ಮಧ್ಯಪ್ರಾಚ್ಯದಲ್ಲಿ ಯುದ್ಧದ ಜ್ವಾಲೆ ಮತ್ತಷ್ಟು ತೀವ್ರಗೊಂಡಿದೆ. ಇರಾನ್ ತನ್ನ ವಾಯು ರಕ್ಷಣಾ ವ್ಯವಸ್ಥೆಯಿಂದ ಅಮೆರಿಕದ ಅತ್ಯಾಧುನಿಕ F-35 ಲೈಟ್ನಿಂಗ್ II ಸ್ಟೆಲ್ತ್ ಯುದ್ಧ ವಿಮಾನವನ್ನು 2ನೇ ಬಾರಿ ಹೊಡೆದುರುಳಿಸಿರುವುದಾಗಿ ಘೋಷಿಸಿದೆ. ಇದು ಅಮೆರಿಕಕ್ಕೆ ದೊಡ್ಡ ಹೊಡೆತ ಎಂದು ಇರಾನ್ ಬಣ್ಣಿಸಿದೆ.
ಇರಾನ್‌ನ ಖತಮ್ ಅಲ್ ಅನ್ಬಿಯಾ ವಾಯು ರಕ್ಷಣಾ ಪಡೆಗಳು ಮಧ್ಯ ಇರಾನ್ ಪ್ರದೇಶದಲ್ಲಿ F-35 ವಿಮಾನವನ್ನು ಗುರಿಯಾಗಿಸಿ ಹೊಡೆದುರುಳಿಸಿರುವುದಾಗಿ ಪ್ರಕಟಣೆ ಹೊರಡಿಸಿದೆ. ವಿಮಾನವು ಇರಾನ್ ವಾಯು ರಕ್ಷಣಾ ವ್ಯವಸ್ಥೆಯನ್ನು ಗುರಿಯಾಗಿಸಿಕೊಂಡು ಬಂದಿತ್ತು ಎಂದು ಇರಾನ್ ಆರೋಪಿಸಿದೆ. ಸ್ಫೋಟದ ತೀವ್ರತೆಗೆ ವಿಮಾನ ಸಂಪೂರ್ಣ ನಾಶವಾಗಿದ್ದು, ಪೈಲಟ್ ಬದುಕುಳಿದಿರುವ ಸಾಧ್ಯತೆ ತೀರಾ ಕಡಿಮೆ ಎಂದು ತಿಳಿಸಲಾಗಿದೆ.
ಟೆಲ್ ಅವೀವ್ ಮೇಲೆ ಮಿಸೈಲ್ ದಾಳಿ :
ಇತ್ತ ಇಸ್ರೇಲ್ ರಾಜಧಾನಿ ಟೆಲ್ ಅವೀವ್ ಮೇಲೆ ಇರಾನ್ ಮಿಸೈಲ್ ದಾಳಿ ನಡೆಸಿದೆ. ಸವಿದೋರ್ ಸೆಂಟ್ರಲ್ ರೈಲ್ವೆ ನಿಲ್ದಾಣ ಸೇರಿದಂತೆ ನಗರದ ವಿವಿಧ ಭಾಗಗಳಲ್ಲಿ ಮಿಸೈಲ್‌ಗಳು ಬಿದ್ದಿವೆ. ಕಟ್ಟಡಗಳು ಧ್ವಂಸವಾಗಿದ್ದು, ಒಬ್ಬ ವ್ಯಕ್ತಿ ಗಾಯಗೊಂಡಿರುವುದು ವರದಿಯಾಗಿದೆ. ಇಸ್ರೇಲ್ ಸೇನೆ (IDF) ಶತ್ರು ವಿಮಾನಗಳ ಸಂಚಾರವನ್ನು ಖಚಿತಪಡಿಸಿದೆ.
ಅಮೆರಿಕದ ಪ್ರತಿಕ್ರಿಯೆ: ಇರಾನ್ ಸೇತುವೆ ಧ್ವಂಸ :
ಇರಾನ್‌ನ ಕರಾಜ್‌ನಲ್ಲಿರುವ ಪ್ರಮುಖ B1 ಸೇತುವೆಯನ್ನು ಅಮೆರಿಕದ ವಾಯುದಾಳಿ ಧ್ವಂಸಗೊಳಿಸಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ದಾಳಿಯ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಬಿಡುಗಡೆ ಮಾಡಿದ್ದಾರೆ. ಇದಕ್ಕೆ ಪ್ರತಿಯಾಗಿ ಇರಾನ್ ಕುವೈತ್‌ನ ಶೇಖ್ ಜಾಬಿರ್ ಸೇತುವೆ, ಸೌದಿ-ಬಹ್ರೇನ್ ಕಿಂಗ್ ಫಹದ್ ಕಾಸ್‌ವೇ, ಯುಎಇ-ಜೋರ್ಡಾನ್ ಸೇತುವೆಗಳನ್ನು ಗುರಿಯಾಗಿಸುವ ಬೆದರಿಕೆ ಹಾಕಿದೆ.





