ಬಿಗ್ ಬಾಸ್ ಕನ್ನಡ ಸೀಸನ್ 12ರ ಗ್ರ್ಯಾಂಡ್ ಫಿನಾಲೆ ಅದ್ಧೂರಿಯಾಗಿ ನೆರವೇರಿದ್ದು, ಕರುನಾಡಿನ ಮನೆ ಮಗ ಎಂದೇ ಜನಪ್ರಿಯರಾಗಿದ್ದ ಗಿಲ್ಲಿ ನಟ ಈ ಸೀಸನ್‌ನ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ಆರಂಭದಿಂದಲೇ ವೀಕ್ಷಕರ ಫೇವರಿಟ್ ಆಗಿದ್ದ ಗಿಲ್ಲಿ, ಕೊನೆಗೂ ಫ್ಯಾನ್ಸ್ ಅಂದುಕೊಂಡಂತೆ ಟ್ರೋಫಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಮಾತಿನ ಮಲ್ಲ, ಡೈಲಾಗ್ ಕಿಂಗ್, ಆಲ್‌ರೌಂಡರ್ ಸ್ಪರ್ಧಿ ಎಂದು ಹೆಸರು ಗಳಿಸಿದ್ದ ಗಿಲ್ಲಿ ನಟನ ಗೆಲುವು ಬಿಗ್ ಬಾಸ್ ಇತಿಹಾಸದಲ್ಲೇ ವಿಶೇಷ ಸ್ಥಾನ ಪಡೆದುಕೊಂಡಿದೆ.
ಈ ಸೀಸನ್‌ನ ಫಿನಾಲೆಗೆ ಗಿಲ್ಲಿ ನಟ ಜೊತೆಗೆ ಅಶ್ವಿನಿ ಗೌಡ, ರಕ್ಷಿತಾ ಶೆಟ್ಟಿ, ಮ್ಯೂಟೆಂಟ್ ರಘು, ಕಾವ್ಯ ಶೈವ ಹಾಗೂ ಧನುಷ್ ಗೌಡ ತಲುಪಿದ್ದರು. ಎಲ್ಲರೂ ಬಲಿಷ್ಠ ಸ್ಪರ್ಧಿಗಳಾಗಿದ್ದರೂ, ಆರಂಭದಿಂದಲೇ ಗಿಲ್ಲಿಯ ಮೇಲಿದ್ದ ಜನರ ಪ್ರೀತಿ ಹಾಗೂ ಕ್ರೇಜ್ ಫಿನಾಲೆ ಹಂತಕ್ಕೆ ಬರುತ್ತಿದ್ದಂತೆ ಮತ್ತಷ್ಟು ಹೆಚ್ಚಾಗಿತ್ತು. ಸೋಷಿಯಲ್ ಮೀಡಿಯಾದಲ್ಲೂ “ಗಿಲ್ಲಿಯೇ ವಿನ್ನರ್” ಎನ್ನುವ ಕಮೆಂಟ್‌ಗಳು ತುಂಬಿಕೊಂಡಿದ್ದವು.
ಗ್ರ್ಯಾಂಡ್ ಫಿನಾಲೆಯ ವೇದಿಕೆಯಲ್ಲಿ ಕಿಚ್ಚ ಸುದೀಪ್ ಅವರು ವೋಟಿಂಗ್ ಅಂಕಿ ಅಂಶವನ್ನು ಬಹಿರಂಗಪಡಿಸಿದಾಗ ಎಲ್ಲರೂ ಅಚ್ಚರಿ ಪಡುವಂತಾಯಿತು. ಗಿಲ್ಲಿ ನಟನಿಗೆ ಬರೋಬ್ಬರಿ 37 ಕೋಟಿಗೂ ಅಧಿಕ ಮತಗಳು ಲಭಿಸಿದ್ದವು. ವಿನ್ನರ್ ಮತ್ತು ರನ್ನರ್‌ಅಪ್ ನಡುವಿನ ಅಂತರ ಕಡಿಮೆ ಇದ್ದರೂ, ಮತಗಳ ಸಂಖ್ಯೆಯಲ್ಲಿ ಈ ಸೀಸನ್ ಹೊಸ ದಾಖಲೆ ಬರೆದಿದೆ ಎಂದು ಸುದೀಪ್ ತಿಳಿಸಿದ್ದಾರೆ. ಕಳೆದ ಸೀಸನ್‌ನಲ್ಲಿ ವಿನ್ನರ್ ಆಗಿದ್ದ ಹನುಮಂತ ಅವರಿಗೆ ಸುಮಾರು 5 ಕೋಟಿಗೂ ಹೆಚ್ಚು ಮತಗಳು ಸಿಕ್ಕಿದ್ದರೆ, ಈ ಬಾರಿ ಆ ದಾಖಲೆಯನ್ನು ಗಿಲ್ಲಿ ಬಹಳ ದೊಡ್ಡ ಮಟ್ಟದಲ್ಲಿ ಮುರಿದಿದ್ದಾರೆ.
