ಬೆಂಗಳೂರು: ಕರುನಾಡಿನ ಮನೆಮಾತಾಗಿರುವ ಬಿಗ್ ಬಾಸ್ ಕನ್ನಡ ಸೀಜನ್–12 ಗ್ರಾಂಡ್ ಫಿನಾಲೆಗೆ ಕ್ಷಣಗಣನೆ ಆರಂಭವಾಗಿದ್ದು, ರಾಜ್ಯಾದ್ಯಂತ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಹಾಗೂ ಸಂಭ್ರಮ ಮನೆಮಾಡಿದೆ. ಅಂತಿಮ ಹಂತಕ್ಕೆ ತಲುಪಿರುವ ಆರು ಮಂದಿ ಸ್ಪರ್ಧಿಗಳಲ್ಲಿ ಈ ಬಾರಿ ಬಿಗ್ ಬಾಸ್ ಕಿರೀಟ ಯಾರ ಮುಡಿಗೇರಲಿದೆ ಎಂಬ ಪ್ರಶ್ನೆಗೆ ಇಂದೇ ಉತ್ತರ ಸಿಗಲಿದೆ.
ಗ್ರಾಂಡ್ ಫಿನಾಲೆ ನಡೆಯುತ್ತಿರುವ ಜಾಲಿವುಡ್ ಸ್ಟುಡಿಯೋ ಸುತ್ತಮುತ್ತ ಇಂದು ಬೆಳಗ್ಗೆಯಿಂದಲೇ ಜನಸಾಗರ ಹರಿದು ಬರುತ್ತಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ. ಸ್ಟುಡಿಯೋ ಸುತ್ತಲೂ ಬ್ಯಾರಿಕೇಡ್‌ಗಳನ್ನು ಅಳವಡಿಸಿ, ಪ್ರವೇಶಕ್ಕೆ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಲಾಗಿದೆ. ಹೆಚ್ಚುವರಿ ಪೊಲೀಸ್ ಪಡೆ ನಿಯೋಜನೆ ಮಾಡಲಾಗಿದ್ದು, ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಭದ್ರತಾ ವ್ಯವಸ್ಥೆ ಪರಿಶೀಲನೆ ನಡೆಸಿದ್ದಾರೆ.
ಇನ್ನೊಂದೆಡೆ, ತಮ್ಮ ನೆಚ್ಚಿನ ಸ್ಪರ್ಧಿಗಳ ಗೆಲುವಿಗಾಗಿ ಅಭಿಮಾನಿಗಳು ಭರ್ಜರಿ ಸಿದ್ಧತೆ ಮಾಡಿಕೊಂಡಿದ್ದಾರೆ. ಜಾಲಿವುಡ್ ಸ್ಟುಡಿಯೋ ಹೊರಭಾಗದಲ್ಲಿ ಸ್ಪರ್ಧಿಗಳ ಬೃಹತ್ ಕಟೌಟ್‌ಗಳು, ಬ್ಯಾನರ್‌ಗಳು, ಫ್ಲೆಕ್ಸ್‌ಗಳು ರಾರಾಜಿಸುತ್ತಿದ್ದು, ಕೈಯಲ್ಲಿ ಫೋಟೋಗಳನ್ನು ಹಿಡಿದು ಅಭಿಮಾನಿಗಳು ಜಯಘೋಷಗಳನ್ನು ಕೂಗುತ್ತಿದ್ದಾರೆ. ಕೆಲವರು ಪಟಾಕಿ ಸಿಡಿಸಿ ಸಂಭ್ರಮ ವ್ಯಕ್ತಪಡಿಸಿದ್ದಾರೆ..
ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ಉಳಿದಿರುವ ಕೊನೆಯ ಆರು ಸ್ಪರ್ಧಿಗಳಾದ ಗಿಲ್ಲಿ, ಅಶ್ವಿನಿ ಗೌಡ, ಧನುಷ್, ರಘು, ಕಾವ್ಯಾ ಮತ್ತು ರಕ್ಷಿತಾ ಶೆಟ್ಟಿ ಇವರಲ್ಲಿ ಯಾರಿಗೆ ಜನಮತ ಹೆಚ್ಚು ