ಚೀನಿಯರು ತಮ್ಮ ವಿಭಿನ್ನ ಆವಿಷ್ಕಾರಗಳು ಮತ್ತು ಅಗ್ಗದ ಉತ್ಪನ್ನಗಳ ಮೂಲಕ ಜಗತ್ತಿನ ಗಮನ ಸೆಳೆಯುವುದು ಹೊಸದೇನಲ್ಲ. ಆದರೆ ಈ ಬಾರಿ ಚೀನಾ ಸುದ್ದಿಯಲ್ಲಿರುವುದು ಯಾವುದೇ ಎಲೆಕ್ಟ್ರಾನಿಕ್ ಗ್ಯಾಜೆಟ್‌ನಿಂದಲ್ಲ, ಬದಲಾಗಿ ಒಂದು ವಿಚಿತ್ರ ಮತ್ತು ರೋಚಕ ಲವ್ ಇನ್ಸೂರೆನ್ಸ್ (Love Insurance) ಮೂಲಕ. ಪ್ರೀತಿ ಎಂಬುದು ಕೇವಲ ಭಾವನೆಗಳ ಮೇಲೆ ನಿಂತಿರುತ್ತದೆ ಎಂಬುದು ಹಳೆಯ ಮಾತು. ಆದರೆ ಈ ಪ್ರೀತಿಯನ್ನೇ ಬಂಡವಾಳವಾಗಿಸಿಕೊಂಡು ಲಕ್ಷಾಂತರ ರೂಪಾಯಿ ಲಾಭ ಗಳಿಸಬಹುದು ಎಂದು ತೋರಿಸಿಕೊಟ್ಟಿದ್ದಾಳೆ ಚೀನಾದ ಶಾಂಕ್ಸಿ ಪ್ರಾಂತ್ಯದ ‘ವೂ’ ಎಂಬ ಯುವತಿ.
ಏನಿದು ಲವ್ ಇನ್ಸೂರೆನ್ಸ್ ಕಥೆ?
ಈ ಕಥೆ ಶುರುವಾಗುವುದು 2015ರಲ್ಲಿ, ಆಗ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದ ವೂ ಮತ್ತು ವಾಂಗ್ ಎಂಬ ಜೋಡಿ ಪರಸ್ಪರ ಪ್ರೀತಿಸುತ್ತಿದ್ದರು. 2016ರಲ್ಲಿ ವೂ ತನ್ನ ಗೆಳೆಯನಿಗೆ ಉಡುಗೊರೆಯಾಗಿ ನೀಡಲು ಒಂದು ವಿಭಿನ್ನ ಪ್ಲಾನ್ ಮಾಡಿದ್ದಳು. ಅದುವೇ ಲವ್ ಇನ್ಸೂರೆನ್ಸ್. ಚೀನಾ ಲೈಫ್ ಪ್ರಾಪರ್ಟಿ ಆ್ಯಂಡ್ ಕ್ಯಾಶುಯಲ್ಟಿ ಇನ್ಸೂರೆನ್ಸ್ ಕಂಪನಿಯಿಂದ ಕೇವಲ 199 ಯುವಾನ್ (ಸುಮಾರು 2,300 ರೂಪಾಯಿ) ಪಾವತಿಸಿ ಈ ವಿಮೆಯನ್ನು ಆಕೆ ಖರೀದಿಸಿದ್ದಳು. ಆಗ ಆಕೆಯ ಗೆಳೆಯ ವಾಂಗ್ ಇದು ಯಾವುದೋ ಮೋಸದ ಜಾಲವಿರಬಹುದು ಎಂದು ಸಂಶಯ ವ್ಯಕ್ತಪಡಿಸಿದ್ದ. ಆದರೆ ಇಂದು ಅದೇ ವಿಮೆ ಅವರಿಗೆ ಬರೋಬ್ಬರಿ 1.25 ಲಕ್ಷ ರೂಪಾಯಿ ಹಣವನ್ನು ತಂದುಕೊಟ್ಟಿದೆ.
ವಿಮೆಯ ಷರತ್ತುಗಳೇನು ?
ಸಾಮಾನ್ಯವಾಗಿ ವಿಮೆ ಎಂದರೆ ಅಪಘಾತ ಅಥವಾ ಸಾವು ಸಂಭವಿಸಿದಾಗ ಸಿಗುವ ಪರಿಹಾರ. ಆದರೆ ಈ ಲವ್ ಇನ್ಸೂರೆನ್ಸ್ ನಿಯಮಗಳೇ ಬೇರೆಯಾಗಿದ್ದವು.
