ಪಶ್ಚಿಮ ಏಷ್ಯಾದಲ್ಲಿ ಮತ್ತೆ ಉದ್ವಿಗ್ನತೆ: ಅಮೆರಿಕಾ ವಾಯುನೆಲೆ ಮೇಲೆ ಇರಾನ್ ದಾಳಿ

ಸಾವು (7)

ಕಳೆದೊಂದು ತಿಂಗಳಿಂದ ತುಸು ಶಾಂತವಾಗಿದ್ದ ಪಶ್ಚಿಮ ಏಷ್ಯಾದಲ್ಲಿ ಅಮೆರಿಕ ಮತ್ತು ಇರಾನ್ ನಡುವಿನ ಸೇನಾ ಸಂಘರ್ಷ ಮತ್ತೆ ತೀವ್ರಗೊಂಡಿದೆ. ಕಾರ್ಯತಂತ್ರದ ದೃಷ್ಟಿಯಿಂದ ಅತ್ಯಂತ ಮಹತ್ವ ಹೊಂದಿರುವ ಹಾರ್ಮುಜ್ ಜಲಸಂಧಿ ಸುತ್ತಮುತ್ತಲಿನ ಬೆಳವಣಿಗೆಗಳು ಜಾಗತಿಕ ಆತಂಕಕ್ಕೆ ಕಾರಣವಾಗಿವೆ. ಇರಾನ್‌ನ ಲಾರಕ್ ದ್ವೀಪದಲ್ಲಿದ್ದ ಎರಡು ರಾಕೆಟ್ ಲಾಂಚರ್‌ಗಳ ಮೇಲೆ ಅಮೆರಿಕ ಸೇನೆ ವೈಮಾನಿಕ ದಾಳಿ ನಡೆಸಿದೆ. ಇದಕ್ಕೆ ಪ್ರತಿಯಾಗಿ ಇರಾನ್, ಜೋರ್ಡಾನ್‌ನಲ್ಲಿರುವ ಅಮೆರಿಕದ ಪ್ರಮುಖ ವಾಯುನೆಲೆಗಳ ಮೇಲೆ ಸರಣಿ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ ನಡೆಸಿದೆ.

ಅಮೆರಿಕ ನೌಕಾಪಡೆಯ ಪ್ರಕಾರ, ಹಾರ್ಮುಜ್ ಜಲಸಂಧಿಯಲ್ಲಿ ವಾಣಿಜ್ಯ ಹಡಗುಗಳ ಸುರಕ್ಷಿತ ಸಂಚಾರವನ್ನು ಖಚಿತಪಡಿಸುವುದು ಮತ್ತು ಕಚ್ಚಾ ತೈಲ ಸಾಗಣೆಯ ಮುಕ್ತ ಹರಿವನ್ನು ಕಾಪಾಡುವುದು ದಾಳಿಯ ಪ್ರಮುಖ ಉದ್ದೇಶವಾಗಿದೆ. ಲಾರಕ್ ದ್ವೀಪದಲ್ಲಿದ್ದ ರಾಕೆಟ್ ಲಾಂಚರ್‌ಗಳು ಜಲಮಾರ್ಗದ ಭದ್ರತೆಗೆ ಬೆದರಿಕೆ ಉಂಟುಮಾಡುತ್ತಿದ್ದವು ಎಂದು ಅಮೆರಿಕ ಹೇಳಿದೆ.

ಈ ದಾಳಿಯಲ್ಲಿ ತನ್ನ ಸೈನಿಕರು ಮೃತಪಟ್ಟಿದ್ದಾರೆ ಎಂದು ಆರೋಪಿಸಿರುವ ಇರಾನ್, ತಕ್ಷಣವೇ ಪ್ರತೀಕಾರದ ಕ್ರಮ ಕೈಗೊಂಡಿದೆ. ಜೋರ್ಡಾನ್‌ನಲ್ಲಿರುವ ಕಿಂಗ್ ಹುಸೇನ್ ಮತ್ತು ಅಲ್-ಅಜ್ರಾಕ್ ಪ್ರದೇಶಗಳಲ್ಲಿನ ಅಮೆರಿಕದ ವಾಯುನೆಲೆಗಳನ್ನು ಗುರಿಯಾಗಿಸಿಕೊಂಡು ಕ್ಷಿಪಣಿಗಳನ್ನು ಉಡಾಯಿಸಲಾಗಿದೆ. ಇರಾನ್ ಸರ್ಕಾರಿ ಮಾಧ್ಯಮಗಳ ವರದಿಯಂತೆ, ದಾಳಿಯಿಂದ ಅಮೆರಿಕದ ಫೈಟರ್ ಜೆಟ್‌ಗಳು, ನಿರ್ವಹಣಾ ಘಟಕಗಳು ಹಾಗೂ ಹಲವು ತಾಂತ್ರಿಕ ಮೂಲಸೌಕರ್ಯಗಳಿಗೆ ಭಾರೀ ಹಾನಿಯಾಗಿದೆ ಎಂದು ಹೇಳಲಾಗಿದೆ.

