ಕಾಬೂಲ್: ಭಾನುವಾರ ತಡರಾತ್ರಿ ಸೋಮವಾರ ಬೆಳಗ್ಗೆಯ ಜಾವದಲ್ಲಿ ಉತ್ತರ ಅಫ್ಘಾನಿಸ್ತಾನವನ್ನು 6.3 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ಇದರ ಪರಿಣಾಮ ಕೆಲ ಮನೆಗಳು ಧ್ವಂಸವಾಗಿವೆ. ಯುನೈಟೆಡ್ ಸ್ಟೇಟ್ಸ್ ಭೂವೈಜ್ಞಾನಿಕ ಸಮೀಕ್ಷೆ (ಯುಎಸ್‌ಜಿಎಸ್) ಈ ಘಟನೆಯನ್ನು ದೃಢಪಡಿಸಿದ್ದು, ಭೂಕಂಪದ ಕೇಂದ್ರಬಿಂದು ಮಜಾರ್-ಇ-ಶರೀಫ್ ನಗರದ ಬಳಿಯ ಖೋಲ್ಡ್ ಪ್ರದೇಶದಲ್ಲಿ ಕಂಡುಬಂದಿದೆ.
ಭೂಮಿಯ ಒಳಗೆ ಸುಮಾರು 28 ಕಿಲೋಮೀಟರ್ ಆಳದಲ್ಲಿ ಈ ಕಂಪನ ಉಂಟಾಗಿದ್ದು, ರಾಜಧಾನಿ ಕಾಬೂಲ್‌ನಲ್ಲಿ ಸಹ ತೀವ್ರ ಕಂಪನ ಅನುಭವಕ್ಕೆ ಬಂದಿದೆ. ಆರಂಭಿಕ ವರದಿಗಳ ಪ್ರಕಾರ, ಭೂಕಂಪದ ಆಳವನ್ನು 10 ಕಿಲೋಮೀಟರ್ ಎಂದು ದಾಖಲಿಸಲಾಗಿತ್ತು, ಆದರೆ ನಂತರದ ನವೀಕರಣದಲ್ಲಿ ಇದನ್ನು 28 ಕಿಲೋಮೀಟರ್‌ಗೆ ಸರಿಪಡಿಸಲಾಗಿದೆ.
ಕೇವಲ ಎರಡು ತಿಂಗಳ ಹಿಂದೆ, ಆಗಸ್ಟ್ ೩೧ರಂದು ಪೂರ್ವ ಅಫ್ಘಾನಿಸ್ತಾನದಲ್ಲಿ ಸಂಭವಿಸಿದ 6.0 ತೀವ್ರತೆಯ ಭೂಕಂಪದಲ್ಲಿ 2,200ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು. ಈಗ ಮತ್ತೊಂದು ಪ್ರಬಲ ಕಂಪನ ಸಂಭವಿಸಿರುವುದು ಜನರಲ್ಲಿ ಭಯದ ವಾತಾವರಣವನ್ನು ಸೃಷ್ಟಿಸಿದೆ. ಭೂಕಂಪದ ಕೇಂದ್ರಬಿಂದುವಾದ ಖೋಲ್ಡ್ ಪ್ರದೇಶವು ಮಜಾರ್-ಇ-ಶರೀಫ್‌ನಿಂದ ಸ್ವಲ್ಪ ದೂರದಲ್ಲಿದ್ದು, ಈ ನಗರದ ನಿವಾಸಿಗಳು ತೀವ್ರ ನಡುಕವನ್ನು ಅನುಭವಿಸಿದ್ದಾರೆ.





