್ರೂ ಪೋಸಿ ಅವರು, ಎಪ್‌ಸ್ಟೈನ್ ದಕ್ಷಿಣ ಫ್ಲೋರಿಡಾದಲ್ಲಿ ಪ್ರತ್ಯಕ್ಷವಾಗಿದ್ದಾರೆ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋ ಪೋಸ್ಟ್ ಮಾಡಿದ್ದರು. ಈ ವಿಡಿಯೋ ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ವೀಕ್ಷಣೆ ಕಂಡು ಜಾಗತಿಕ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿತ್ತು.
ವಿಡಿಯೋ ವಿಪರೀತ ವೈರಲ್ ಆಗುತ್ತಿದ್ದಂತೆ, ಅದರಲ್ಲಿ ಕಾಣಿಸಿಕೊಂಡಿದ್ದ ವ್ಯಕ್ತಿ ಸ್ವತಃ ಮುಂದೆ ಬಂದು ಸ್ಪಷ್ಟನೆ ನೀಡಿದ್ದಾರೆ. ಆ ವ್ಯಕ್ತಿಯ ಹೆಸರು ಪಾಮ್ ಬೀಚ್ ಪೀಟ್. ಅವರು ಮತ್ತೊಂದು ವಿಡಿಯೋ ಬಿಡುಗಡೆ ಮಾಡಿ, ನಾನು ಜೆಫ್ರಿ ಎಪ್‌ಸ್ಟೈನ್ ಅಲ್ಲ, ದಯವಿಟ್ಟು ವದಂತಿಗಳನ್ನು ಹರಡಬೇಡಿ ಎಂದು ವಿನಂತಿಸಿದ್ದಾರೆ.
NEW: Man who went viral for looking like Jeffrey Epstein speaks out.
“I’m not Jeffrey Epstein, I’m Palm Beach Pete.” pic.twitter.com/0B1CmQcukZ
— E X X ➠A L E R T S (@ExxAlerts) March 19, 2026
ತಮ್ಮ ಹಿನ್ನೆಲೆಯ ಬಗ್ಗೆ ಮಾಹಿತಿ ನೀಡಿರುವ ಪೀಟ್, ನಾನು ಒಬ್ಬ ಮಾಜಿ ಟೆನ್ನಿಸ್ ಆಟಗಾರ ಮತ್ತು ಚಿನ್ನದ ಪದಕ ವಿಜೇತ ಕ್ರೀಡಾಪಟು. ವಿಡಿಯೋ ರೆಕಾರ್ಡ್ ಮಾಡುವ ಸಮಯದಲ್ಲಿ ನಾನು ಟೆನ್ನಿಸ್ ಆಡಲು ಹೋಗುತ್ತಿದ್ದೆ. ನಾನು ಫ್ಲೋರಿಡಾದ ಸೊಹೊದಲ್ಲಿ ವಾಸವಾಗಿದ್ದೇನೆ ಎಂದು ಹೇಳಿದ್ದಾರೆ. ಪ್ರಸ್ತುತ ಅವರು ಫ್ಯಾಷನ್ ಉದ್ಯಮಿಯಾಗಿದ್ದು, ಈ ಹಿಂದೆ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಕಾರ್ಯನಿರ್ವಾಹಕರಾಗಿ ಕೆಲಸ ಮಾಡಿದ್ದಾಗಿ ತಿಳಿಸಿದ್ದಾರೆ.
ಜೆಫ್ರಿ ಎಪ್‌ಸ್ಟೈನ್ ಅವರ ಸಾವು ಹಲವು ನಿಗೂಢ ಪ್ರಶ್ನೆಗಳನ್ನು ಹುಟ್ಟುಹಾಕಿತ್ತು. ಅವರು ಜೈಲಿನಲ್ಲಿ ಮೃತಪಟ್ಟರೂ, ಪ್ರಭಾವಿ ರಾಜಕಾರಣಿಗಳು ಮತ್ತು ಉದ್ಯಮಿಗಳ ಹಗರಣಗಳನ್ನು ಮುಚ್ಚಿ ಹಾಕಲು ಅವರ ಸಾವನ್ನು ನಾಟಕವಾಡಲಾಗಿದೆ ಎಂಬ ವಾದಗಳು ಇನ್ನೂ ಜೀವಂತವಾಗಿವೆ. ಇದೇ ಕಾರಣಕ್ಕೆ ಅವರನ್ನು ಹೋಲುವ ಯಾವುದೇ ವ್ಯಕ್ತಿ ಕಂಡರೂ ಜನರು ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದ ಚರ್ಚೆ ಆರಂಭಿಸುತ್ತಾರೆ.





