“ಹಾರ್ಮುಜ್ ಜಲಸಂಧಿ ಅಲ್ಲ, ಟ್ರಂಪ್ ಸ್ಟ್ರೈಟ್‌” ಎಂದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್

Untitled design 2026 04 30T100013.990

ವಾಷಿಂಗ್ಟನ್/ತೆಹ್ರಾನ್: ಅಅಮೆರಿಕಾ ಮತ್ತು ಇರಾನ್ ನಡುವಿನ ಉದ್ವಿಗ್ನತೆ ಮತ್ತೊಮ್ಮೆ ತೀವ್ರಗೊಂಡಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಮ್ಮ ವಿವಾದಿತ ಹೇಳಿಕೆಗಳಿಂದಾಗಿ ಮತ್ತೊಂದು ಬಿರುಗಾಳಿಯನ್ನೇ ಎಬ್ಬಿಸಿದ್ದಾರೆ.  ತೈಲ ಸಾಗಾಟದ ಪ್ರಮುಖ ಮಾರ್ಗವಾಗಿರುವ ಹಾರ್ಮುಜ್ ಜಲಸಂಧಿಗೆ “ಟ್ರಂಪ್ ಸ್ಟ್ರೈಟ್‌” ಎಂಬ ಹೊಸ ಹೆಸರಿಟ್ಟು ಅವರು ಹೊಸ ವಿವಾದ ಸೃಷ್ಟಿಸಿದ್ದಾರೆ. ಇದರೊಂದಿಗೆ ಅಮೆರಿಕದ ನೌಕಾ ದಿಗ್ಬಂಧನವನ್ನು “ಅದ್ಭುತ ಯಶಸ್ಸು” (Genius) ಎಂದು ಕರೆದು ಇರಾನಿನ ಕೆಂಗಣ್ಣಿಗೆ ಕಾರಣರಾಗಿದ್ದಾರೆ.

ಟ್ರಂಪ್ ಅಹಂಕಾರದ ಮಾತುಗಳು
ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಟ್ರಂಪ್, “ನಮ್ಮ ನೌಕಾ ದಿಗ್ಬಂಧನವು ಶೇಕಡಾ ನೂರರಷ್ಟು ಯಶಸ್ವಿಯಾಗಿದೆ. ವೆನೆಜುವೆಲಾದ ಸೈನ್ಯ ಕೇವಲ 48 ನಿಮಿಷಗಳಲ್ಲಿ ಶರಣಾದಂತೆಯೇ ಇರಾನ್ ಕೂಡ ಶರಣಾಗಬೇಕಿದೆ. ನಾವು ಇರಾನಿನ ಸೈನ್ಯವನ್ನು ಈಗಾಗಲೇ ಧೂಳೀಪಟ ಮಾಡಿದ್ದೇವೆ. ಅವರ ನೌಕಾಪಡೆ ಸಮುದ್ರದ ತಳ ಸೇರಿದೆ, ಅವರ ವಾಯುಪಡೆ ಇನ್ನು ಮುಂದೆ ಎಂದಿಗೂ ಹಾರುವುದಿಲ್ಲ” ಎಂದು ಮಾತುಗಳನ್ನಾಡಿದರು.

ಅಲ್ಲದೆ, ಇರಾನ್ ತನ್ನ ಪರಮಾಣು ಮಹತ್ವಾಕಾಂಕ್ಷೆಗಳನ್ನು ಕೈಬಿಡುವವರೆಗೂ ಯಾವುದೇ ಒಪ್ಪಂದ ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು. “ಇರಾನ್ ಈಗಾಗಲೇ ಸೋಲೊಪ್ಪಿಕೊಂಡು ‘ನಾವು ಬಿಟ್ಟುಬಿಡುತ್ತೇವೆ’ ಎಂದು ಹೇಳಬೇಕಿದೆ. ನಾವು ಅವರೊಂದಿಗೆ ಫೋನ್ ಮೂಲಕವೇ ಮಾತುಕತೆ ನಡೆಸುತ್ತಿದ್ದೇವೆ. ಪ್ರತಿ ಕಾಗದಕ್ಕೆ ಸಹಿ ಹಾಕಲು 18 ಗಂಟೆಗಳ ವಿಮಾನ ಪ್ರಯಾಣ ಮಾಡುವ ಅಗತ್ಯವಿಲ್ಲ” ಎಂದು ಲೇವಡಿ ಮಾಡಿದರು.

