ಢಾಕಾ, ಬಾಂಗ್ಲಾದೇಶ: ಬಾಂಗ್ಲಾದೇಶದ ರಾಜಧಾನಿ ಢಾಕಾ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ 5.7 ರಿಕ್ಟರ್ ಮಾಪಕದ ಭೂಕಂಪ ಸಂಭವಿಸಿದೆ. ವರದಿಗಳ ಪ್ರಕಾರ, ಈ ಭೂಕಂಪದಲ್ಲಿ ಕನಿಷ್ಠ 10 ಮಂದಿ ಜೀವ ಕಳೆದುಕೊಂಡಿದ್ದು, ನೂರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಅನೇಕ ಕಟ್ಟಡಗಳಿಗೆ ಗಂಭೀರ ಹಾನಿಯುಂಟಾಗಿದೆ.
ಭೂಕಂಪವು ಢಾಕಾದ ಅಗರ್ಗಾಂವ್‌ನಿಂದ ಕೇವಲವ13 ಕಿಲೋಮೀಟರ್ ಇರುವ ನರಸಿಂಗ್ಡಿ ಜಿಲ್ಲೆಯಲ್ಲಿದ್ದು, ಭೂಮಿಯ ಕೇವಲ 10 ಕಿಲೋಮೀಟರ್ ಆಳದಲ್ಲೇ ಈ ಕಂಪನ ಉಂಟಾಗಿದೆ. ಬಾಂಗ್ಲಾದೇಶ ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ರಾಜಧಾನಿ ಢಾಕಾದಲ್ಲೇ ನಾಲ್ವರು ಮೃತಪಟ್ಟಿದ್ದು, ಹೆಚ್ಚಿನ ಹಾನಿ ನರಸಿಂಗ್ಡಿ ಪ್ರದೇಶದಲ್ಲಿ ಸಂಭವಿಸಿದೆ. ನರಸಿಂಗ್ಡಿಯಲ್ಲಿ ಐದು ಮಂದಿ ಸಾವನ್ನಪ್ಪಿದ್ದು, ಅನೇಕ ಪ್ರದೇಶಗಳಲ್ಲಿ ಕಟ್ಟಡ ಕುಸಿತ, ಗೋಡೆ ಬಿರುಕು, ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ಗಳಿಂದ ಬೆಂಕಿ ಕಾಣಿಸಿಕೊಂಡಿದೆ. ಉಪನಗರ ಬಂದರು ಪಟ್ಟಣ ನಾರಾಯಣಗಂಜಲ್ಲೂ ಒಬ್ಬರು ಮೃತಪಟ್ಟಿರುವ ಮಾಹಿತಿ ಲಭ್ಯವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೆಚ್ಚಿನ ಸಂಖ್ಯೆಯಲ್ಲಿ ಗಾಯಗೊಂಡವರ ಸಂಖ್ಯೆ ಕೈಗಾರಿಕಾ ಪ್ರದೇಶಗಳಲ್ಲಿ ಕಂಡುಬರುತ್ತಿದೆ. ಢಾಕಾ ಹೊರವಲಯ ಗಾಜಿಪುರದ ಕೈಗಾರಿಕಾ ಪಟ್ಟಣದಲ್ಲಿ ಭೂಕಂಪ ಸಂಭವಿಸಿದ ಕ್ಷಣದಲ್ಲೇ ನೂರಾರು ಕಾರ್ಮಿಕರು ಭಯಭೀತರಾಗಿ ಕಟ್ಟಡಗಳಿಂದ ಹೊರಬರಲು ಓಡಿದರು. ಈ ಓಟಾಟದ ವೇಳೆ ಅನೇಕರು ಮೆಟ್ಟಿಲಿನಲ್ಲಿ ಜಾರಿ ಬಿದ್ದು ಗಾಯಗೊಂಡಿದ್ದಾರೆ. ವಿವಿಧ ಕಾರ್ಖಾನೆಗಳಲ್ಲಿ ಕನಿಷ್ಠ 100 ಕಾರ್ಮಿಕರು ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ.
ಕೈಗಾರಿಕಾ ವಲಯಗಳಿಗೆ ಗಂಭೀರ ಹಾನಿಯಾಗಿದೆ ಎಂದೂ ಪ್ರಾಥಮಿಕ ವರದಿಗಳು ತಿಳಿಸಿವೆ. ಕೆಲವು ಉತ್ಪಾದನಾ ಘಟಕಗಳಲ್ಲಿ ಯಂತ್ರೋಪಕರಣಗಳು ಹಾನಿಗೊಳಗಾಗಿದ್ದು, ಹಲವೆಡೆ ತಾತ್ಕಾಲಿಕವಾಗಿ ಉತ್ಪಾದನಾ ಕೆಲಸ ನಿಲ್ಲಿಸಲಾಗಿದೆ.
ಭೂಕಂಪನದ ಸಮಯದಲ್ಲಿ. ಜನರು ಮನೆಗಳು, ಕಛೇರಿಗಳು, ಮಾರುಕಟ್ಟೆಗಳು ಮತ್ತು ಅಪಾರ್ಟ್ಮೆಂಟ್‌ಗಳಿಂದ ಹೊರಬರುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬಹುಮಹಡಿ ಕಟ್ಟಡಗಳಲ್ಲಿ ನಡುಕು ತೀವ್ರವಾಗಿ ಅನುಭವವಾಗಿದ್ದರಿಂದ ಜನರು ಬೇಗನೆ ಕಟ್ಟಡದಿಂದ ಹೊರಬರಲು ಯತ್ನಿಸಿದರು. ಇದರಿಂದಲೇ ಗಾಯಗೊಂಡವರ ಸಂಖ್ಯೆ ಏರಿಕೆಯಾಗಿದೆ.
ಅನೇಕ ಕಟ್ಟಡಗಳಲ್ಲಿ ವಿದ್ಯುತ್ ತಂತಿಗಳು ಕಳಚಿ ಬೆಂಕಿ ಕಾಣಿಸಿಕೊಂಡಿವೆ. ಅಗ್ನಿಶಾಮಕ ಸಿಬ್ಬಂದಿ ಹಲವು ಸ್ಥಳಗಳಲ್ಲಿ ತುರ್ತು ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಲು ಶ್ರಮಿಸಿದರು. ದಟ್ಟ ಹೊಗೆ ಪ್ರದೇಶವನ್ನು ಆವರಿಸಿದ್ದರಿಂದ ನಿವಾಸಿಗಳು ಮತ್ತಷ್ಟು ಭೀತಿಗೊಳಗಾದರು.
ಈ ದುರಂತದ ನಂತರ, ಸರ್ಕಾರ ತುರ್ತು ರಕ್ಷಣಾ ತಂಡಗಳನ್ನು ನಿಯೋಜಿಸಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಕಟ್ಟಡಗಳ ಪರಿಶೀಲನೆ ನಡೆಸುವುದು, ಅಪಾಯದ ಪ್ರದೇಶಗಳನ್ನು ಖಾಲಿ ಮಾಡಿಸುವ ಕಾರ್ಯಾಚರಣೆ ಮುಂದುವರೆದಿದೆ. ನರಸಿಂಗಿ ಮತ್ತು ಗಾಜಿಪುರದಲ್ಲಿ SDRF ಮತ್ತು ಸ್ಥಳೀಯ ಪೊಲೀಸರು ಶೋಧ, ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.





