ಆಫ್ರಿಕಾ, ಕಾಂಗೋ: ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯದ ಲುವಾಲಾಬಾ ಪ್ರಾಂತ್ಯದಲ್ಲಿರುವ ಪ್ರಸಿದ್ಧ ತಾಮ್ರ ಮತ್ತು ಕೋಬಾಲ್ಟ್ ಗಣಿಯಲ್ಲಿ ಭಾರೀ ದುರಂತ ಸಂಭವಿಸಿದೆ. ಶನಿವಾರ ನವೆಂಬರ್ 15ರಂದು ನಡೆದ ಈ ಘಟನೆಯಲ್ಲಿ ಸೇತುವೆ ಕುಸಿದು ಕನಿಷ್ಠ 32 ಮಂದಿ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಇನ್ನೂ ಹಲವಾರು ಮಂದಿ ಗಾಯಗೊಂಡಿದ್ದು, ಸ್ಥಳದಲ್ಲೇ ರಕ್ಷಣಾ ಕಾರ್ಯಗಳು ಜೋರಾಗಿ ಮುಂದುವರಿದಿವೆ. ಈ ಭಯಾನಕ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಘಟನೆ ಲುವಾಲಾಬಾದ ಕಲಾಂಡೊ ಗಣಿಯ ಮುಲೋಂಡೊ ಪ್ರದೇಶದಲ್ಲಿ ನಡೆದಿದೆ. ಗಣಿಗಾರರು ದಿನನಿತ್ಯವಾಗಿ ಸಂಚಾರ ಮಾಡುವ ಈ ಸೇತುವೆ ಜನಸಂದಣಿಯಿಂದ ತುಂಬಿಕೊಂಡಿದ್ದ ವೇಳೆ ಕುಸಿದು ಬಿದ್ದಿದೆ. ಸ್ಥಳೀಯ ಮಾಧ್ಯಮಗಳು ಮತ್ತು ಅಧಿಕಾರಿಗಳ ಮಾಹಿತಿ ಪ್ರಕಾರ, ಈ ದುರಂತಕ್ಕೆ ನೇರ ಕಾರಣ ಸೈನಿಕರ ಗುಂಡಿನ ದಾಳಿ ಎನ್ನಲಾಗಿದೆ.
ಕಾಂಗೋದ ಕುಶಲಕರ್ಮಿ ಮತ್ತು ಸಣ್ಣ-ಪ್ರಮಾಣದ ಗಣಿಗಾರಿಕೆ ಬೆಂಬಲ ಸೇವೆ (SAEMAPE) ಅಧಿಕಾರಿಗಳು ತಿಳಿಸಿದಂತೆ, ಗಣಿ ಪ್ರದೇಶದಲ್ಲಿ ಸೇನೆಯ ಸೈನಿಕರು ಗುಂಡು ಹಾರಿಸಿದ್ದಾರೆ. ಇದರಿಂದ ಭಯಭೀತರಾದ ಸಾವಿರಾರು ಗಣಿಗಾರರು ಓಡಲು ಶುರು ಮಾಡಿದ್ದಾರೆ. ಗಣಿಯ ಒಳಗಿನಿಂದ ಹೊರಬರುವ ಮುಖ್ಯ ಮಾರ್ಗವಾಗಿದ್ದ ಸೇತುವೆಯ ಕಡೆಗೆ ಜನದಟ್ಟಣೆ ಉಂಟಾಗಿದೆ. ಈ ತೀವ್ರ ಒತ್ತಡವನ್ನು ಸೇತುವೆ ತಾಳಲಾರದೆ ಕುಸಿದು ಬಿದ್ದಿದೆ.
Horror in Kawama, Lualaba, Democratic Republic of the Congo yesterday.
A massive landslide at an artisanal mine reportedly killed at least 70 people. Some of the images are too graphic to share. pic.twitter.com/zGFvm45boU
— Volcaholic 🌋 (@volcaholic1) November 16, 2025
ಕೆಲವರು ಸೇತುವೆಯಿಂದಲೇ ಕೆಳಗೆ ಬಿದ್ದು ಸಾವನ್ನಪ್ಪಿದ್ದಾರೆ, ಕೆಲವರನ್ನು ಕುಸಿದ ಸೇತುವೆಯಡಿ ಸಿಲುಕಿ ಪ್ರಾಣ ಕಳೆದುಕೊಂಡಿದ್ದಾರೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವೀಡಿಯೋದಲ್ಲಿ ಹಲವಾರು ಜನರು ಸೇತುವೆಯ ಮೇಲೆ ಕಿಕ್ಕಿರಿದು ನಿಂತಿರುವುದು, ಕೆಲ ಕ್ಷಣಗಳಲ್ಲೇ ಸೇತುವೆಯ ಕೆಲವು ಭಾಗಗಳು ಕುಸಿದು ಜನರು ಆಳಕ್ಕೆ ಬಿದ್ದ ದೃಶ್ಯಗಳು ಕಾಣಿಸುತ್ತವೆ.
ಚೀನಾದ ಸಿಚುವಾನ್‌ನಲ್ಲಿ ಬೃಹತ್ ಹಾಂಗ್‌ಕ್ವಿ ಸೇತುವೆ ಕುಸಿತ..!
ಚೀನಾ, ನವೆಂಬರ್ 12, 2025: ಚೀನಾದ ಸಿಚುವಾನ್ ಪ್ರಾಂತ್ಯದಲ್ಲಿ ಹೊಸದಾಗಿ ನಿರ್ಮಿಸಲಾಗಿದ್ದ ಬೃಹತ್ ಹಾಂಗ್‌ಕ್ವಿ ಸೇತುವೆ (Hongqi Bridge) ಒಂದು ಭಾಗ ಮಂಗಳವಾರ ನೋಡನೋಡುತ್ತಿದ್ದಂತೆ ಕುಸಿದು ಬಿದ್ದಿದೆ. ಮಧ್ಯ ಚೀನಾವನ್ನು ಟಿಬೆಟ್‌ಗೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ G4218 ರ ಭಾಗವಾಗಿದ್ದ ಈ 758 ಮೀಟರ್ ಉದ್ದದ ಸೇತುವೆಯು ಕೇವಲ ಸೆಪ್ಟೆಂಬರ್ ತಿಂಗಳಲ್ಲಿ ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಂಡಿತ್ತು. ಆದರೆ ಉದ್ಘಾಟನೆಗೊಂಡ ಕೇವಲ 2-3 ತಿಂಗಳುಗಳಲ್ಲೇ ಈ ದುರಂತ ಸಂಭವಿಸಿದೆ. ಸೇತುವೆ ಕುಸಿಯುವ ದೃಶ್ಯಗಳನ್ನು ಒಳಗೊಂಡ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಎರಡೂವರೆ ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ.
ಸೇತುವೆಯು ಶುವಾಂಗ್‌ಜಿಯಾಂಗ್‌ಕೌ (Shuangjiangkou) ಪ್ರದೇಶದಲ್ಲಿ ನಿರ್ಮಿತವಾಗಿದ್ದು, ಇದು ದಾಡು ನದಿ (Dadu River) ಮೇಲೆ ನಿರ್ಮಿಸಲಾಗಿದೆ. ಈ ಸೇತುವೆಯ ನಿರ್ಮಾಣವು ಸ್ಥಳೀಯವಾಗಿ ನಡೆಯುತ್ತಿರುವ ಶುವಾಂಗ್‌ಜಿಯಾಂಗ್‌ಕೌ ಅಣೆಕಟ್ಟು ಯೋಜನೆಗೆ (Shuangjiangkou Dam Project) ಸಂಬಂಧಿಸಿದೆ. 2024ರಲ್ಲಿ ಪೂರ್ಣಗೊಂಡ ಈ ಸೇತುವೆಯು ಕೇವಲ 10-11 ತಿಂಗಳುಗಳ ಕಾಲ ಮಾತ್ರ ಬಳಕೆಯಲ್ಲಿತ್ತು ಎಂಬುದು ಗಮನಾರ್ಹ. ಸೇತುವೆಯ ಬಳಿ ಇರುವ ಪರ್ವತ ಇಳಿಜಾರುಗಳಲ್ಲಿ ಬಿರುಕುಗಳು ಕಾಣಿಸಿಕೊಂಡಿದ್ದು, ಭೂಪ್ರದೇಶದಲ್ಲಿ ಅಸ್ಥಿರತೆ ಗಮನಕ್ಕೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಸೇತುವೆಯ ಸಂಚಾರವನ್ನು ಒಂದು ದಿನ ಮುಂಚಿತವಾಗಿ ಸಂಪೂರ್ಣವಾಗಿ ಮುಚ್ಚುವ ನಿರ್ಧಾರ ತೆಗೆದುಕೊಳ್ಳಲಾಗಿತ್ತು ಎಂದು ಮೇರ್ಕಾಂಗ್‌ನ ಅಧಿಕಾರಿಗಳು ತಿಳಿಸಿದ್ದಾರೆ.
