ಬೆಂಗಳೂರು, ನವೆಂಬರ್ 18: ಕೇರಳದ ಶಬರಿಮಲೆ ದೇವಸ್ಥಾನವನ್ನು ಭಕ್ತರ ದರ್ಶನಕ್ಕೆ ತೆರೆಯಿರುವ ಸಂದರ್ಭದಲ್ಲಿ, ರಾಜ್ಯದ ಆರೋಗ್ಯ ಇಲಾಖೆಯು ‘ನೇಗ್ಲೇರಿಯಾ ಫೌಲೇರಿ’ (Naegleria fowleri) ಎಂಬ ಮಿದುಳು ತಿನ್ನುವ ಅಮೀಬಾದ ಸೋಂಕು ಕುರಿತು ಗಂಭೀರ ಎಚ್ಚರಿಕೆ ಹಾಗೂ ಮಾರ್ಗಸೂಚಿಗಳನ್ನು ಹೊರಡಿಸಿದೆ.
ಕೇರಳದಲ್ಲಿ ಅತ್ಯಂತ ಮಾರಕ ಸೋಂಕು ಪ್ರಕರಣಗಳು ವರದಿಯಾಗಿವೆ. ಇದರಿಂದ ಆತಂಕಗೊಂಡ ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಶಬರಿಮಲೆ ಯಾತ್ರಿಗಳಿಗಾಗಿ ವಿಶೇಷ ಮಾರ್ಗಸೂಚಿ ಬಿಡುಗಡೆ ಮಾಡಿದೆ.
ನೇಗ್ಲೇರಿಯಾ ಫೌಲೇರಿ ಎಂದರೇನು?
ನೇಗ್ಲೇರಿಯಾ ಫೌಲೇರಿ ಒಂದು ಸ್ವತಂತ್ರ ಬದುಕುವ (free-living) ಅಮೀಬಾ. ಇದು ಬೆಚ್ಚಗಿನ ಸಿಹಿ ನೀರು ಮತ್ತು ಮಣ್ಣಿನಲ್ಲಿ ವಾಸಿಸುತ್ತದೆ. ಕೊಳವೆ ನೀರು, ಕೆರೆ, ಸರೋವರ, ನಿಂತ ನೀರು, ಈಜುಕೊಳಗಳು ಇವೆಲ್ಲವೂ ಇದರ ನೆಚ್ಚಿನ ಆವಾಸಸ್ಥಾನಗಳು.
ಈ ಸೋಂಕು ವ್ಯಕ್ತಿಯಿಂದ ವ್ಯಕ್ತಿಗೆ ಹರಡುವುದಿಲ್ಲ. ಕಲುಷಿತ ನೀರು ಕುಡಿದರೂ ಸೋಂಕು ಬರುವುದಿಲ್ಲ. ಆದರೆ ನೀರಿನಲ್ಲಿ ಈಜುವಾಗ ಅಥವಾ ಮುಳುಗುವಾಗ ಮೂಗಿನ ಮೂಲಕ ಒಳಗೆ ಹೋದರೆ ಮಾತ್ರ ಈ ಅಮೀಬಾ ಮೆದುಳಿನತ್ತ ಪಯಣ ಬೆಳೆಸುತ್ತದೆ. ಇದು ಮೆದುಳಿನ ರಕ್ತನಾಳಗಳ ಮೂಲಕ ಪ್ರಯಾಣಿಸಿ ಪ್ರಾಥಮಿಕ ಅಮೀಬಿಕ್ ಮೆನಿಂಗೊಎನ್ಸೆಫಲೈಟಿಸ್ (PAM) ಎಂಬ ಮಾರಣಾಂತಿಕ ಖಾಯಿಲೆ ಉಂಟುಮಾಡುತ್ತದೆ. ಸೋಂಕು ದೃಢಪಟ್ಟ ನಂತರ ಬದುಕುವ ಪ್ರಮಾಣ ಶೇ. 1-2 ಮಾತ್ರ!.
ಯಾತ್ರೆಯ ಸಂದರ್ಭದಲ್ಲಿ ಮಾಡಬೇಕಾದ ಮುನ್ನೆಚ್ಚರಿಕೆಗಳು
ಆರೋಗ್ಯ ಇಲಾಖೆ ನೀಡಿರುವ ಪ್ರಮುಖ ಸಲಹೆಗಳು ಇಲ್ಲಿವೆ.
- ಪಂಪಾ ನದಿ, ಕೆರೆ, ನಿಂತ ನೀರಿನ ಕೊಳಗಳಲ್ಲಿ ಸ್ನಾನ ಮಾಡುವಾಗ ಮೂಗಿಗೆ ನೀರು ಹೋಗದಂತೆ ಎಚ್ಚರ ವಹಿಸಿ.
- ಮೂಗಿನ ಕ್ಲಿಪ್ (nose clip) ಬಳಸಿ ಅಥವಾ ಬೆರಳಿನಿಂದ ಮೂಗನ್ನು ಬಿಗಿಯಾಗಿ ಮುಚ್ಚಿಕೊಂಡು ಮುಳುಗಿ.
- ಶುದ್ಧವಾದ, ಹರಿವಿನ ನೀರಿನಲ್ಲಿ ಮಾತ್ರ ಸ್ನಾನ ಮಾಡಿ.
- ನಿಂತ ನೀರು ಅಥವಾ ಬೆಚ್ಚಗಿನ ಕೊಳಗಳಲ್ಲಿ ತಲೆ ಮುಳುಗಿಸಿ ಈಜಾಡಬೇಡಿ.
- ಮಕ್ಕಳು ಆಟವಾಡುವಾಗ ಇನ್ನಷ್ಟು ಎಚ್ಚರಿಕೆ ವಹಿಸಿ.
ಲಕ್ಷಣಗಳು ಕಂಡರೆ ತಕ್ಷಣ ಏನು ಮಾಡಬೇಕು?
ನೀರಿನ ಸಂಪರ್ಕದ 1-9 ದಿನಗಳ ಒಳಗೆ (ಸಾಮಾನ್ಯವಾಗಿ 5 ದಿನಗಳಲ್ಲಿ) ಈ ಕೆಳಗಿನ ಲಕ್ಷಣಗಳು ಕಾಣಿಸಿಕೊಟ್ಟರೆ ತಕ್ಷಣ ಆಸ್ಪತ್ರೆಗೆ ದೌಡಾಯಿಸಿ.
- ತೀವ್ರ ಜ್ವರ
- ತಲೆ ಸೀಳುವಂತೆ ನೋವು
- ವಾಕರಿಕೆ, ವಾಂತಿ
- ಕುತ್ತಿಗೆ ಬಿಗಿತ
- ಗೊಂದಲ, ಪ್ರಜ್ಞಾಹೀನತೆ
- ವರ್ತನೆಯಲ್ಲಿ ತೀವ್ರ ಬದಲಾವಣೆ
- ದೃಷ್ಟಿ ಮಂದ, ಸೆಳೆತ
ಈ ಲಕ್ಷಣಗಳು ಕಂಡರೆ ತಡಮಾಡದೆ ಹತ್ತಿರದ ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಗೆ ತೆರಳಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಿ. ಆರಂಭಿಕ ಹಂತದಲ್ಲೇ ಚಿಕಿತ್ಸೆ ಪಡೆದರೆ ಬದುಕುವ ಸಾಧ್ಯತೆ ಹೆಚ್ಚು.
ಕರ್ನಾಟಕದಲ್ಲಿ ಸ್ಥಿತಿ
ಇದುವರೆಗೆ ಕರ್ನಾಟಕದಲ್ಲಿ ನೇಗ್ಲೇರಿಯಾ ಫೌಲೇರಿ ಸೋಂಕಿನ ಯಾವುದೇ ಪ್ರಕರಣ ವರದಿಯಾಗಿಲ್ಲ. ಆದರೂ ಶಬರಿಮಲೆಗೆ ತೆರಳಿ ಮರಳುವ ಭಕ್ತರ ಸಂಖ್ಯೆ ದೊಡ್ಡದಿದ್ದರಿಂದ ಆರೋಗ್ಯ ಇಲಾಖೆ ಸಂಪೂರ್ಣ ಅಲರ್ಟ್ ಆಗಿದೆ. ಎಲ್ಲಾ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸೂಕ್ತ ಸಿದ್ಧತೆ ಕೈಗೊಳ್ಳಲು ಸೂಚನೆ ನೀಡಲಾಗಿದೆ.





