ಟೋಕಿಯೊ: ಜಪಾನ್‌ನ ಉತ್ತರ ಕರಾವಳಿಯಲ್ಲಿಂದು (Japan Coast) ಅತಿ ಪ್ರಬಲವಾದ ಅವಳಿ ಭೂಕಂಪಗಳು ಸಂಭವಿಸಿವೆ. ಯುಎಸ್‌ಜಿಎಸ್ (ಯುನೈಟೆಡ್ ಸ್ಟೇಟ್ಸ್ ಭೂವೈಜ್ಞಾನಿಕ ಸಮೀಕ್ಷೆ – USGS) ನೀಡಿರುವ ವರದಿ ಪ್ರಕಾರ, ಈ ಭೂಕಂಪಗಳು ಉತ್ತರ ಜಪಾನ್‌ನ ಕರಾವಳಿ ಪ್ರದೇಶದಲ್ಲಿ ಸಂಭವಿಸಿದ್ದು, ತಕ್ಷಣವೇ ದೇಶದಲ್ಲಿ ಭಾರೀ ಆತಂಕದ ವಾತಾವರಣ ನಿರ್ಮಾಣವಾಗಿದೆ. ಈ ಭೂಕಂಪಗಳ ಬೆನ್ನಲ್ಲೇ ಜಪಾನ್ ಹವಾಮಾನ ಇಲಾಖೆಯು ದೇಶದ ಈಶಾನ್ಯ ಕರಾವಳಿಗೆ ಭಾರೀ ಸುನಾಮಿ ಎಚ್ಚರಿಕೆಯನ್ನು ನೀಡಿದೆ.
ಈ ಪ್ರದೇಶದಲ್ಲಿ ಸಂಭವಿಸಿದ ಎರಡು ಪ್ರಮುಖ ಭೂಕಂಪಗಳ ವಿವರಗಳನ್ನ ನೋಡುವುದಾದರೇ ಮೊದಲನೆಯದಾಗಿ 7.6 ಮ್ಯಾಗ್ನಿಟ್ಯೂಡ್ (ರಿಕ್ಟರ್ ಮಾಪಕದಲ್ಲಿ) ತೀವ್ರತೆ ಕಂಡುಬಂದಿದ್ದು, ಹಚಿನೋಹೆಯ ಪೂರ್ವ-ಈಶಾನ್ಯಕ್ಕೆ 84 ಕಿ.ಮೀ ದೂರದಲ್ಲಿ ಪತ್ತೆಯಾಗಿದೆ. ಭೂಮಿಯಿಂದ 53.1 ಕಿ.ಮೀ ಆಳದಲ್ಲಿ ಕೇಂದ್ರಬಿಂದು ದಾಖಲಾಗಿದೆ.
ಇನ್ನೂ ಎರಡನೇ ಭೂಕಂಪ 5.5 ಮ್ಯಾಗ್ನಿಟ್ಯೂಡ್ ತೀವ್ರತೆಯಲ್ಲಿ, ಹಚಿನೋಹೆಯ ಪೂರ್ವ-ಈಶಾನ್ಯಕ್ಕೆ 96 ಕಿ.ಮೀ ದೂರದಲ್ಲಿ ಸಂಭವಿಸಿದೆ. ಕರಾವಳಿಯಿಂದ 44.3 ಕಿ.ಮೀ ಆಳದಲ್ಲಿ ಕೇಂದ್ರಬಿಂದು ದಾಖಲಾಗಿದೆ.
ಈ ಎರಡು ಭೂಕಂಪಗಳು ಕಡಿಮೆ ಅವಧಿಯಲ್ಲಿ, ಒಂದೇ ಪ್ರದೇಶದಲ್ಲಿ ಸಂಭವಿಸಿರುವುದರಿಂದ, ಇದನ್ನು ‘ಅವಳಿ ಭೂಕಂಪ’ (Twin Earthquakes) ಎಂದು ವರದಿ ಮಾಡಲಾಗಿದೆ. ಪ್ರಬಲವಾದ 7.6 ತೀವ್ರತೆಯ ಮೊದಲ ಭೂಕಂಪದ ಪರಿಣಾಮವಾಗಿ, ಇಡೀ ಕರಾವಳಿ ಪ್ರದೇಶದಲ್ಲಿ ಭಾರಿ ಕಂಪನದ ಅನುಭವವಾಗಿದೆ.
ಭೂಕಂಪನ ಸಂಭವಿಸಿದ ತಕ್ಷಣವೇ ಜಪಾನ್ ಹವಾಮಾನ ಇಲಾಖೆ (Japan Meteorological Agency – JMA) ಈಶಾನ್ಯ ಕರಾವಳಿಗೆ ಸುನಾಮಿ ಎಚ್ಚರಿಕೆ ನೀಡಿದೆ.
-
ಸುನಾಮಿ ಎತ್ತರ ಸೂಚನೆ: ಹವಾಮಾನ ಇಲಾಖೆಯು ಈಶಾನ್ಯ ಕರಾವಳಿಯುದ್ದಕ್ಕೂ ಸುಮಾರು 10 ಮೀಟರ್ (33 ಅಡಿ) ಎತ್ತರದಷ್ಟು ಸುನಾಮಿ ಅಪ್ಪಳಿಸಬಹುದು ಎಂದು ಸೂಚನೆ ನೀಡಿದೆ. ಈ ಎತ್ತರವು ಪ್ರಬಲ ವಿನಾಶಕ್ಕೆ ಕಾರಣವಾಗುವ ಸಾಮರ್ಥ್ಯ ಹೊಂದಿದೆ.