-
ಬ್ರೇಕಪ್ ಆದರೆ ಹಣವಿಲ್ಲ: ಪ್ರೀತಿ ಅರ್ಧಕ್ಕೆ ನಿಂತರೆ ಅಥವಾ ಜೋಡಿ ಬೇರ್ಪಟ್ಟರೆ ಕಂಪನಿ ಪೈಸೆ ಹಣವನ್ನೂ ನೀಡುವುದಿಲ್ಲ.
-
ಮೂರು ವರ್ಷಗಳ ಕಾಯುವಿಕೆ: ವಿಮೆ ಖರೀದಿಸಿದ 3 ವರ್ಷಗಳ ನಂತರ ಮತ್ತು 10 ವರ್ಷಗಳ ಒಳಗಾಗಿ ವಿಮೆದಾರರು ಮದುವೆಯಾಗಬೇಕು.
-
ಅದೇ ಸಂಗಾತಿ ಇರಬೇಕು: ವಿಮೆ ಖರೀದಿಸುವಾಗ ಯಾರ ಹೆಸರನ್ನು ಉಲ್ಲೇಖಿಸಲಾಗಿದೆಯೋ, ಅವರನ್ನೇ ವಿವಾಹವಾಗಬೇಕು.
-
ಬಹುಮಾನದ ಆಯ್ಕೆ: ಷರತ್ತಿನಂತೆ ಮದುವೆಯಾದರೆ 10,000 ಗುಲಾಬಿ ಹೂವುಗಳು, ಅರ್ಧ ಕ್ಯಾರೆಟ್ ವಜ್ರದ ಉಂಗುರ ಅಥವಾ ಅದಕ್ಕೆ ಸಮನಾದ ನಗದು ಹಣವನ್ನು ಕಂಪನಿ ನೀಡುತ್ತದೆ.
10 ವರ್ಷಗಳ ಪ್ರೀತಿ, ಸಿಕ್ಕಿತು ಭರ್ಜರಿ ಲಾಭ!
ವೂ ಮತ್ತು ವಾಂಗ್ ಸುಮಾರು 10 ವರ್ಷಗಳ ಕಾಲ ಸುದೀರ್ಘವಾಗಿ ಪ್ರೀತಿಸಿದರು. ಅಕ್ಟೋಬರ್ 2025ರಲ್ಲಿ ಈ ಜೋಡಿ ಅಧಿಕೃತವಾಗಿ ವಿವಾಹ ನೋಂದಣಿ ಮಾಡಿಸಿಕೊಂಡರು. ಮದುವೆಯ ನಂತರ ವೂ ವಿಮಾ ಕಂಪನಿಗೆ ಕ್ಲೈಮ್ ಸಲ್ಲಿಸಿದಾಗ, ಹಳೆಯ ಪಾಲಿಸಿಯ ನಿಯಮದಂತೆ ಕಂಪನಿಯು ಹಣವನ್ನು ಮಂಜೂರು ಮಾಡಿದೆ. 10,000 ಗುಲಾಬಿಗಳನ್ನು ನಿರ್ವಹಿಸುವುದು ಕಷ್ಟ ಎಂದು ಭಾವಿಸಿದ ದಂಪತಿ, ನಗದು ಹಣವನ್ನೇ ಆರಿಸಿಕೊಂಡಿದ್ದಾರೆ.
ಕುತೂಹಲದ ಸಂಗತಿಯೆಂದರೆ, ಇಂತಹ ವಿಚಿತ್ರ ಪಾಲಿಸಿಗಳಿಂದ ನಷ್ಟ ಉಂಟಾಗಬಹುದು ಎಂಬ ಕಾರಣಕ್ಕೆ ಚೀನಾದಲ್ಲಿ 2017ರಲ್ಲೇ ಇಂತಹ ಯೋಜನೆಗಳನ್ನು ಸ್ಥಗಿತಗೊಳಿಸಲಾಗಿತ್ತು. ಆದರೆ, ಈ ಮೊದಲೇ ಪಾಲಿಸಿ ಪಡೆದಿದ್ದ ವೂ ಅವರಂತಹ ಹಳೆಯ ಗ್ರಾಹಕರಿಗೆ ಮಾತ್ರ ಇದು ಅನ್ವಯವಾಗಿದೆ.