ಗಿಲ್ಲಿ ನಟ ಬಿಗ್ ಬಾಸ್ ಮನೆಯೊಳಗೆ ಕಾಲಿಟ್ಟ ಕ್ಷಣದಿಂದಲೇ ತಮ್ಮ ವಿಭಿನ್ನ ಆಟದಿಂದ ಎಲ್ಲರ ಗಮನ ಸೆಳೆದರು. ಜಂಟಿಯಾಗಿ ಎಂಟ್ರಿ ಕೊಟ್ಟ ಕಾವ್ಯ ಶೈವ ಅವರ ಪೇರ್ ಆಗಿದ್ದರೂ, ಆಟದ ವಿಚಾರದಲ್ಲಿ ಗಿಲ್ಲಿ ಎಂದಿಗೂ ತಮ್ಮ ಅಸ್ತಿತ್ವವನ್ನು ಕಳೆದುಕೊಳ್ಳಲಿಲ್ಲ. ಕಾವ್ಯ ಅವರನ್ನು ಯಾವ ಸಂದರ್ಭದಲ್ಲೂ ತಗ್ಗಿಸಿ ಮಾತನಾಡದೇ, ಬೆಂಬಲ ನೀಡಿದ ರೀತಿ ಕೂಡ ವೀಕ್ಷಕರಿಗೆ ಇಷ್ಟವಾಯಿತು.
ಡೈಲಾಗ್‌ಗಳಲ್ಲಿ ಪಂಚಿಂಗ್, ಟೈಮಿಂಗ್‌ನಲ್ಲಿ ಪರ್ಫೆಕ್ಷನ್ ಇವೇ ಗಿಲ್ಲಿಯ ದೊಡ್ಡ ಶಕ್ತಿಯಾಗಿದ್ದವು. ‘ಡಮಾಲ್ ಡಿಮಿಲ್ ಡಕ್ಕ, ಗಿಲ್ಲಿ ಗೆಲ್ಲೋದು ಪಕ್ಕಾ!’ ಎಂಬ ಡೈಲಾಗ್ ಮನೆಮಾತಾಗಿ ಬಿಟ್ಟಿತ್ತು. ಇನ್ನು ‘ದೊಡ್ಡವ್ವ…’ ಡೈಲಾಗ್ ಸಾಂಗ್ ಆಗಿ ರೀಲ್ಸ್‌ಗಳ ಮೂಲಕ ವೈರಲ್ ಆಯಿತು. ಅಭಿಮಾನಿಗಳು ಸ್ವತಃ ಹಾಡುಗಳನ್ನು ಮಾಡಿ, ಬ್ಯಾನರ್‌ಗಳನ್ನು ಹಾಕಿ ಗಿಲ್ಲಿಗಾಗಿ ಭರ್ಜರಿ ಪ್ರಚಾರ ನಡೆಸಿದರು.
ಇನ್ನೊಂದು ದೊಡ್ಡ ಸಾಧನೆ ಎಂದರೆ, ಬಿಗ್ ಬಾಸ್ ಮನೆಯೊಳಗಿರುವಾಗಲೇ ಇನ್‌ಸ್ಟಾಗ್ರಾಂನಲ್ಲಿ 1 ಮಿಲಿಯನ್ ಫಾಲೋವರ್ಸ್ ಪಡೆದ ಮೊದಲ ಸ್ಪರ್ಧಿ ಎಂಬ ದಾಖಲೆ ಗಿಲ್ಲಿ ನಟನ ಪಾಲಾಗಿದೆ. ಇ
ಹಾಸ್ಯ, ಸಮಯಪ್ರಜ್ಞೆ, ಚುಟುಕು ಮಾತುಗಳ ಮೂಲಕ ಗಿಲ್ಲಿ ಹಲವು ಬಾರಿ ಕಹಿಸತ್ಯವನ್ನು ನಗುವಿನ ಮೂಲಕ ಹೊರಹಾಕಿದರು. ಮನೆಯೊಳಗಿನ ಮುಖವಾಡಗಳನ್ನು ತೆಗೆಯುವ ಅವರ ಶೈಲಿ ವೀಕ್ಷಕರಿಗೆ ಬಹಳ ಮೆಚ್ಚುಗೆಯಾಯಿತು. ಯಾವುದೇ ಟಾಸ್ಕ್ ಬಂದರೂ ಲೀಲಾಜಾಲವಾಗಿ ನಿಭಾಯಿಸಿದ್ದು, ಹಾಡು ಬರೆಯುವುದು, ಹಾಡುವುದು, ಡ್ಯಾನ್ಸ್ ಮಾಡುವುದು ಎಲ್ಲದಲ್ಲೂ ಗಿಲ್ಲಿ ತಮ್ಮ ಪ್ರತಿಭೆಯನ್ನು ತೋರಿಸಿದರು.





