ಲಖನೌ ಆ.30: ನೇಪಾಳದಲ್ಲಿ ಆಗಸ್ಟ್ 26ರಂದು ಸಂಭವಿಸಿದ ಹಠಾತ್ ಪ್ರವಾಹದ ಭೀಕರ ಪರಿಣಾಮ 700ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಈ ಪ್ರವಾಹದಲ್ಲಿ ಉತ್ತರ ಪ್ರದೇಶದ ಕುಶಿನಗರ ಜಿಲ್ಲೆಯ ನಾಲ್ವರು ಜಲವಿದ್ಯುತ್ ಕಾರ್ಮಿಕರು ನಾಪತ್ತೆಯಾಗಿದ್ದು, ಅವರ ಕುಟುಂಬಸ್ಥರಲ್ಲಿ ಆತಂಕ ಹೆಚ್ಚಾಗಿದೆ. ಪ್ರವಾಹ ಪೀಡಿತ ರಾಸುವಾ ಜಿಲ್ಲೆಯಲ್ಲಿ ವಿವಿಧ ಜಲವಿದ್ಯುತ್ ಯೋಜನೆಗಳಲ್ಲಿ ಕೆಲಸ ಮಾಡುತ್ತಿದ್ದ ಈ ಕಾರ್ಮಿಕರ ಬಗ್ಗೆ ಇದುವರೆಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ಇದೇ ವೇಳೆ ಬಿಹಾರದ ಮೊತಿಹಾರಿಯ 11 ವರ್ಷದ ಬಾಲಕನೊಬ್ಬ ಪ್ರವಾಹದ ವೇಳೆ ನಾಪತ್ತೆಯಾದ ತನ್ನ ತಂದೆಯನ್ನು ಹುಡುಕಿಕೊಂಡು ಕುಶಿನಗರದ ಗಂಡಕ್ ನದಿ ತೀರಕ್ಕೆ ಬಂದಿರುವುದು ಮನಕಲಕುವಂತಿದೆ. ಬಾಲಕ ತನ್ನ ಮೂವರು ಸಹೋದರರೊಂದಿಗೆ ಅಧಿಕಾರಿಗಳ ನೆರವಿನಿಂದ ನೇಪಾಳದಿಂದ ಭಾರತಕ್ಕೆ ಮರಳಿದ್ದು, ತಂದೆಯ ಪತ್ತೆಗಾಗಿ ಕಾಯುತ್ತಿದ್ದಾನೆ.
537 ಕಾರ್ಮಿಕರ ಸುಳಿವಿಲ್ಲ
ನೇಪಾಳದ ರಾಸುವಾ ಮತ್ತು ನುವಾಕೋಟ್ ಜಿಲ್ಲೆಗಳಲ್ಲಿರುವ ಒಂಬತ್ತು ಜಲವಿದ್ಯುತ್ ಯೋಜನೆಗಳಲ್ಲಿ ಒಟ್ಟು 537 ಕಾರ್ಮಿಕರು ಮತ್ತು ಸಿಬ್ಬಂದಿ ಇನ್ನೂ ನಾಪತ್ತೆಯಾಗಿದ್ದಾರೆ. ನೇಪಾಳದ ಇಂಡಿಪೆಂಡೆಂಟ್ ಪವರ್ ಪ್ರೊಡ್ಯೂಸರ್ಸ್ ಅಸೋಸಿಯೇಷನ್ ಪ್ರಕಾರ, ಪ್ರವಾಹದ ಬಳಿಕ ಆರಂಭದಲ್ಲಿ 898 ಮಂದಿ ಸಂಪರ್ಕಕ್ಕೆ ಸಿಗದೆ ಹೋಗಿದ್ದರು. ಈ ಪೈಕಿ 361 ಮಂದಿಯನ್ನು ರಕ್ಷಿಸಲಾಗಿದ್ದು, ಉಳಿದವರಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ.
ಸುರಂಗದಲ್ಲಿ 300 ಮಂದಿ ಸಿಲುಕಿರುವ ಶಂಕೆ
ರಾಸುವಾ ಜಿಲ್ಲೆಯ 216 ಮೆಗಾವಾಟ್ ಸಾಮರ್ಥ್ಯದ ಅಪ್ಪರ್ ತ್ರಿಶೂಲಿ-1 ಜಲವಿದ್ಯುತ್ ಯೋಜನೆ ಅತ್ಯಂತ ಹೆಚ್ಚು ಹಾನಿಗೊಳಗಾಗಿದೆ. ಇಲ್ಲಿ ಸುಮಾರು 300 ಮಂದಿ ಸುರಂಗದೊಳಗೆ ಸಿಲುಕಿರುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ.