ಈ ಸೇನಾ ಸಂಘರ್ಷದ ಪರಿಣಾಮ ಜಾಗತಿಕ ಇಂಧನ ಮಾರುಕಟ್ಟೆಯ ಮೇಲೂ ತಕ್ಷಣದ ಪರಿಣಾಮ ಬೀರಿದೆ. ದಾಳಿಯ ಬಳಿಕ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲದ ಬೆಲೆ ಬ್ಯಾರೆಲ್‌ಗೆ 90.31 ಡಾಲರ್‌ಗೆ ಏರಿಕೆಯಾಗಿದೆ. ಇದೇ ವೇಳೆ ಅಮೆರಿಕದ ಡಬ್ಲ್ಯುಟಿಐ ಕಚ್ಚಾ ತೈಲದ ಬೆಲೆ 85.41 ಡಾಲರ್‌ಗೆ ಜಿಗಿದಿದೆ. ಸಂಘರ್ಷ ಮತ್ತಷ್ಟು ಉಲ್ಬಣಗೊಂಡರೆ ತೈಲ ಬೆಲೆ ಇನ್ನಷ್ಟು ಏರಿಕೆಯಾಗುವ ಆತಂಕ ಎದುರಾಗಿದೆ.

ಹಾರ್ಮುಜ್ ಜಲಸಂಧಿ ಜಾಗತಿಕ ಇಂಧನ ಪೂರೈಕೆಯ ಪ್ರಮುಖ ಮಾರ್ಗವಾಗಿದೆ. ವಿಶ್ವದ ಒಟ್ಟು ತೈಲ ಸಾಗಣೆಯ ಸುಮಾರು ಶೇ.20ರಷ್ಟು ಭಾಗ ಈ ಕಿರಿದಾದ ಜಲಮಾರ್ಗದ ಮೂಲಕ ಸಾಗುತ್ತದೆ. ಹೀಗಾಗಿ ಇಲ್ಲಿ ಹಡಗು ಸಂಚಾರಕ್ಕೆ ಅಡ್ಡಿಯಾದರೆ ಕಚ್ಚಾ ತೈಲ ಮಾತ್ರವಲ್ಲದೆ ಎಲ್‌ಪಿಜಿ, ಪೆಟ್ರೋಲಿಯಂ ಉತ್ಪನ್ನಗಳು ಹಾಗೂ ರಸಗೊಬ್ಬರಗಳ ಪೂರೈಕೆಯ ಮೇಲೂ ಗಂಭೀರ ಪರಿಣಾಮ ಬೀರುವ ಸಾಧ್ಯತೆಯಿದೆ.

ಇದರ ನಡುವೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಯುದ್ಧ ನೀತಿಯ ವಿರುದ್ಧ ದೇಶೀಯವಾಗಿಯೂ ಅಸಮಾಧಾನ ವ್ಯಕ್ತವಾಗಿದೆ. ಸೆನೆಟ್‌ನ ಉನ್ನತ ಡೆಮಾಕ್ರಟಿಕ್ ನಾಯಕ ಜ್ಯಾಕ್ ರೀಡ್, ಆರು ತಿಂಗಳು ಕಳೆದರೂ ಅಮೆರಿಕ ತನ್ನ ಗುರಿಗಳನ್ನು ಸಾಧಿಸಿಲ್ಲ ಎಂದು ಟೀಕಿಸಿದ್ದಾರೆ. ಮಧ್ಯಪ್ರಾಚ್ಯದಲ್ಲಿ ಅಮೆರಿಕದ ಸ್ಥಾನಮಾನ ಮತ್ತಷ್ಟು ದುರ್ಬಲವಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಇನ್ನೊಂದೆಡೆ, ಸಂಘರ್ಷಕ್ಕೆ ರಾಜತಾಂತ್ರಿಕ ಪರಿಹಾರ ಕಂಡುಕೊಳ್ಳಲು ಕತಾರ್ ಮತ್ತು ಪಾಕಿಸ್ತಾನ ಸತತ ಪ್ರಯತ್ನ ನಡೆಸುತ್ತಿವೆ. ಎರಡೂ ರಾಷ್ಟ್ರಗಳ ನಡುವೆ ಕದನ ವಿರಾಮ ಜಾರಿಗೆ ತರಲು ಮಧ್ಯಸ್ಥಿಕೆ ನಡೆಯುತ್ತಿದ್ದರೂ, ಇದುವರೆಗೆ ಶಾಶ್ವತ ಶಾಂತಿ ಒಪ್ಪಂದಕ್ಕೆ ಒಮ್ಮತ ಮೂಡಿಲ್ಲ. ಹೀಗಾಗಿ ಹಾರ್ಮುಜ್ ಜಲಸಂಧಿ ಸುತ್ತಲಿನ ಬೆಳವಣಿಗೆಗಳು ಮುಂದಿನ ದಿನಗಳಲ್ಲಿ ಜಾಗತಿಕ ಇಂಧನ ಮಾರುಕಟ್ಟೆ ಹಾಗೂ ಪಶ್ಚಿಮ ಏಷ್ಯಾದ ಭದ್ರತಾ ಪರಿಸ್ಥಿತಿಗೆ ನಿರ್ಣಾಯಕವಾಗುವ ಸಾಧ್ಯತೆಯಿದೆ.

Exit mobile version