ವಾಷಿಂಗ್ಟನ್, ಆಗಸ್ಟ್ 08: ಸಾಮಾನ್ಯವಾಗಿ ಒಬ್ಬ ವ್ಯಕ್ತಿ ಏಳೆಂಟು ನಾಯಿಗಳನ್ನು ಸಾಕಿದರೆ, ಅವರಿಗೆ ಪ್ರಾಣಿಗಳ ಬಗ್ಗೆ ಇರುವ ಕಾಳಜಿ ಮತ್ತು ಪ್ರೀತಿಯನ್ನು ಊಹಿಸಬಹುದು. ಆದರೆ ಈ ಘಟನೆಯಲ್ಲಿ, ಒಬ್ಬ ಮಹಿಳೆಯ ಈ ಪ್ಲ್ಯಾನ್ ಎಲ್ಲ ಊಹೆಗಳನ್ನೂ ತಲೆಕೆಳಗಾಗಿಸಿವೆ. ತನ್ನ ಹುಟ್ಟುಹಬ್ಬದ ಆಚರಣೆಗಾಗಿ ಫ್ಲೋರಿಡಾದ ಮಹಿಳೆಯೊಬ್ಬಳು ತನ್ನ ಮಗ ಮತ್ತು ಏಳು ನಾಯಿಗಳನ್ನು ಬಿಟ್ಟು ಎರಡು ವಾರಗಳ ಕಾಲ ಲಾಸ್ ವೆಗಾಸ್‌ಗೆ ಪ್ರವಾಸಕ್ಕೆ ತೆರಳಿದ್ದಾಳೆ. ಆದರೆ ಆಕೆ ಮರಳಿದಾಗ ಮನೆಯ ಸ್ಥಿತಿ ಆಘಾತಕಾರಿಯಾಗಿತ್ತು.
ಈ ಘಟನೆ ಫ್ಲೋರಿಡಾದ ಜಾಕ್ಸನ್‌ವಿಲ್ಲೆಯಿಂದ 60 ಮೈಲಿ ದಕ್ಷಿಣದಲ್ಲಿರುವ ಪಲಾಟ್ಕಾ ಪಟ್ಟಣದಲ್ಲಿ ನಡೆದಿದೆ. 37 ವರ್ಷದ ಜೆಸ್ಸಿಕಾ ಕೋಪ್ಯಾಂಡ್ ಎಂಬ ಮಹಿಳೆ, ತನ್ನ ಮಗ ಮತ್ತು ಏಳು ನಾಯಿಗಳನ್ನು ಮನೆಯಲ್ಲಿ ಬಿಟ್ಟು ಜುಲೈ 21ರಂದು ಲಾಸ್ ವೆಗಾಸ್‌ಗೆ ತೆರಳಿದ್ದರು. ಮನೆ ಈಗಾಗಲೇ ಅಸಹ್ಯಕರ ಸ್ಥಿತಿಯಲ್ಲಿತ್ತು, ಆದರೆ ಆಕೆ ವಾಪಾಸ್ ಬರುವಷ್ಟರಲ್ಲಿ ಪರಿಸ್ಥಿತಿ ಇನ್ನಷ್ಟು ಕೆಟ್ಟಿತ್ತು. ನಾಯಿಗಳು ಎಲ್ಲೆಂದರಲ್ಲಿ ಮಲ-ಮೂತ್ರ ವಿಸರ್ಜನೆ ಮಾಡಿದ್ದರಿಂದ ಮನೆಯಲ್ಲಿ ದುರ್ವಾಸನೆಯಿಂದ ಕೂಡಿತ್ತು. ಕಾರ್ಪೆಟ್‌ಗಳು, ಗೋಡೆಗಳು, ಮತ್ತು ಕೋಣೆಗಳೆಲ್ಲವೂ ಕೊಳಕಿನಿಂದ ತುಂಬಿದ್ದವು. ಒಂದು ಕ್ರಿಸ್ಮಸ್ ಮರವು ಗೋಡೆಗೆ ಒರಗಿಕೊಂಡಿತ್ತು, ಮತ್ತು ಗೋಡೆಯಲ್ಲಿ ದೊಡ್ಡ ರಂಧ್ರಗಳು ಕಾಣಿಸುತ್ತಿದ್ದವು.