ಆದರೆ ಮಂಗಳವಾರ ಪರ್ವತ ಇಳಿಜಾರಿನ ಸ್ಥಿತಿ ಹದಗೆಟ್ಟು, ಭೂಕುಸಿತಗಳು ಸಂಭವಿಸಿದ್ದರಿಂದ ಸೇತುವೆಯ ಒಂದು ಭಾಗ ಸಂಪೂರ್ಣ ಕುಸಿದು ಬಿದ್ದಿದೆ. ನ್ಯೂಯಾರ್ಕ್ ಪೋಸ್ಟ್ ವರದಿಯ ಪ್ರಕಾರ, ಈ ಭೂಕುಸಿತವು ಸೇತುವೆಯ ಕುಸಿತಕ್ಕೆ ನೇರ ಕಾರಣವಾಗಿದೆ. ಸೇತುವೆಯ ಕುಸಿತದ ವಿಡಿಯೋವನ್ನು Weather Monitor ಹೆಸರಿನ ಎಕ್ಸ್ (X – formerly Twitter) ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಇದು ಜಗತ್ತಿನಾದ್ಯಂತ ಚರ್ಚೆಗೆ ಗ್ರಾಸವಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಬಳಕೆದಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಬ್ಬರು “ಪರ್ವತ ಮೇಲಿನ ಅಪಾಯ ಮೌಲ್ಯಮಾಪನಗಳು ಸರಿಯಾಗಿ ನಡೆದಿಲ್ಲ. ಇದೇ ಯೋಜನೆ ವಿಫಲತೆಗೆ ಮುಖ್ಯ ಕಾರಣ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು ಚೀನಾದಲ್ಲಿ ನಿರ್ಮಾಣ ಎಂದರೆ ಕುಸಿತ ಖಚಿತ ಎಂದು ವ್ಯಂಗ್ಯವಾಡಿದ್ದಾರೆ. ಚೀನಾದ ನಿರ್ಮಾಣ ಗುಣಮಟ್ಟದ ಬಗ್ಗೆ ವಿಶ್ವದಾದ್ಯಂತ ಪ್ರಶ್ನೆಗಳು ಎದ್ದಿವೆ. ಕಳೆದ ಕೆಲವು ವರ್ಷಗಳಲ್ಲಿ ಚೀನಾದಲ್ಲಿ ಹಲವು ಸೇತುವೆಗಳು, ಕಟ್ಟಡಗಳು ಮತ್ತು ಅಣೆಕಟ್ಟುಗಳು ಕುಸಿದಿರುವ ಘಟನೆಗಳು ಈ ಚರ್ಚೆಗೆ ಬಲ ನೀಡಿವೆ.
ಈ ಘಟನೆಯು ಚೀನಾದ ಮೂಲಸೌಕರ್ಯ ಯೋಜನೆಗಳ ಸುರಕ್ಷತೆಯ ಬಗ್ಗೆ ಗಂಭೀರ ಚಿಂತೆಗಳನ್ನು ಎತ್ತಿದೆ. ಸಿಚುವಾನ್ ಪ್ರಾಂತ್ಯವು ಭೂಕಂಪ ಪ್ರದೇಶವಾಗಿದ್ದು, ಭೂಕುಸಿತಗಳು ಸಾಮಾನ್ಯ. ಆದರೆ ಹೊಸದಾಗಿ ನಿರ್ಮಿಸಿದ ಸೇತುವೆಯೇ ಕುಸಿಯುವುದು ನಿರ್ಮಾಣ ದೋಷ ಅಥವಾ ಯೋಜನಾ ತಪ್ಪುಗಳನ್ನು ಸೂಚಿಸುತ್ತದೆ. ಸ್ಥಳೀಯ ಅಧಿಕಾರಿಗಳು ತನಿಖೆ ಆರಂಭಿಸಿದ್ದು, ಸೇತುವೆಯ ಉಳಿದ ಭಾಗಗಳ ಸುರಕ್ಷತೆಯನ್ನು ಪರಿಶೀಲಿಸಲಾಗುತ್ತಿದೆ.
ಈ ಸೇತುವೆಯು ಚೀನಾ-ಟಿಬೆಟ್ ಸಂಪರ್ಕಕ್ಕೆ ಪ್ರಮುಖವಾಗಿದ್ದು, ಅದರ ಕುಸಿತದಿಂದ ಸಂಚಾರ ವ್ಯವಸ್ಥೆಯ ಮೇಲೆ ದೊಡ್ಡ ಪರಿಣಾಮ ಬೀರಿದೆ. ಪರ್ಯಾಯ ಮಾರ್ಗಗಳನ್ನು ತೆರೆಯಲಾಗಿದ್ದು, ಸಾರಿಗೆ ಸಚಿವಾಲಯ ತುರ್ತು ಕ್ರಮಗಳನ್ನು ಕೈಗೊಂಡಿದೆ. ಶುವಾಂಗ್‌ಜಿಯಾಂಗ್‌ಕೌ ಅಣೆಕಟ್ಟು ಯೋಜನೆಯು ಚೀನಾದ ಅತಿದೊಡ್ಡ ಜಲವಿದ್ಯುತ್ ಯೋಜನೆಗಳಲ್ಲಿ ಒಂದಾಗಿದ್ದು, ಇದಕ್ಕೆ ಸಂಬಂಧಿಸಿದ ಮೂಲಸೌಕರ್ಯಗಳ ಸುರಕ್ಷತೆಯ ಬಗ್ಗೆ ಈಗ ಪ್ರಶ್ನೆಗಳು ಎದ್ದಿವೆ.