-
ಪ್ರಭಾವಿತ ಪ್ರಾಂತ್ಯಗಳು: ಹೊಕ್ಕೈಡೊ, ಅಮೋರಿ ಮತ್ತು ಇವಾಟೆ ಪ್ರಾಂತ್ಯಗಳಿಗೆ ತಕ್ಷಣವೇ ಸುನಾಮಿ ಎಚ್ಚರಿಕೆಯನ್ನು ನೀಡಲಾಗಿದೆ.
ವರದಿಗಳ ಪ್ರಕಾರ, ಹಲವಾರು ಬಂದರುಗಳಲ್ಲಿ ಈಗಾಗಲೇ ಸುನಾಮಿ ಅಪ್ಪಳಿಸಿದೆ. ಬಂದರುಗಳಲ್ಲಿ 20 ರಿಂದ 50 ಸೆಂ.ಮೀ (7 ರಿಂದ 18 ಇಂಚು) ಎತ್ತರದ ಸುನಾಮಿ ಅಲೆಗಳು ಅಪ್ಪಳಿಸಿರುವುದಾಗಿ ಜಪಾನ್ ಹವಾಮಾನ ಇಲಾಖೆ ಖಚಿತಪಡಿಸಿದೆ. 10 ಮೀಟರ್ ಎಚ್ಚರಿಕೆ ನೀಡಿದ್ದರೂ, ಆರಂಭಿಕ ಅಲೆಗಳು ಕಡಿಮೆ ಎತ್ತರದಲ್ಲಿರುವುದು ತಾತ್ಕಾಲಿಕ ನೆಮ್ಮದಿ ತಂದಿದೆ. ಆದರೆ ಸಮುದ್ರದೊಳಗಿನ ಒತ್ತಡ ಮತ್ತು ಅಲೆಗಳ ಚಲನವಲನ ಇನ್ನೂ ಇರುವ ಕಾರಣ, ಭಾರಿ ಎತ್ತರದ ಸುನಾಮಿ ಅಲೆಗಳು ಬರಬಹುದು ಎಂಬ ಆತಂಕ ಹಾಗೆಯೇ ಉಳಿದಿದೆ.
ಅವಳಿ ಭೂಕಂಪ ಮತ್ತು ಸುನಾಮಿ ಎಚ್ಚರಿಕೆಗಳನ್ನು ಗಂಭೀರವಾಗಿ ಪರಿಗಣಿಸಿದ ಜಪಾನ್ ಸರ್ಕಾರವು ತಕ್ಷಣವೇ ಎಚ್ಚೆತ್ತುಕೊಂಡಿದೆ.
ಸುರಕ್ಷತಾ ಸೂಚನೆ: ಕರಾವಳಿ ಮತ್ತು ತಗ್ಗು ಪ್ರದೇಶಗಳಲ್ಲಿ ವಾಸಿಸುವ ಜನರನ್ನು ತಕ್ಷಣವೇ ಸುರಕ್ಷಿತ ಎತ್ತರದ ಪ್ರದೇಶಗಳಿಗೆ ತೆರಳುವಂತೆ ಸೂಚಿಸಲಾಗಿದೆ. ಮೀನುಗಾರಿಕಾ ಹಡಗುಗಳು ಮತ್ತು ಇತರೆ ಸಮುದ್ರ ಚಟುವಟಿಕೆಗಳನ್ನು ತಕ್ಷಣವೇ ನಿಲ್ಲಿಸಲು ಆದೇಶಿಸಲಾಗಿದೆ.
ರಕ್ಷಣಾ ತಂಡಗಳ ಸನ್ನದ್ಧತೆ: ಯಾವುದೇ ತುರ್ತು ಪರಿಸ್ಥಿತಿಯನ್ನು ಎದುರಿಸಲು ಮತ್ತು ಸಂತ್ರಸ್ತರನ್ನು ರಕ್ಷಿಸಲು ರಕ್ಷಣಾ ಮತ್ತು ಪರಿಹಾರ ತಂಡಗಳನ್ನು ಸನ್ನದ್ಧಗೊಳಿಸಲಾಗಿದೆ. ಭೂಕಂಪದಿಂದ ಉಂಟಾದ ಹಾನಿ ಮತ್ತು ಸುನಾಮಿಯ ಸಂಪೂರ್ಣ ಪರಿಣಾಮವನ್ನು ಅಳೆಯುವ ಕಾರ್ಯ ನಡೆದಿದೆ.
ಜಪಾನ್ ದೇಶವು ‘ಪೆಸಿಫಿಕ್ ರಿಂಗ್ ಆಫ್ ಫೈರ್’ ಪ್ರದೇಶದಲ್ಲಿದ್ದು, ಆಗಾಗ ಪ್ರಬಲ ಭೂಕಂಪಗಳನ್ನು ಎದುರಿಸುತ್ತದೆ. 2011ರಲ್ಲಿ ಇದೇ ಈಶಾನ್ಯ ಕರಾವಳಿಯಲ್ಲಿ ಸಂಭವಿಸಿದ ಪ್ರಬಲ ಭೂಕಂಪ ಮತ್ತು ಸುನಾಮಿಯಿಂದ ಭಾರಿ ವಿನಾಶ ಸಂಭವಿಸಿತ್ತು. ಆ ಹಿನ್ನೆಲೆಯಲ್ಲಿ, ಪ್ರಸ್ತುತ ಎಚ್ಚರಿಕೆಗಳನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಲಾಗಿದೆ.





