ಢಾಕಾ: ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲಿನ ದೌರ್ಜನ್ಯಗಳು ಹಾಗೂ ಉದ್ದೇಶಿತ ದಾಳಿಗಳು ದಿನದಿಂದ ದಿನಕ್ಕೆ ಭೀಕರ ಸ್ವರೂಪ ಪಡೆದುಕೊಳ್ಳುತ್ತಿವೆ. ಇತ್ತೀಚಿನ ಘೋರ ಘಟನೆಯೊಂದರಲ್ಲಿ, 50 ವರ್ಷದ ಹಿಂದೂ ವ್ಯಕ್ತಿಯೊಬ್ಬರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಹತ್ಯೆ ಮಾಡಿರುವುದು ಜನರಲ್ಲಿ ಬೀತಿ ಹೆಚ್ಚಿಸಿದೆ.
ಮೃತರನ್ನು ಕೊಂಕನ್ ಚಂದ್ರ (50) ಎಂದು ಗುರುತಿಸಲಾಗಿದೆ. ಇವರು ಕೆಔರಾಗಾಂಗ್ ಪ್ರದೇಶದಲ್ಲಿ ಸಣ್ಣದೊಂದು ಮೆಡಿಕಲ್ ಶಾಪ್ ನಡೆಸುತ್ತಿದ್ದರು. ಎಂದಿನಂತೆ ತಮ್ಮ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಹೊಂಚು ಹಾಕಿದ್ದ ದುಷ್ಕರ್ಮಿಗಳ ತಂಡ ಅವರ ಮೇಲೆ ದಾಳಿ ಮಾಡಿದ್ದಾರೆ. ಕೇವಲ ಹಲ್ಲೆ ಮಾಡುವುದಷ್ಟೇ ಅಲ್ಲದೆ, ಅಮಾನವೀಯವಾಗಿ ಚಾಕುವಿನಿಂದ ಹಲವು ಬಾರಿ ಇರಿದಿದ್ದಾರೆ. ಅಷ್ಟಕ್ಕೇ ನಿಲ್ಲದೆ, ಕೊಂಕನ್ ಅವರ ಮೇಲೆ ಪೆಟ್ರೋಲ್ ಸುರಿದು ಸಜೀವ ದಹನ ಮಾಡಲು ಯತ್ನಿಸಿದ್ದಾರೆ.
ಬೆಂಕಿ ಹೊತ್ತಿಕೊಂಡ ತಕ್ಷಣ ಪ್ರಾಣಾಪಾಯದಿಂದ ಪಾರಾಗಲು ಕೊಂಕನ್ ಅವರು ಪಕ್ಕದಲ್ಲಿದ್ದ ಕೆರೆಗೆ ಜಿಗಿದಿದ್ದರು. ಇದರಿಂದ ಬೆಂಕಿ ಆರಿತ್ತಾದರೂ, ಶೇ. 70ಕ್ಕಿಂತ ಹೆಚ್ಚು ಸುಟ್ಟ ಗಾಯಗಳಾಗಿದ್ದವು. ಕೂಡಲೇ ಸ್ಥಳೀಯರು ಅವರನ್ನು ರಕ್ಷಿಸಿ ಢಾಕಾ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಅವರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಕೊಂಕನ್ ಚಂದ್ರ ಅವರ ಪತ್ನಿ ನ್ಯಾಯಕ್ಕಾಗಿ ಮೊರೆ ಹೋಗಿದ್ದಾರೆ. ನನ್ನ ಪತಿ ಅತ್ಯಂತ ಸರಳ ವ್ಯಕ್ತಿಯಾಗಿದ್ದರು, ಅವರು ಯಾರಿಗೂ ಕೆಟ್ಟದ್ದನ್ನು ಮಾಡಿರಲಿಲ್ಲ. ಕೇವಲ ಹಿಂದೂ ಎಂಬ ಕಾರಣಕ್ಕೆ ಅವರನ್ನು ಈ ರೀತಿ ಬರ್ಬರವಾಗಿ ಕೊಲ್ಲಲಾಗಿದೆ. ನಮಗೆ ನ್ಯಾಯ ಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಾಂಗ್ಲಾದೇಶದಲ್ಲಿ ರಾಜಕೀಯ ಅಸ್ಥಿರತೆ ಉಂಟಾದಾಗಿನಿಂದ ಹಿಂದೂ ಸಮುದಾಯವನ್ನು ಗುರಿಯಾಗಿಸಿಕೊಂಡು ನಿರಂತರ ದಾಳಿಗಳು ನಡೆಯುತ್ತಿವೆ. ಕಳೆದ ಕೇವಲ ಎರಡು ವಾರಗಳಲ್ಲಿ ಹಿಂದೂಗಳ ಮೇಲೆ ನಡೆದ ನಾಲ್ಕನೇ ಭೀಕರ ದಾಳಿ ಇದಾಗಿದೆ. ಹಿಂದೂಗಳ ಮನೆಗಳು, ದೇವಸ್ಥಾನಗಳು ಮತ್ತು ವ್ಯಾಪಾರ ಮಳಿಗೆಗಳನ್ನು ಧ್ವಂಸಗೊಳಿಸುತ್ತಿರುವುದು ಅಲ್ಲಿನ ಅಲ್ಪಸಂಖ್ಯಾತರನ್ನು ಭಯಭೀತಗೊಳಿಸಿದೆ.
ಅಂತರಾಷ್ಟ್ರೀಯ ಮಟ್ಟದಲ್ಲಿ ಈ ಘಟನೆಗಳಿಗೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದರೂ, ಸ್ಥಳೀಯ ಮಟ್ಟದಲ್ಲಿ ಅಲ್ಪಸಂಖ್ಯಾತರಿಗೆ ರಕ್ಷಣೆ ನೀಡುವಲ್ಲಿ ಅಲ್ಲಿನ ಸರ್ಕಾರ ವಿಫಲವಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಅಮಾಯಕ ಕೊಂಕನ್ ಚಂದ್ರ ಅವರ ಸಾವು ಬಾಂಗ್ಲಾದೇಶದ ಸದ್ಯದ ಭೀಕರ ಪರಿಸ್ಥಿತಿಗೆ ಹಿಡಿದ ಕನ್ನಡಿಯಂತಿದೆ.