ನಾಯಿಗಳ ಸ್ಥಿತಿ ತೀರಾ ಹದಗೆಟ್ಟಿತ್ತು. ಅವುಗಳಿಗೆ ಆಹಾರ ಮತ್ತು ನೀರು ಲಭಿಸದ ಕಾರಣ, ಅವು ಅಪೌಷ್ಟಿಕತೆಯಿಂದ ಬಳಲುತ್ತಿದ್ದವು. ಕೆಲವು ನಾಯಿಗಳು ಹಾಲ್‌ನಲ್ಲಿದ್ದರೆ, ಇನ್ನು ಕೆಲವು ಕೋಣೆಗಳಲ್ಲಿ ಸಿಕ್ಕಿಹಾಕಿಕೊಂಡಿದ್ದವು. ಅವುಗಳ ಪಕ್ಕೆಲುಬು ಕಾಣುವಷ್ಟು ದುರ್ಬಲವಾಗಿದ್ದವು. ಜೆಸ್ಸಿಕಾಳ ಮಗನ ಕೋಣೆಯೂ ಕೊಳಕಿನಿಂದ ತುಂಬಿತ್ತು. ಪೊಲೀಸರಿಗೆ ಮಗ ತನ್ನ ತಾಯಿ ಯಾವಾಗಲೂ ಮನೆಯನ್ನು ಕೊಳಕಾಗಿಯೇ ಇಡುತ್ತಿದ್ದಳು ಎಂದು ತಿಳಿಸಿದ್ದಾನೆ. ಆದರೆ ಈ ಸ್ಥಿತಿಯು ಕೇವಲ ಎರಡು ವಾರಗಳಲ್ಲಿ ಈ ಸ್ಥಿತಿ ಉಂಟಾದದ್ದಲ್ಲ ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ.
ಪೊಲೀಸರು ಜೆಸ್ಸಿಕಾಳನ್ನು ಮಕ್ಕಳ ನಿರ್ಲಕ್ಷ್ಯ ಮತ್ತು ಪ್ರಾಣಿ ದೌರ್ಜನ್ಯದ ಆರೋಪದ ಮೇಲೆ ಮಂಗಳವಾರ ಬಂಧಿಸಿದ್ದಾರೆ. ಆಕೆಯನ್ನು 36,500 ಡಾಲರ್ ಬಾಂಡ್ ಮೇಲೆ ಪುಟ್ನಮ್ ಕೌಂಟಿ ಜೈಲಿನಲ್ಲಿ ಇರಿಸಲಾಗಿದೆ. ಆಕೆಯ ಮಗನಿಗೆ ಯಾರೋ ಸ್ವಲ್ಪ ಆಹಾರವನ್ನು ಒದಗಿಸುತ್ತಿದ್ದರೆಂದು ತಿಳಿದುಬಂದಿದೆ. ಆದರೆ ಅವನೂ ಸಹ ಅತ್ಯಂತ ಕೆಟ್ಟ ಪರಿಸ್ಥಿತಿಯಲ್ಲಿ ಜೀವಿಸುತ್ತಿದ್ದ.
ಈ ಘಟನೆಯು ಸಾರ್ವಜನಿಕರಲ್ಲಿ ಕೋಪ ಮತ್ತು ದುಃಖವನ್ನು ಉಂಟುಮಾಡಿದೆ. ಒಬ್ಬ ತಾಯಿಯು ತನ್ನ ಸ್ವಂತ ಮಗನನ್ನು ಮತ್ತು ತನ್ನ ಸಾಕುಪ್ರಾಣಿಗಳನ್ನು ಇಂತಹ ಶೋಚನೀಯ ಸ್ಥಿತಿಯಲ್ಲಿ ಬಿಟ್ಟು ರಜೆಗೆ ಹೋಗುವುದು ಹೇಗೆ ಸಾಧ್ಯ ಎಂದು ಜನರು ಪ್ರಶ್ನಿಸುತ್ತಿದ್ದಾರೆ.