ವಾಷಿಂಗ್ಟನ್: ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ (ಹಳೆಯ ಟ್ವಿಟರ್) ಅಶ್ಲೀಲ ಹಾಗೂ ಅಸಭ್ಯ ಕಂಟೆಂಟ್ ಸೃಷ್ಟಿಸಿ ಪೋಸ್ಟ್ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಕ್ಸ್‌ನ ಮಾಲೀಕ ಹಾಗೂ ವಿಶ್ವದ ನಂ.1 ಶ್ರೀಮಂತ ಎಲಾನ್ ಮಸ್ಕ್ ಎಚ್ಚರಿಕೆ ನೀಡಿದ್ದಾರೆ. ಎಕ್ಸ್‌ನ ಎಐ ಟೂಲ್ ಆಗಿರುವ ‘ಗ್ರೋಕ್’ ಅನ್ನು ದುರುಪಯೋಗಪಡಿಸಿಕೊಂಡು ಅಶ್ಲೀಲ ಫೋಟೋಗಳು ಮತ್ತು ಕಾನೂನುಬಾಹಿರ ಕಂಟೆಂಟ್ ರಚಿಸಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬಂದಿವೆ.
ಭಾರತ ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಗ್ರೋಕ್ ಬಳಸಿ ಸೃಷ್ಟಿಸಲಾದ ಅಶ್ಲೀಲ ಹಾಗೂ ವಿಕೃತ ಕಂಟೆಂಟ್‌ಗಳನ್ನು ತಕ್ಷಣವೇ ತೆಗೆದುಹಾಕಬೇಕು ಎಂದು ಎಕ್ಸ್‌ಗೆ ತಾಕೀತು ಮಾಡಿತ್ತು. ಅಲ್ಲದೆ, ಈ ಸಂಬಂಧ ಯಾವ ರೀತಿಯ ಕ್ರಮ ಕೈಗೊಳ್ಳಲಾಗಿದೆ ಎಂಬುದರ ಬಗ್ಗೆ 72 ಗಂಟೆಗಳ ಒಳಗಾಗಿ ವರದಿ ಸಲ್ಲಿಸಬೇಕು ಎಂದು ಸೂಚನೆ ನೀಡಿತ್ತು. ಈ ಒತ್ತಡದ ನಡುವೆಯೇ ಎಲಾನ್ ಮಸ್ಕ್ ಸ್ವತಃ ಪ್ರತಿಕ್ರಿಯೆ ನೀಡಿದ್ದು, ಕಾನೂನು ಉಲ್ಲಂಘಿಸುವವರ ವಿರುದ್ಧ ಯಾವುದೇ ರಿಯಾಯಿತಿ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಎಕ್ಸ್‌ನಲ್ಲೇ ಪೋಸ್ಟ್ ಮಾಡಿರುವ ಮಸ್ಕ್, “ಗ್ರೋಕ್ ಬಳಸಿ ಕಾನೂನುಬಾಹಿರ ಪೋಸ್ಟ್‌ಗಳನ್ನು ಸೃಷ್ಟಿಸುವವರು ಹಾಗೂ ಅಂತಹ ಕಂಟೆಂಟ್‌ಗಳನ್ನು ಹಂಚಿಕೊಳ್ಳುವವರು ಕಠಿಣ ಕ್ರಮಕ್ಕೆ ಒಳಗಾಗುತ್ತಾರೆ. ಈ ವಿಚಾರದಲ್ಲಿ ನಾವು ಯಾವುದೇ ತಮಾಷೆ ಮಾಡುತ್ತಿಲ್ಲ,” ಎಂದು ಎಚ್ಚರಿಸಿದ್ದಾರೆ.
