ಟೆಲ್ ಅವಿವ್: ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಇರಾನ್ ವಿರುದ್ಧದ ಮಿಲಿಟರಿ ಕಾರ್ಯಾಚರಣೆ ಇನ್ನೂ ಅಂತ್ಯಗೊಂಡಿಲ್ಲ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸ್ಪಷ್ಟಪಡಿಸಿದ್ದಾರೆ. ಇಸ್ರೇಲ್ ರಕ್ಷಣಾ ಪಡೆಗಳು (IDF) ನಡೆಸುತ್ತಿರುವ ಕಾರ್ಯಾಚರಣೆ ಮುಂದುವರಿಯುತ್ತಿದ್ದು, ಇದರ ಪ್ರಮುಖ ಗುರಿ ಇರಾನ್‌ನ ಧಾರ್ಮಿಕ ನಾಯಕತ್ವದ ಶಕ್ತಿಯನ್ನು ದುರ್ಬಲಗೊಳಿಸುವುದಾಗಿದೆ ಎಂದು ಅವರು ಹೇಳಿದ್ದಾರೆ.
ಟೆಲ್ ಅವಿವ್‌ನಲ್ಲಿ ಇರುವ ರಾಷ್ಟ್ರೀಯ ಆರೋಗ್ಯ ಕಮಾಂಡ್ ಕೇಂದ್ರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದ ನೆತನ್ಯಾಹು, ನಡೆಯುತ್ತಿರುವ ಮಿಲಿಟರಿ ಕಾರ್ಯಾಚರಣೆ ಸಾಮಾನ್ಯ ಯುದ್ಧವಲ್ಲ, ಬದಲಾಗಿ ಪ್ರಾದೇಶಿಕ ರಾಜಕೀಯ ಸಮೀಕರಣವನ್ನು ಬದಲಾಯಿಸುವ ಮಹತ್ವದ ಹಂತವಾಗಿದೆ ಎಂದು ತಿಳಿಸಿದ್ದಾರೆ. ಈ ಕಾರ್ಯಾಚರಣೆಯ ಮೂಲಕ ಇರಾನ್ ಆಡಳಿತದ ಪ್ರಭಾವವನ್ನು ಕಡಿಮೆ ಮಾಡುವುದು. ಆ ದೇಶದ ಜನರಿಗೆ ಸ್ವತಂತ್ರವಾಗಿ ಬದುಕುವ ಅವಕಾಶ ಕಲ್ಪಿಸುವುದು ನಮ್ಮ ಆಶಯ ಎಂದು ಅವರು ಹೇಳಿದರು.
ನೆತನ್ಯಾಹು ಹೇಳುವಂತೆ, ಇಸ್ರೇಲ್ ಕೈಗೊಂಡಿರುವ ಕ್ರಮಗಳು ಈಗಾಗಲೇ ಪರಿಣಾಮಕಾರಿಯಾಗಿವೆ. “ನಾವು ಕೈಗೊಂಡಿರುವ ದಾಳಿಗಳಿಂದ ಇರಾನ್ ಆಡಳಿತದ ಶಕ್ತಿ ಕುಗ್ಗುತ್ತಿದೆ. ನಾವು ಅವರ ಮೂಳೆಗಳನ್ನು ಮುರಿಯುತ್ತಿರುವಂತೆಯೇ ಆಗುತ್ತಿದೆ. ಆದರೆ ನಮ್ಮ ಕಾರ್ಯಾಚರಣೆ ಇನ್ನೂ ಮುಗಿದಿಲ್ಲ,” ಎಂದು ಅವರು ಎಚ್ಚರಿಕೆ ನೀಡಿದ್ದಾರೆ. ಇಸ್ರೇಲ್ ತನ್ನ ಭದ್ರತೆ ಮತ್ತು ಪ್ರಾದೇಶಿಕ ಸ್ಥಿರತೆಗಾಗಿ ಈ ಕ್ರಮಗಳನ್ನು ಮುಂದುವರಿಸಲಿದೆ ಎಂದು ಕೂಡ ಅವರು ಸ್ಪಷ್ಟಪಡಿಸಿದರು.