ಪ್ರವಾಹದ ರಭಸಕ್ಕೆ ಸುರಂಗಗಳ ಪ್ರವೇಶ ದ್ವಾರಗಳು ಮಣ್ಣು, ಕೆಸರು ಮತ್ತು ಅವಶೇಷಗಳಿಂದ ಮುಚ್ಚಿಹೋಗಿವೆ. ಅವಶೇಷಗಳನ್ನು ತೆರವುಗೊಳಿಸಿ ಒಳಗೆ ಸಿಲುಕಿರುವವರನ್ನು ತಲುಪುವುದು ರಕ್ಷಣಾ ಸಿಬ್ಬಂದಿಗೆ ದೊಡ್ಡ ಸವಾಲಾಗಿದೆ. ಅಪ್ಪರ್ ತ್ರಿಶೂಲಿ-3ಎ ಹಾಗೂ ಚಿಲಿಮೆ ಸೇರಿದಂತೆ ಇತರ ಜಲವಿದ್ಯುತ್ ಯೋಜನೆಗಳಲ್ಲೂ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.
ಮಕ್ಕಳು, ಶಿಕ್ಷಣ ವ್ಯವಸ್ಥೆಯ ಮೇಲೂ ಪರಿಣಾಮ
ಪ್ರವಾಹದಿಂದ ಹಾನಿಗೊಳಗಾದ ಮೂರು ಜಿಲ್ಲೆಗಳಲ್ಲಿ 238 ವಿದ್ಯಾರ್ಥಿಗಳು ಮತ್ತು 18 ಶಿಕ್ಷಕರು ನಾಪತ್ತೆಯಾಗಿದ್ದಾರೆ ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಅಂತಾರಾಷ್ಟ್ರೀಯ ರೆಡ್‌ಕ್ರಾಸ್ ಸಮಿತಿಯ ಅಂದಾಜಿನ ಪ್ರಕಾರ 93,000ಕ್ಕೂ ಹೆಚ್ಚು ಜನರು ಪ್ರವಾಹದಿಂದ ಬಾಧಿತರಾಗಿದ್ದಾರೆ.
ಪ್ರವಾಹದಿಂದ ಸುಮಾರು 17,000 ಮಕ್ಕಳಿಗೆ ತಕ್ಷಣ ಮಾನವೀಯ ನೆರವು ಅಗತ್ಯವಿದೆ ಎಂದು ಯುನಿಸೆಫ್ ಎಚ್ಚರಿಸಿದೆ. 18 ಶಾಲೆಗಳು ಸಂಪೂರ್ಣವಾಗಿ ಧ್ವಂಸಗೊಂಡಿದ್ದು, 20 ಶಾಲೆಗಳು ಹಾನಿಗೊಳಗಾಗಿವೆ. ಇದರಿಂದ ಸಾವಿರಾರು ಮಕ್ಕಳ ಶಿಕ್ಷಣಕ್ಕೆ ತೀವ್ರ ಹೊಡೆತ ಬಿದ್ದಿದೆ.
ಪುನರ್‌ನಿರ್ಮಾಣಕ್ಕೆ ಬಿಲಿಯನ್‌ಗಟ್ಟಲೆ ವೆಚ್ಚ
ಪ್ರವಾಹದಿಂದ ಹಾನಿಗೊಳಗಾದ ಮೂಲಸೌಕರ್ಯಗಳ ಪುನರ್‌ನಿರ್ಮಾಣಕ್ಕೆ ಬಿಲಿಯನ್‌ಗಟ್ಟಲೆ ಡಾಲರ್ ವೆಚ್ಚವಾಗುವ ಸಾಧ್ಯತೆಯಿದೆ ಎಂದು ನೇಪಾಳ ಸರ್ಕಾರ ತಿಳಿಸಿದೆ. ಹೆವಿ-ಲಿಫ್ಟ್ ಡ್ರೋನ್‌ಗಳು, ಡಿಎನ್‌ಎ ಪರೀಕ್ಷಾ ಕಿಟ್‌ಗಳು ಹಾಗೂ ಮೃತದೇಹ ಸಂರಕ್ಷಣೆಗೆ ಫ್ರೀಜರ್ ಘಟಕ ಸೇರಿದಂತೆ ಅಗತ್ಯ ರಕ್ಷಣಾ ಸಾಮಗ್ರಿಗಳಿಗೆ ಅಂತಾರಾಷ್ಟ್ರೀಯ ನೆರವು ಕೋರಲಾಗಿದೆ.
ಐದನೇ ದಿನವೂ ನೇಪಾಳದಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ಅವಶೇಷಗಳಡಿ ಸಿಲುಕಿರುವವರನ್ನು ಜೀವಂತವಾಗಿ ಹೊರತೆಗೆಯುವ ನಿರೀಕ್ಷೆಯಲ್ಲಿ ತಂಡಗಳು ಹಗಲು-ರಾತ್ರಿ ಕಾರ್ಯಾಚರಣೆ ನಡೆಸುತ್ತಿವೆ. ಇದೇ ವೇಳೆ ಸಂಭವನೀಯ ಪ್ರವಾಹ ಅಪಾಯಗಳನ್ನು ಮುಂಚಿತವಾಗಿ ಗುರುತಿಸಲು ಹಿಮನದಿಗಳ ಮೇಲಿನ ನಿಗಾ ವ್ಯವಸ್ಥೆಯನ್ನು ಭಾರತವೂ ಬಲಪಡಿಸುತ್ತಿದೆ.
