ವಾಷಿಂಗ್ಟನ್, ಮಾರ್ಚ್ 15: ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷ ಮೂರನೇ ವಾರಕ್ಕೆ ಕಾಲಿಟ್ಟಿದ್ದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶನಿವಾರ ನೀಡಿದ ಸಂದರ್ಶನದಲ್ಲಿ ಹಲವು ಮಹತ್ವದ ಹೇಳಿಕೆ ನೀಡಿದ್ದಾರೆ. ಇರಾನ್‌ನ ನೂತನ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ಜೀವಂತವಿಲ್ಲ ಎಂದು ಟ್ರಂಪ್ ಸ್ಪಷ್ಟಪಡಿಸಿದ್ದು, ಇರಾನ್ ಕದನ ವಿರಾಮಕ್ಕೆ ಸಿದ್ಧವಾಗಿದ್ದರೂ ಅಮೆರಿಕ ಅದನ್ನು ಒಪ್ಪಿಕೊಳ್ಳಲು ಸಿದ್ಧವಿಲ್ಲ ಎಂದು ಹೇಳಿದ್ದಾರೆ..
ಎನ್‌ಬಿಸಿ ನ್ಯೂಸ್ ಹಾಗೂ ಫಾಕ್ಸ್ ನ್ಯೂಸ್ ರೇಡಿಯೊಗೆ ನೀಡಿದ ಸಂದರ್ಶನದಲ್ಲಿ ಟ್ರಂಪ್ ಈ ಹೇಳಿಕೆಯನ್ನು ನೀಡಿದ್ದಾರೆ. ಫೆಬ್ರವರಿ 28ರಂದು ಅಮೆರಿಕ-ಇಸ್ರೇಲ್ ಸಂಯುಕ್ತ ದಾಳಿಯ ಬಳಿಕದಿಂದ ಮೊಜ್ತಬಾ ಖಮೇನಿ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಇದು ಹಲವು ಅನುಮಾನಗಳಿಗೆ ಕಾರಣವಾಗಿದೆ..
“ಇಲ್ಲಿಯವರೆಗೆ ಯಾರೂ ಅವರನ್ನು ಸಾರ್ವಜನಿಕವಾಗಿ ತೋರಿಸಲಿಲ್ಲ. ಅವರು ಜೀವಂತವಾಗಿದ್ದರೆ ದೇಶಕ್ಕಾಗಿ ಏನಾದರೂ ನಿರ್ಧಾರ ತೆಗೆದುಕೊಳ್ಳುತ್ತಿದ್ದರು. ಆದರೆ ಇರಾನ್ ಈಗ ಕದನ ವಿರಾಮದ ಮಾತುಗಳವರೆಗೆ ಮಾತ್ರ ಸೀಮಿತವಾಗಿದೆ” ಎಂದು ಟ್ರಂಪ್ ಹೇಳಿದ್ದಾರೆ.
ಮೊಜ್ತಬಾ ಖಮೇನಿ ಅವರು ಇರಾನ್‌ನ ಮಾಜಿ ಸರ್ವೋಚ್ಚ ನಾಯಕನಾದ ಅಲಿ ಖಮೇನಿ ಅವರ ಪುತ್ರರಾಗಿದ್ದಾರೆ. ಫೆಬ್ರವರಿ 28ರಂದು ನಡೆದ ಅಮೆರಿಕ-ಇಸ್ರೇಲ್ ದಾಳಿಯಲ್ಲಿ ಅಲಿ ಖಮೇನಿ ಮೃತಪಟ್ಟ ನಂತರ ಮೊಜ್ತಬಾ ಖಮೇನಿಯನ್ನು ಹೊಸ ನಾಯಕನಾಗಿ ನೇಮಕ ಮಾಡಲಾಗಿದೆ ಎಂಬ ವರದಿಗಳು ಬಂದಿದ್ದವು. ಆದರೆ ಅದಾದ ಬಳಿಕ ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಈ ನಡುವೆ ಟ್ರಂಪ್ ಮತ್ತೊಂದು ಪ್ರಮುಖ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. ಇರಾನ್‌ನ ಪ್ರಮುಖ ತೈಲ ರಫ್ತು ಕೇಂದ್ರವಾಗಿರುವ ಖಾರ್ಗ್ ದ್ವೀಪದ ಮೇಲೆ ಅಮೆರಿಕ ಪಡೆಗಳು ವೈಮಾನಿಕ ದಾಳಿಗಳನ್ನು ನಡೆಸಿವೆ ಎಂದು ಅವರು ಖಚಿತಪಡಿಸಿದ್ದಾರೆ. ಈ ದಾಳಿಯಲ್ಲಿ ಹಲವು ಮಿಲಿಟರಿ ಗುರಿಗಳು ಸಂಪೂರ್ಣವಾಗಿ ನಾಶವಾಗಿವೆ ಎಂದು ಅಮೆರಿಕ ಸೇನಾ ಮೂಲಗಳು ತಿಳಿಸಿವೆ.
