ಟೆಹ್ರಾನ್, ಏ. 3: ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧ 35ನೇ ದಿನಕ್ಕೆ ಕಾಲಿಟ್ಟಿರುವ ಸಂದರ್ಭದಲ್ಲಿ, ಇರಾನ್ ಒಂದು ಸ್ಫೋಟಕ ಹೇಳಿಕೆ ನೀಡಿದೆ. ಅಮೆರಿಕದ ಅತ್ಯಾಧುನಿಕ ಎಫ್-35 ಲೈಟ್ನಿಂಗ್ 2 ಮತ್ತು ಎಫ್-15ಇ ಸ್ಟ್ರೈಕ್ ಈಗಲ್ ಯುದ್ಧ ವಿಮಾನಗಳನ್ನು ತಾನು ಹೊಡೆದುರುಳಿಸಿರುವುದಾಗಿ ಮತ್ತು ವಿಮಾನದಿಂದ ಜಿಗಿದ ಅಮೆರಿಕನ್ ಪೈಲಟ್ ಅನ್ನು ಸೆರೆಹಿಡಿಯಲಾಗಿದೆ ಎಂದು ಇರಾನ್ ಸೇನೆ ಹೇಳಿಕೊಂಡಿದೆ.
ವಿಮಾನ ಪತನ ಎಲ್ಲಿ?
ಸ್ಥಳೀಯ ಮೂಲಗಳ ಪ್ರಕಾರ, ನೈಋತ್ಯ ಇರಾನ್ನ ಕೊಹ್ಗಿಲುಯೆ ಮತ್ತು ಬೋಯರ್-ಅಹ್ಮದ್ ಪ್ರಾಂತ್ಯದಲ್ಲಿ ವಿಮಾನ ಪತನವಾಗಿದೆ. ಪೈಲಟ್ ಸುರಕ್ಷಿತವಾಗಿ ಪ್ಯಾರಾಚೂಟ್ ಮೂಲಕ ಜಿಗಿದಿದ್ದರು. ಅವರನ್ನು ರಕ್ಷಿಸಲು ಅಮೆರಿಕದ ವಿಶೇಷ ಪಡೆಗಳು ಬ್ಲಾಕ್ ಹಾಕ್ ಹೆಲಿಕಾಪ್ಟರ್ ಮತ್ತು ಸಿ-130 ಹರ್ಕ್ಯುಲಸ್ ವಿಮಾನಗಳನ್ನು ಕಳುಹಿಸಿದ್ದವು ಎನ್ನಲಾಗಿದೆ. ಆದರೆ, ಈ ರಕ್ಷಣಾ ಕಾರ್ಯಾಚರಣೆ ವಿಫಲವಾಗಿದೆ. ಇರಾನ್ನ ಕ್ರಾಂತಿಕಾರಿ ಗಾರ್ಡ್ ಪಡೆಗಳು ಸ್ಥಳವನ್ನು ವಶಪಡಿಸಿಕೊಂಡು ಪೈಲಟ್ ಅನ್ನು ಬಂಧಿಸಿವೆ ಎಂದು ವರದಿಯಾಗಿದೆ.
ವೈರಲ್ ಆಗುತ್ತಿರುವ ವಿಡಿಯೋ
ಸಾಮಾಜಿಕ ಜಾಲತಾಣಗಳಲ್ಲಿ ಇರಾನ್ ಸೇನೆಗೆ ಸಂಬಂಧಿಸಿದ ಖಾತೆಗಳು ಈ ಕುರಿತಾದ ಕೆಲವು ವಿಡಿಯೋಗಳನ್ನು ಹಂಚಿಕೊಂಡಿವೆ. ವಿಡಿಯೋದಲ್ಲಿ ವಿಮಾನದ ಅವಶೇಷಗಳು ಮತ್ತು ಪೈಲಟ್ ಎಂದು ಭಾವಿಸಲಾದ ವ್ಯಕ್ತಿಯನ್ನು ಸೆರೆಹಿಡಿದಿರುವ ದೃಶ್ಯಗಳಿವೆ ಎನ್ನಲಾಗಿದೆ.
ಯಾವ ವಿಮಾನ ಹೊಡೆದುರುಳಿಸಲಾಗಿದೆ?
ಇರಾನ್ ಮಾತ್ರ ಇದು ಅಮೆರಿಕದ ಅತ್ಯಂತ ಮೌಲ್ಯಯುತವಾದ ಐದನೇ ತಲೆಮಾರಿನ ಎಫ್-35 ಲೈಟ್ನಿಂಗ್ 2 ಸ್ಟೆಲ್ತ್ ವಿಮಾನ ಎಂದು ಹೇಳುತ್ತಿದೆ. ಆದರೆ ಕೆಲವು ಮಿಲಿಟರಿ ತಜ್ಞರು ವಿಡಿಯೋದಲ್ಲಿನ ಅವಶೇಷಗಳು ಎಫ್-15ಇ ಸ್ಟ್ರೈಕ್ ಈಗಲ್ ಮಾದರಿಗೆ ಹೋಲುತ್ತವೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಎಫ್-35 ಅತ್ಯಾಧುನಿಕ ಸ್ಟೆಲ್ತ್ ತಂತ್ರಜ್ಞಾನ ಹೊಂದಿದ್ದು, ಅದನ್ನು ಪತ್ತೆ ಹಚ್ಚುವುದು ಮತ್ತು ಹೊಡೆದುರುಳಿಸುವುದು ತುಂಬಾ ಕಷ್ಟ. ಹಾಗಾಗಿ ಇರಾನ್ ನಿಜಕ್ಕೂ ಎಫ್-35 ಅನ್ನು ಹೊಡೆದುರುಳಿಸಿದ್ದರೆ, ಅದು ಅಮೆರಿಕದ ಮಿಲಿಟರಿ ಸಾಮರ್ಥ್ಯಕ್ಕೆ ದೊಡ್ಡ ಹಿನ್ನಡೆಯಾಗಲಿದೆ.
ಇರಾನ್ನ ಈ ದೊಡ್ಡ ಪ್ರತಿಪಾದನೆಯ ಬೆನ್ನಲ್ಲೇ, ಅಮೆರಿಕದ ರಕ್ಷಣಾ ಇಲಾಖೆ (ಪೆಂಟಗನ್) ಅಥವಾ ಶ್ವೇತಭವನ ಇದುವರೆಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.. ಸಾಮಾನ್ಯವಾಗಿ ತಮ್ಮ ವಿಮಾನ ಪತನವಾದಾಗ ಅಮೆರಿಕ ತಕ್ಷಣ ಪ್ರತಿಕ್ರಿಯಿಸುತ್ತದೆ. ಇಲ್ಲಿ ಮೌನ ವಹಿಸಿರುವುದು ಘಟನೆಯ ಗಂಭೀರತೆಯನ್ನು ಸೂಚಿಸುತ್ತದೆಯೇ ಅಥವಾ ಇರಾನ್ ಹೇಳಿಕೆಯಲ್ಲಿ ಸತ್ಯವಿಲ್ಲ ಎಂಬುದರ ಸಂಕೇತವೇ ಎಂಬುದು ಸ್ಪಷ್ಟವಾಗಿಲ್ಲ.