“ಸಮುದ್ರ ದರೋಡೆ” ಎಂದು ಕಿಡಿಕಾರಿದ ಇರಾನ್
ಅಮೆರಿಕದ ಈ ನಡೆಯನ್ನು ತೀವ್ರವಾಗಿ ಖಂಡಿಸಿರುವ ಇರಾನ್, ಇದನ್ನು “ಸಮುದ್ರ ದರೋಡೆ” ಎಂದು ಕರೆದಿದೆ. ಇರಾನಿನ ಸರ್ಕಾರಿ ಮಾಧ್ಯಮಗಳ ಪ್ರಕಾರ, “ನಮ್ಮ ತಾಳ್ಮೆಗೂ ಒಂದು ಮಿತಿಯಿದೆ. ಅಮೆರಿಕ ತನ್ನ ಅಕ್ರಮ ದಿಗ್ಬಂಧನವನ್ನು ಮುಂದುವರಿಸಿದರೆ, ನಾವು ಅಭೂತಪೂರ್ವ ಸೇನಾ ಕಾರ್ಯಾಚರಣೆಯನ್ನು ನಡೆಸಲಿದ್ದೇವೆ. ಇಂತಹ ಪ್ರತಿದಾಳಿ ಇದುವರೆಗೆ ಎಂದೂ ಕಂಡುಬಂದಿಲ್ಲ” ಎಂದು ಎಚ್ಚರಿಕೆ ನೀಡಿದೆ. ಇರಾನಿನ ಉನ್ನತ ಭದ್ರತಾ ಮೂಲಗಳ ಪ್ರಕಾರ, ಅಮೆರಿಕ ತನ್ನ ಹಠಮಾರಿತನವನ್ನು ಮುಂದುವರಿಸಿದರೆ ಶೀಘ್ರದಲ್ಲೇ ಭೀಕರ ತಿರುಗೇಟು ನೀಡಲು ಇರಾನ್ ಸೈನ್ಯ ಸಜ್ಜಾಗಿದೆ.

ಟ್ರಂಪ್ ಅವರು ಇರಾನ್ ಮೇಲಿನ ದಿಗ್ಬಂಧನದಿಂದ ಅದರ ಆರ್ಥಿಕತೆ ಸಂಪೂರ್ಣ ಕುಸಿದಿದೆ ಎಂದು ಹೇಳಿಕೊಂಡಿದ್ದಾರೆ. ಆದರೆ ಇರಾನ್‌ನ ಅಂತಾರಾಷ್ಟ್ರೀಯ ಕಾನೂನನ್ನು ಉಲ್ಲಂಘಿಸಿ ನಡೆಸುತ್ತಿರುವ ಈ ದಿಗ್ಬಂಧನ ಅಮಾನವೀಯವಾದುದು ಎಂದು ಆರೋಪಿಸಿದೆ. ಅಮೆರಿಕದ ಈ ನಡೆ ಪಶ್ಚಿಮ ಏಷ್ಯಾದಲ್ಲಿ ಮತ್ತೊಂದು ದೊಡ್ಡ ಯುದ್ಧದ ಮುನ್ನುಡಿಯಾಗಬಹುದು ಎಂಬ ಆತಂಕ ಜಾಗತಿಕ ಮಾರುಕಟ್ಟೆಯಲ್ಲಿ ಮನೆ ಮಾಡಿದೆ. 

Exit mobile version