ಅಮೆರಿಕದ ಸೆಂಟ್ರಲ್ ಕಮಾಂಡ್ ಪ್ರಕಾರ, ಇದು ಮಧ್ಯಪ್ರಾಚ್ಯದ ಇತಿಹಾಸದಲ್ಲೇ ಅತ್ಯಂತ ಶಕ್ತಿಶಾಲಿ ಬಾಂಬ್ ದಾಳಿಗಳಲ್ಲಿ ಒಂದಾಗಿದೆ. ಖಾರ್ಗ್ ದ್ವೀಪ ಇರಾನ್‌ನ ತೈಲ ರಫ್ತು ವ್ಯವಸ್ಥೆಯ ಪ್ರಮುಖ ಕೇಂದ್ರವಾಗಿದ್ದು, ಅದನ್ನು ಗುರಿಯಾಗಿಸಿಕೊಂಡಿರುವುದು ಯುದ್ಧದ ತೀವ್ರತೆಯನ್ನು ಮತ್ತಷ್ಟು ಹೆಚ್ಚಿಸಿದೆ.
ಟ್ರಂಪ್ ಹೇಳುವಂತೆ, ಇರಾನ್ ಮಾತುಕತೆಗೆ ಸಿದ್ಧವಾಗಿರುವಂತೆ ಕಾಣುತ್ತಿದೆ. ಆದರೆ ಅವರು ವಿಧಿಸಿರುವ ಷರತ್ತುಗಳು ಅಮೆರಿಕ ಒಪ್ಪುವಂತಿಲ್ಲ. ಅಮೆರಿಕ ಮತ್ತು ಇಸ್ರೇಲ್ ತಮ್ಮ ವೈಮಾನಿಕ ದಾಳಿಗಳನ್ನು ಶಾಶ್ವತವಾಗಿ ನಿಲ್ಲಿಸಬೇಕು ಎಂಬುದು ಇರಾನ್‌ನ ಪ್ರಮುಖ ಬೇಡಿಕೆಯಾಗಿದೆ.
ಇದಕ್ಕೆ ಪ್ರತಿಕ್ರಿಯಿಸಿದ ಟ್ರಂಪ್, “ಇರಾನ್ ಮಾತುಕತೆಗೆ ಬಯಸಬಹುದು. ಆದರೆ ಅವರ ಷರತ್ತುಗಳು ಉತ್ತಮವಾಗಿಲ್ಲ. ಅದಕ್ಕಾಗಿ ನಾವು ಈಗ ಮಾತುಕತೆಗೆ ಸಿದ್ಧವಿಲ್ಲ” ಎಂದು ಹೇಳಿದ್ದಾರೆ. ಈ ಹೇಳಿಕೆಯನ್ನು ಅವರು ತಮ್ಮ ಸಾಮಾಜಿಕ ಜಾಲತಾಣವಾದ ಟ್ರೂತ್ ಸೋಷಿಯಲ್‌ನಲ್ಲಿ ಕೂಡ ಹಂಚಿಕೊಂಡಿದ್ದಾರೆ.
ಫೆಬ್ರವರಿ 28ರಂದು ಇಸ್ರೇಲ್ ಮತ್ತು ಅಮೆರಿಕ ಇರಾನ್ ಮೇಲೆ ನಡೆಸಿದ ದಾಳಿಗೆ ಪ್ರತೀಕಾರವಾಗಿ ಟೆಹ್ರಾನ್ ಹಲವು ಮಧ್ಯಪ್ರಾಚ್ಯ ದೇಶಗಳ ಮೇಲೆ ದಾಳಿ ನಡೆಸಿದೆ ಎಂದು ವರದಿಯಾಗಿದೆ.





