ವಾಷಿಂಗ್ಟನ್: ಇರಾನ್ನಲ್ಲಿ ಯುದ್ಧ ಆರಂಭವಾದ ಬಳಿಕ ಸಾರ್ವಜನಿಕವಾಗಿ ಕಾಣಿಸಿಕೊಳ್ಳದಿರುವ ಇರಾನ್‌ನ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ಅವರ ಆರೋಗ್ಯ ಸ್ಥಿತಿಯ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಹತ್ವದ ಹೇಳಿಕೆ ನೀಡಿದ್ದಾರೆ. ಫೆಬ್ರವರಿ 28ರಂದು ಟೆಹ್ರಾನ್‌ನಲ್ಲಿ ನಡೆದ ಅಮೆರಿಕ-ಇಸ್ರೇಲಿ ದಾಳಿಯ ವೇಳೆ ಖಮೇನಿ ಗಾಯಗೊಂಡಿದ್ದಾರೆ ಮತ್ತು ಬಹುಶಃ ಕೋಮಾದಲ್ಲಿದ್ದಾರೆ ಎಂದು ಟ್ರಂಪ್ ಸ್ಪಷ್ಟನೆ ನೀಡಿದ್ದಾರೆ.
ಫಾಕ್ಸ್ ನ್ಯೂಸ್ ರೇಡಿಯೊಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಟ್ರಂಪ್, “ಮೊಜ್ತಬಾ ಬಹುಶಃ ಇನ್ನೂ ಬದುಕಿದ್ದಾರೆ ಎಂದು ನಾನು ನಂಬುತ್ತೇನೆ. ಅವರು ಗಂಭೀರವಾಗಿ ಹಾನಿಗೊಳಗಾಗಿರಬಹುದು, ಆದರೆ ಯಾವುದೋ ರೂಪದಲ್ಲಿ ಜೀವಂತವಾಗಿರಬಹುದು” ಎಂದು ಹೇಳಿದ್ದಾರೆ.
ಫೆಬ್ರವರಿ 28ರಂದು ಟೆಹ್ರಾನ್‌ನಲ್ಲಿ ನಡೆದ ಅಮೆರಿಕ ಮತ್ತು ಇಸ್ರೇಲ್ ನಡೆಸಿದ ದಾಳಿಯ ವೇಳೆ ಖಮೇನಿ ಗಾಯಗೊಂಡಿದ್ದಾರೆ ಎಂಬ ವರದಿಗಳು ಮೊದಲಿಗೆ ಹೊರಬಂದವು. ಈ ದಾಳಿಯ ನಂತರದಿಂದಲೇ ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಕೆಲ ಮಾಧ್ಯಮ ವರದಿಗಳ ಪ್ರಕಾರ ದಾಳಿಯ ಪರಿಣಾಮವಾಗಿ ಖಮೇನಿ ಅವರ ದೇಹದ ಕೆಲವು ಭಾಗಗಳಿಗೆ ಗಂಭೀರ ಗಾಯಗಳಾಗಿವೆ ಎಂದು ಹೇಳಲಾಗುತ್ತಿದೆ.
ಅವರ ಕಾಲು, ಕೈ ಮತ್ತು ತೋಳಿಗೆ ಗಂಭೀರ ಗಾಯಗಳಾಗಿವೆ ಎಂದು ವರದಿಯಾಗಿದೆ. ಕೆಲ ಅಂತರಾಷ್ಟ್ರೀಯ ವರದಿಗಳಲ್ಲಿ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಮತ್ತೊಂದೆಡೆ, ಕೆಲ ಸುದ್ದಿಗಳಲ್ಲಿ ಅವರು ಕೋಮಾದಲ್ಲಿರಬಹುದು ಎಂಬ ಊಹಾಪೋಹಗಳು ಹರಿದಾಡುತ್ತಿವೆ. ಆದರೆ ಈ ಕುರಿತು ಇರಾನ್ ಸರ್ಕಾರದಿಂದ ಯಾವುದೇ ಅಧಿಕೃತ ದೃಢೀಕರಣ ಇನ್ನೂ ಹೊರಬಂದಿಲ್ಲ.
ಈ ದಾಳಿಯ ವೇಳೆ ಖಮೇನಿ ಕುಟುಂಬದವರಿಗೂ ಗಾಯಗಳಾಗಿವೆ ಎನ್ನಲಾಗುತ್ತಿದೆ. ವರದಿಗಳ ಪ್ರಕಾರ ಅವರ ಪತ್ನಿ, ಸಹೋದರಿ, ಸೊಸೆ ಹಾಗೂ ತಂದೆಗೂ ಗಾಯಗಳಾಗಿವೆ ಎಂದು ಹೇಳಲಾಗುತ್ತಿದೆ. ಈ ಘಟನೆ ಬಳಿಕ ಟೆಹ್ರಾನ್‌ನಲ್ಲಿ ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ ಎಂಬ ಮಾಹಿತಿಯೂ ಹೊರಬಂದಿದೆ.
ಯುದ್ಧ ಆರಂಭವಾದ ದಿನದಿಂದ ಖಮೇನಿ ಸಾರ್ವಜನಿಕವಾಗಿ ಯಾವುದೇ ಸಭೆ ಅಥವಾ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿಲ್ಲ. ಸಾಮಾನ್ಯವಾಗಿ ಇಂತಹ ಸಂದರ್ಭಗಳಲ್ಲಿ ನಾಯಕರು ಟಿವಿ ಅಥವಾ ವೀಡಿಯೊ ಸಂದೇಶಗಳ ಮೂಲಕ ದೇಶವನ್ನುದ್ದೇಶಿಸಿ ಮಾತನಾಡುವುದು ರೂಢಿಯಾಗಿದೆ. ಆದರೆ ಈ ಬಾರಿ ಅವರ ಹೇಳಿಕೆ ಬರಹ ರೂಪದಲ್ಲಿ ಮಾತ್ರ ಹೊರಬಂದಿದೆ ಎಂದು ವರದಿಗಳು ಹೇಳುತ್ತಿವೆ. ಇದರಿಂದ ಅವರ ಆರೋಗ್ಯ ಸ್ಥಿತಿಯ ಬಗ್ಗೆ ಇನ್ನಷ್ಟು ಅನುಮಾನಗಳು ಮೂಡಿವೆ.
ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ಜಂಟಿ ದಾಳಿ ನಡೆಸಿದ ಬಳಿಕ ಮಧ್ಯಪ್ರಾಚ್ಯದಲ್ಲಿ ಯುದ್ಧ ಪರಿಸ್ಥಿತಿ ಉಲ್ಬಣಗೊಂಡಿದೆ. ಹಾರ್ಮುಜ್ ಜಲಸಂಧಿಯನ್ನು ಮುಚ್ಚುವುದಾಗಿ ಇರಾನ್ ಬೆದರಿಕೆ ಹಾಕಿದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ 100 ಡಾಲರ್ ಗಡಿ ದಾಟಿದೆ. ಈ ಯುದ್ಧದ ಪರಿಣಾಮ ಭಾರತ ಸೇರಿದಂತೆ ಹಲವು ದೇಶಗಳ ಮೇಲೆ ಆರ್ಥಿಕ ಪರಿಣಾಮ ಬೀರಿದೆ.
ಖಮೇನಿ ಅವರ ಆರೋಗ್ಯ ಸ್ಥಿತಿಯ ಬಗ್ಗೆ ಅಧಿಕೃತ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ಆದರೆ, ಅವರು ತೀವ್ರವಾಗಿ ಗಾಯಗೊಂಡಿರುವ ಸಾಧ್ಯತೆ ಇದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.