ಇಸ್ರೇಲ್ ಆರಂಭಿಸಿರುವ ‘ಆಪರೇಷನ್ ರೋರಿಂಗ್ ಲಯನ್’ ಎಂಬ ಮಿಲಿಟರಿ ಕಾರ್ಯಾಚರಣೆ ಈ ಸಂಘರ್ಷದ ಪ್ರಮುಖ ಭಾಗವಾಗಿದೆ. ಈ ಕಾರ್ಯಾಚರಣೆ ಮೂಲಕ ಇರಾನ್ ಬೆಂಬಲಿತ ಗುಂಪುಗಳ ಮೇಲೆ ಹಾಗೂ ಅವರ ಸೈನಿಕ ಮೂಲಸೌಕರ್ಯಗಳ ಮೇಲೆ ಒತ್ತಡ ಹೆಚ್ಚಿಸುವುದು ಇಸ್ರೇಲ್‌ನ ಯೋಜನೆಯಾಗಿದೆ. ಈ ಹಿನ್ನೆಲೆಯಲ್ಲಿ ನೆತನ್ಯಾಹು ಆರೋಗ್ಯ ಸಚಿವ ಹೈಮ್ ಕಾಟ್ ಅವರೊಂದಿಗೆ ರಾಷ್ಟ್ರೀಯ ಆರೋಗ್ಯ ಕಮಾಂಡ್ ಕೇಂದ್ರಕ್ಕೆ ಭೇಟಿ ನೀಡಿ, ಯುದ್ಧದ ಸಂದರ್ಭದಲ್ಲಿಯೂ ದೇಶದ ಆರೋಗ್ಯ ವ್ಯವಸ್ಥೆ ಹೇಗೆ ಕಾರ್ಯನಿರ್ವಹಿಸುತ್ತಿದೆ ಎಂಬುದರ ಬಗ್ಗೆ ಮಾಹಿತಿ ಪಡೆದುಕೊಂಡರು.
ಈ ವೇಳೆ ಆರೋಗ್ಯ ಸಚಿವಾಲಯದ ಮಹಾನಿರ್ದೇಶಕ ಮೋಷೆ ಬಾರ್ ಸಿಮನ್ ಟೋವ್ ಅವರು, ಯುದ್ಧದ ಸಂದರ್ಭದಲ್ಲೂ ಆಸ್ಪತ್ರೆಗಳು, ತುರ್ತು ಚಿಕಿತ್ಸಾ ವ್ಯವಸ್ಥೆಗಳು ಮತ್ತು ವೈದ್ಯಕೀಯ ಸೇವೆಗಳು ಹೇಗೆ ಕಾರ್ಯನಿರ್ವಹಿಸುತ್ತಿವೆ ಎಂಬುದರ ಕುರಿತು ಪ್ರಧಾನಿಗೆ ವಿವರ ನೀಡಿದರು. ಯಾವುದೇ ತುರ್ತು ಪರಿಸ್ಥಿತಿ ಎದುರಾದರೂ ದೇಶದ ಆರೋಗ್ಯ ವ್ಯವಸ್ಥೆ ಸಿದ್ಧವಾಗಿರುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೆಲ್ಲಾ ನಡೆಯುತ್ತಿರುವ ಸಂದರ್ಭದಲ್ಲಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇತ್ತೀಚೆಗೆ ನೀಡಿದ ಹೇಳಿಕೆಗಳು ಹೊಸ ಚರ್ಚೆಗೆ ಕಾರಣವಾಗಿವೆ. ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಹಗೆತನವನ್ನು ಕೊನೆಗಾಣಿಸಲು ಪ್ರಯತ್ನ ನಡೆಯುತ್ತಿದೆ ಎಂದು ಟ್ರಂಪ್ ಹೇಳಿದ್ದರು. ಆದರೆ ಈ ಹೇಳಿಕೆಗೆ ಇರಾನ್ ತೀವ್ರ ಪ್ರತಿಕ್ರಿಯೆ ನೀಡಿದೆ.
ಟೆಹ್ರಾನ್ ಸ್ಪಷ್ಟಪಡಿಸಿರುವಂತೆ, ಅಮೆರಿಕ ಅಥವಾ ಇಸ್ರೇಲ್ ಯಾರಿಗೂ ಈ ಯುದ್ಧದ ಅಂತ್ಯವನ್ನು ನಿರ್ಧರಿಸುವ ಅಧಿಕಾರವಿಲ್ಲ. ಇಸ್ರೇಲ್ ಮತ್ತು ಅಮೆರಿಕ ಗುರಿಗಳ ವಿರುದ್ಧ ಕೈಗೊಳ್ಳುವ ಮಿಲಿಟರಿ ಕ್ರಮಗಳನ್ನು ಯಾವಾಗ ನಿಲ್ಲಿಸಬೇಕು ಎಂಬುದನ್ನು ನಿರ್ಧರಿಸುವ ಏಕೈಕ ಅಧಿಕಾರ ಇರಾನ್‌ಗೆ ಮಾತ್ರ ಇದೆ ಎಂದು ಅವರು ತಿಳಿಸಿದ್ದಾರೆ.




