ಶ್ರೀಲಂಕಾ ದ್ವೀಪ ರಾಷ್ಟ್ರವನ್ನು ‘ದಿತ್ವಾ’ ಎಂಬ ಭಯಾನಕ ಸೈಕ್ಲೋನ್ ತೀವ್ರವಾಗಿ ಅಪ್ಪಳಿಸಿದೆ. ಗಂಟೆಗೆ 150 ಕಿ.ಮೀ.ಗಿಂತಲೂ ಹೆಚ್ಚು ವೇಗದಲ್ಲಿ ಬೀಸಿದ ಗಾಳಿ ಮತ್ತು ನಿರಂತರ ಧಾರಾಕಾರ ಮಳೆಯಿಂದ ದೇಶದ ಬಹುತೇಕ ಭಾಗಗಳು ಜಲಾವೃತಗೊಂಡಿವೆ. ಶ್ರೀಲಂಕಾದ ವಿಪತ್ತು ನಿರ್ವಹಣಾ ಕೇಂದ್ರ (DMC) ಬಿಡುಗಡೆ ಮಾಡಿದ ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಈ ದುರಂತದಲ್ಲಿ ಈಗಾಗಲೇ 300ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಇದು ಕಳೆದ ಒಂದು ದಶಕದಲ್ಲಿ ಶ್ರೀಲಂಕಾ ಎದುರಿಸಿದ ಅತ್ಯಂತ ಭಯಾನಕ ಪ್ರಕೃತಿ ವಿಕೋಪಗಳಲ್ಲಿ ಒಂದಾಗಿ ಪರಿಣಮಿಸಿದೆ.
ದಿತ್ವಾ ಸೈಕ್ಲೋನ್ ಡಿಸೆಂಬರ್ ಮೊದಲ ವಾರದಲ್ಲಿ ಬಂಗಾಳ ಕೊಲ್ಲಿಯಲ್ಲಿ ರೂಪುಗೊಂಡು ಶ್ರೀಲಂಕಾದ ಪೂರ್ವ ಮತ್ತು ಉತ್ತರ-ಪೂರ್ವ ಕರಾವಳಿಯನ್ನು ಅಪ್ಪಳಿಸಿತು. ಭಾನುವಾರದವರೆಗೂ ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ನದಿಗಳು ಉಕ್ಕಿ ಹರಿಯುತ್ತಿದ್ದು, ತಗ್ಗು ಪ್ರದೇಶಗಳು ಸಂಪೂರ್ಣ ಜಲಪ್ರಳಯದ ರೂಪ ಪಡೆದಿವೆ.
ಮಾಹಿತಿ ಪ್ರಕಾರ, 2.73ಲಕ್ಷ ಕುಟುಂಬಗಳಿಂದ ಸುಮಾರು 10 ಲಕ್ಷ ಜನರು ಈ ದುರಂತದಿಂದ ನೇರವಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. 20,000ಕ್ಕೂ ಹೆಚ್ಚು ಮನೆಗಳು ಸಂಪೂರ್ಣ ಧ್ವಂಸವಾಗಿವೆ. ಸುಮಾರು 1.22 ಲಕ್ಷ ಜನರು ಸರ್ಕಾರಿ ಮತ್ತು ಖಾಸಗಿ ಆಶ್ರಯ ಶಿಬಿರಗಳಲ್ಲಿ ತಾತ್ಕಾಲಿಕವಾಗಿ ವಾಸಿಸುತ್ತಿದ್ದಾರೆ. ಉಳಿದ 8.33 ಲಕ್ಷ ಜನರಿಗೆ ತುರ್ತು ಆಹಾರ, ಕುಡಿಯುವ ನೀರು, ಔಷಧಿ ಮತ್ತು ಬಟ್ಟೆ-ಹಾಸಿಗೆಗಳ ನೆರವು ಅಗತ್ಯವಿದೆ ಎಂದು DMC ತಿಳಿಸಿದೆ.
ಭಾರಿ ಗಾಳಿ ಮತ್ತು ಮಳೆಯಿಂದ ಸಾವಿರಾರು ಮರಗಳು ಧರೆಗುರುಳಿ ರಸ್ತೆ ಸಂಚಾರ ಪೂರ್ತಿ ಸ್ತಬ್ಧವಾಗಿದೆ. ವಿದ್ಯುತ್ ಕಂಬಗಳು ಮುರಿದು ಬಿದ್ದಿದ್ದು, ಬಹುತೇಕ ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ದೂರವಾಣಿ ಮತ್ತು ಇಂಟರ್ನೆಟ್ ಸೇವೆಗಳೂ ಸ್ಥಬ್ದವಾಗಿದೆ. ರಕ್ಷಣಾ ಕಾರ್ಯಾಚರಣೆಗೆ ಸೈನ್ಯ, ನೌಕಾಪಡೆ ಮತ್ತು ವಾಯುಪಡೆಯ ಸಾವಿರಾರು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಹೆಲಿಕಾಪ್ಟರ್‌ಗಳ ಮೂಲಕ ಪ್ರವಾಹ ಪೀಡಿತ ಪ್ರದೇಶಗಳಿಂದ ಜನರನ್ನು ರಕ್ಷಿಸಲಾಗುತ್ತಿದೆ.
ಹವಾಮಾನ ಇಲಾಖೆಯ ಮುನ್ಸೂಚನೆಯು ಇನ್ನಷ್ಟು ಆತಂಕ ಮೂಡಿಸಿದೆ. ಮುಂದಿನ ಮೂರು ದಿನಗಳವರೆಗೂ ಭಾರಿ ಮಳೆ ಮುಂದುವರಿಯಲಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಈಗಾಗಲೇ ತುಂಬಿ ತುಳುಕುತ್ತಿರುವ ಜಲಾಶಯಗಳು, ಅಣೆಕಟ್ಟುಗಳು ಮತ್ತಷ್ಟು ಒತ್ತಡಕ್ಕೆ ಒಳಗಾಗುವ ಸಾಧ್ಯತೆ ಇದೆ. ಕೆಲವೆಡೆ ಭೂಕುಸಿತದ ಅಪಾಯವೂ ಹೆಚ್ಚಾಗಿದೆ.





