ನವದೆಹಲಿ, ಮಾರ್ಚ್ 12: ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಅಶಾಂತಿ ಹೆಚ್ಚುತ್ತಿರುವ ಸಮಯದಲ್ಲಿ ಭಾರತಕ್ಕೆ ರಾಜತಾಂತ್ರಿಕ ಯಶಸ್ಸು ಸಿಕ್ಕಿದೆ. ವಿದೇಶಾಂಗ ಸಚಿವ ಎಸ್. ಜೈಶಂಕರ್ ಹಾಗೂ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಗ್ನಿ ನಡುವೆ ನಡೆದ ಮಾತುಕತೆ ಫಲವಾಗಿ, ಭಾರತದ ಧ್ವಜ ಹೊತ್ತ ಟ್ಯಾಂಕರ್ ಹಡಗುಗಳಿಗೆ ಹಾರ್ಮುಜ್ ಜಲಸಂಧಿಯ ಮೂಲಕ ಸಂಚರಿಸಲು ಇರಾನ್ ಅನುಮತಿ ನೀಡಿದೆ. ಈ ಬೆಳವಣಿಗೆ ಜಾಗತಿಕ ತೈಲ ಪೂರೈಕೆಯ ಮೇಲೆ ಉಂಟಾಗಿದ್ದ ಅನಿಶ್ಚಿತತೆಯ ನಡುವೆಯೇ ಭಾರತಕ್ಕೆ ದೊಡ್ಡ ನಿರಾಳತೆಯನ್ನು ತಂದಿದೆ.
ವಿದೇಶಾಂಗ ಸಚಿವಾಲಯದ ಮೂಲಗಳ ಪ್ರಕಾರ, ಕಳೆದ ಕೆಲವು ದಿನಗಳಿಂದ ನಡೆಯುತ್ತಿದ್ದ ರಾಜತಾಂತ್ರಿಕ ಮಟ್ಟದ ಚರ್ಚೆಗಳು ಈಗ ಫಲ ನೀಡಿವೆ. ಈ ಮಾತುಕತೆಯ ನಂತರ ಇರಾನ್ ಸರ್ಕಾರ ಭಾರತೀಯ ಧ್ವಜ ಹೊಂದಿರುವ ಹಡಗುಗಳಿಗೆ ಮಾತ್ರ ಹಾರ್ಮುಜ್ ಜಲಸಂಧಿಯನ್ನು ದಾಟಲು ವಿಶೇಷ ಅನುಮತಿ ನೀಡಿದೆ. ಈಗಾಗಲೇ ಭಾರತೀಯ ಟ್ಯಾಂಕರ್‌ಗಳಾದ ಪುಷ್ಪಕ್ ಮತ್ತು ಪರಿಮಲ್ ಈ ಜಲಮಾರ್ಗವನ್ನು ಸುರಕ್ಷಿತವಾಗಿ ದಾಟಿ ಮುಂದಿನ ಸ್ಥಾನಗಳತ್ತ ಸಾಗುತ್ತಿರುವುದಾಗಿ ವರದಿಯಾಗಿದೆ.
ಆದರೆ ಈ ಅನುಮತಿ ಭಾರತಕ್ಕೆ ಮಾತ್ರ ಸೀಮಿತವಾಗಿದ್ದು, ಅಮೆರಿಕ, ಯುರೋಪ್ ಹಾಗೂ ಇಸ್ರೇಲ್ ದೇಶಗಳ ಹಡಗುಗಳು ಇನ್ನೂ ನಿರ್ಬಂಧಗಳನ್ನು ಎದುರಿಸುತ್ತಿವೆ. ಇತ್ತೀಚೆಗೆ ಅಮೆರಿಕ ಮತ್ತು ಇಸ್ರೇಲ್ ನಡೆಸಿದ ದಾಳಿಗಳ ನಂತರ ಇರಾನ್ ಹಲವು ಸಮುದ್ರ ಮಾರ್ಗಗಳಲ್ಲಿ ಕಠಿಣ ನಿಯಂತ್ರಣಗಳನ್ನು ವಿಧಿಸಿತ್ತು. ಇದರ ಪರಿಣಾಮವಾಗಿ ಜಾಗತಿಕ ಮಟ್ಟದಲ್ಲಿ ಸಮುದ್ರ ಸಾರಿಗೆ ಬಹುತೇಕ ಸ್ಥಗಿತಗೊಂಡಿತ್ತು.