ಸ್ವತಃ ಎಲಾನ್ ಮಸ್ಕ್ ಅವರ ಫೋಟೋವನ್ನೇ ಗ್ರೋಕ್ ಬಳಸಿ ಅಶ್ಲೀಲವಾಗಿ ಮಾರ್ಪಡಿಸಿ ಪೋಸ್ಟ್ ಮಾಡಲಾಗಿತ್ತು. ಈ ಘಟನೆ ಬಹಿರಂಗವಾಗುತ್ತಿದ್ದಂತೆ, ಎಕ್ಸ್‌ನ ಎಐ ಸುರಕ್ಷತೆ ಮತ್ತು ನಿಯಂತ್ರಣ ವ್ಯವಸ್ಥೆಗಳ ಬಗ್ಗೆ ಚರ್ಚೆ ಆರಂಭವಾಗಿದೆ.
ಆಗಿದ್ದೇನು?
ಗ್ರೋಕ್ ಎಐ ಟೂಲ್‌ನಲ್ಲಿ ಕೆಲ ಬೇನಾಮಿ ಬಳಕೆದಾರರು ಮಹಿಳೆಯರ ನಿಜವಾದ ಫೋಟೋಗಳನ್ನು ಅಪ್‌ಲೋಡ್ ಮಾಡಿ, ಅವುಗಳನ್ನು ಅಶ್ಲೀಲವಾಗಿ ಪರಿವರ್ತಿಸುವಂತೆ ಸೂಚನೆ ನೀಡುತ್ತಿದ್ದರು. ಈ ರೀತಿಯ ವಿಕೃತ ಕೃತ್ಯಗಳ ಮೂಲಕ ಮಾನಸಿಕ ಅಸ್ವಸ್ಥ ಆನಂದ ಪಡೆಯಲಾಗುತ್ತಿತ್ತು ಎಂಬ ಆರೋಪಗಳು ಕೇಳಿಬಂದಿವೆ.
ಭಾರತ ಸರ್ಕಾರದ ಕಠಿಣ ನಿಲುವು
ಭಾರತ ಸರ್ಕಾರ, ಮಾಹಿತಿ ತಂತ್ರಜ್ಞಾನ ಕಾಯ್ದೆಯ ಅಡಿಯಲ್ಲಿ, ಅಶ್ಲೀಲ ಹಾಗೂ ಕಾನೂನುಬಾಹಿರ ಕಂಟೆಂಟ್‌ಗಳನ್ನು ತಕ್ಷಣವೇ ತೆಗೆದುಹಾಕಬೇಕು ಎಂದು ಎಕ್ಸ್‌ಗೆ ಸೂಚಿಸಿದೆ. ಜೊತೆಗೆ, ಇಂತಹ ಕಂಟೆಂಟ್ ಸೃಷ್ಟಿಸುವ ಮತ್ತು ಹಂಚುವವರ ವಿರುದ್ಧ ಯಾವ ಕ್ರಮ ಕೈಗೊಳ್ಳಲಾಗಿದೆ ಎಂಬ ವಿವರಗಳನ್ನು 72 ಗಂಟೆಗಳ ಒಳಗಾಗಿ ನೀಡಬೇಕು ಎಂದು ಎಚ್ಚರಿಸಿದೆ. ನಿಯಮ ಉಲ್ಲಂಘನೆಯಾದರೆ ಕಾನೂನು ಕ್ರಮ ಅನಿವಾರ್ಯ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಫ್ರಾನ್ಸ್‌ನಲ್ಲೂ ಆಕ್ಷೇಪ
ಈ ವಿಚಾರ ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ. ಫ್ರಾನ್ಸ್‌ನ ಸಚಿವರೂ ಸಹ ಎಕ್ಸ್‌ನಲ್ಲಿ ಸೃಷ್ಟಿಸಲಾಗುತ್ತಿರುವ ವಿಕೃತ ಫೋಟೋಗಳ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, “ಇದು ಕಾನೂನುಬಾಹಿರ. ಎಐ ತಂತ್ರಜ್ಞಾನವನ್ನು ದುರುಪಯೋಗಪಡಿಸಿಕೊಳ್ಳಲು ಅವಕಾಶ ನೀಡಲಾಗದು,” ಎಂದು ಗುಡುಗಿದ್ದಾರೆ.





