ಢಾಕಾ, ಡಿಸೆಂಬರ್ 24: ಬಾಂಗ್ಲಾದೇಶದ ರಾಜಧಾನಿ ಢಾಕಾ ನಗರದಲ್ಲಿ ಮತ್ತೊಂದು ಭಯಾನಕ ಘಟನೆ ಸಂಭವಿಸಿದೆ. ರಾಜಧಾನಿ ಢಾಕಾದ ಮೋಘಬಜಾರ್ ಪ್ರದೇಶದಲ್ಲಿ ಬುಧವಾರ ಸಂಜೆ ನಡೆದ ಭೀಕರ ಕಚ್ಛಾ ಬಾಂಬ್ ದಾಳಿ ದೇಶವನ್ನು ಮತ್ತೊಮ್ಮೆ ಬೆಚ್ಚಿಬೀಳಿಸಿದೆ. ಅಪರಿಚಿತ ದುಷ್ಕರ್ಮಿಗಳು ಫ್ಲೈಓವರ್ ಮೇಲಿಂದ ಎಸೆದ ಕಚ್ಛಾ ಬಾಂಬ್ ರಸ್ತೆಬದಿಯಲ್ಲಿ ಚಹಾ ಕುಡಿಯುತ್ತಿದ್ದ ಯುವಕನ ತಲೆಗೆ ಬಡಿದು ಸ್ಫೋಟಗೊಂಡ ಪರಿಣಾಮ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಸಂಜೆ ಸುಮಾರು 7 ಗಂಟೆಯ ಸಮಯದಲ್ಲಿ ಈ ದುರ್ಘಟನೆ ಸಂಭವಿಸಿದೆ. ಬಾಂಬ್ ದಾಳಿಗೆ ಬಲಿಯಾದ ಯುವಕನನ್ನು 21 ವರ್ಷದ ಸೈಫುಲ್ ಎಂದು ಗುರುತಿಸಲಾಗಿದೆ. ಸೈಫುಲ್ ರಸ್ತೆಬದಿಯ ಚಹಾ ಅಂಗಡಿಯಲ್ಲಿ ಕುಳಿತಿದ್ದಾಗ ಮೇಲಿಂದ ಏಕಾಏಕಿ ಬಾಂಬ್ ಬಿದ್ದಿದೆ. ತಲೆಗೆ ನೇರವಾಗಿ ಬಡಿದ ಬಾಂಬ್ ಸ್ಫೋಟಗೊಂಡು ಭಾರೀ ಗಾಯಗಳಾಗಿದ್ದು, ವಿಪರೀತ ರಕ್ತಸ್ರಾವದಿಂದ ಸೈಫುಲ್ ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾನೆ.
ಈ ಕುರಿತು ಪ್ರತಿಕ್ರಿಯಿಸಿದ ಢಾಕಾದ ಹಾತಿರ್ಜೀಲ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್, “ಫ್ಲೈಓವರ್ ಮೇಲಿಂದ ಎಸೆದ ಕಚ್ಛಾ ಬಾಂಬ್ ನೇರವಾಗಿ ಯುವಕನ ತಲೆಗೆ ಬಿದ್ದಿದೆ. ಸ್ಫೋಟದ ತೀವ್ರತೆ ಹೆಚ್ಚಾಗಿದ್ದರಿಂದ ಆತನನ್ನು ರಕ್ಷಿಸಲು ಸಾಧ್ಯವಾಗಲಿಲ್ಲ” ಎಂದು ತಿಳಿಸಿದ್ದಾರೆ.
ಘಟನಾ ಸ್ಥಳದ ದೃಶ್ಯಗಳು ಅತೀ ಭಯಾನಕವಾಗಿದ್ದವು ಎಂದು ಪ್ರತ್ಯಕ್ಷದರ್ಶಿಗಳು ವಿವರಿಸಿದ್ದಾರೆ. ಬಾಂಬ್ ನೇರವಾಗಿ ತಲೆಗೆ ಸ್ಫೋಟಗೊಂಡ ಕಾರಣ ಸೈಫುಲ್‌ನ ತಲೆಗೆ ಗಂಭೀರ ಹಾನಿಯಾಗಿದ್ದು, ದೃಶ್ಯವನ್ನು ನೋಡಿದವರು ಬೆಚ್ಚಿಬಿದ್ದಿದ್ದಾರೆ.
ಬಾಂಗ್ಲಾದೇಶದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಅಸ್ಥಿರತೆ, ರಾಜಕೀಯ ಸಂಘರ್ಷ ಮತ್ತು ಕಾನೂನು ಸುವ್ಯವಸ್ಥೆಯ ಕುಸಿತಕ್ಕೆ ಮತ್ತೊಂದು ಸಾಕ್ಷಿಯಾಗಿದೆ. ಕಳೆದ ವರ್ಷ ಪ್ರಧಾನಿ ಶೇಖ್ ಹಸೀನಾ ವಿರುದ್ಧ ನಡೆದ ವಿದ್ಯಾರ್ಥಿ ಪ್ರತಿಭಟನೆಗಳಿಂದ ಆರಂಭವಾದ ಹೋರಾಟ ಕ್ರಮೇಣ ದಂಗೆ, ಹಿಂಸಾಚಾರ ಮತ್ತು ರಕ್ತಪಾತಕ್ಕೆ ತಿರುಗಿತ್ತು. ಪರಿಸ್ಥಿತಿ ನಿಯಂತ್ರಣ ತಪ್ಪಿದ ಪರಿಣಾಮ ಶೇಖ್ ಹಸೀನಾ ದೇಶ ಬಿಟ್ಟು ಭಾರತಕ್ಕೆ ಆಶ್ರಯ ಪಡೆಯಬೇಕಾದ ಸ್ಥಿತಿ ನಿರ್ಮಾಣವಾಯಿತು.
ಅದಾದ ನಂತರ ಅಧಿಕಾರಕ್ಕೆ ಬಂದ ಮಧ್ಯಂತರ ಸರ್ಕಾರವು ಭಾರತ ವಿರೋಧಿ ನಿಲುವುಗಳನ್ನು ಅನುಸರಿಸುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಈ ರಾಜಕೀಯ ಬದಲಾವಣೆಯ ನಡುವೆ ಸಾಮಾನ್ಯ ಜನರ ಜೀವಕ್ಕೆ ಭದ್ರತೆ ಇಲ್ಲದಂತಾಗಿದೆ. ಇತ್ತೀಚೆಗೆ ಭಾರತೀಯರು ಹಾಗೂ ಹಿಂದೂ ಸಮುದಾಯವನ್ನು ಗುರಿಯಾಗಿಸಿಕೊಂಡು ದಾಳಿಗಳು ಹೆಚ್ಚಾಗುತ್ತಿರುವುದು ಗಂಭೀರ ಆತಂಕಕ್ಕೆ ಕಾರಣವಾಗಿದೆ.