ಇದಕ್ಕೂ ಮುನ್ನ ಎರಡು ದಿನಗಳ ಹಿಂದೆ ಭಾರತೀಯನೊಬ್ಬನ ನಾಯಕತ್ವದಲ್ಲಿ ಸಾಗುತ್ತಿದ್ದ ಲೈಬೀರಿಯನ್ ಧ್ವಜ ಹೊಂದಿರುವ ಟ್ಯಾಂಕರ್ ಹಾರ್ಮುಜ್ ಜಲಸಂಧಿಯನ್ನು ಸುರಕ್ಷಿತವಾಗಿ ದಾಟಿ ಮುಂಬೈ ಬಂದರಿಗೆ ತಲುಪಿದೆ. ಈ ಹಡಗು ಸೌದಿ ಅರೇಬಿಯಾದಿಂದ ಕಚ್ಚಾ ತೈಲವನ್ನು ಹೊತ್ತುಕೊಂಡು ಭಾರತಕ್ಕೆ ಬರುತ್ತಿತ್ತು. ಅಮೆರಿಕ ಹಾಗೂ ಇಸ್ರೇಲ್ ಇರಾನ್ ಮೇಲೆ ದಾಳಿ ನಡೆಸಿದ ನಂತರ ಸಮುದ್ರ ಸಂಚಾರ ಕುಂಠಿತಗೊಂಡಿತ್ತು. ಆ ಪರಿಸ್ಥಿತಿಯಲ್ಲಿ ಭಾರತ ತಲುಪಿದ ಮೊದಲ ಹಡಗು ಇದಾಗಿದೆ.
ಇರಾನ್ ವಿರುದ್ಧ ಅಮೆರಿಕ ಮತ್ತು ಇಸ್ರೇಲ್ ನಡೆಸುತ್ತಿರುವ ಯುದ್ಧ ಈಗಾಗಲೇ 12ನೇ ದಿನಕ್ಕೆ ಕಾಲಿಟ್ಟಿದೆ. ಈ ಸಂಘರ್ಷ ಇನ್ನೂ ಅಂತ್ಯವಾಗುವ ಲಕ್ಷಣಗಳು ಕಾಣಿಸುತ್ತಿಲ್ಲ. ಯುದ್ಧದ ಪರಿಣಾಮವಾಗಿ ಪರ್ಷಿಯನ್ ಕೊಲ್ಲಿಯ ಸಮುದ್ರ ಮಾರ್ಗಗಳಲ್ಲಿ ಅನಿಶ್ಚಿತತೆ ಹೆಚ್ಚಿದ್ದು, ಹಲವು ದೇಶಗಳ ಹಡಗುಗಳು ಸಂಚಾರವನ್ನು ಸ್ಥಗಿತಗೊಳಿಸಿದ್ದವು. ಇದರ ಪರಿಣಾಮವಾಗಿ ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಪೂರೈಕೆ ಕುಂಠಿತಗೊಂಡು ಬೆಲೆಗಳು ಗಗನಕ್ಕೇರಿವೆ.
ಭಾರತವು ತನ್ನ ಇಂಧನ ಅಗತ್ಯಗಳ ಬಹುಪಾಲನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತದೆ. ಮಧ್ಯಪ್ರಾಚ್ಯ ದೇಶಗಳು ಭಾರತಕ್ಕೆ ಪ್ರಮುಖ ತೈಲ ಪೂರೈಕೆದಾರರಾಗಿವೆ. ಆದ್ದರಿಂದ ಹಾರ್ಮುಜ್ ಜಲಸಂಧಿಯಲ್ಲಿ ಉಂಟಾಗುವ ಯಾವುದೇ ಸಮಸ್ಯೆ ಭಾರತದ ಇಂಧನ ಭದ್ರತೆಗೆ ದೊಡ್ಡ ಸವಾಲಾಗಬಹುದು. ಈ ಹಿನ್ನೆಲೆ ಜೈಶಂಕರ್ ನಡೆಸಿದ ರಾಜತಾಂತ್ರಿಕ ಮಾತುಕತೆ ಭಾರತಕ್ಕೆ ಮಹತ್ವದ ಲಾಭ ತಂದಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.





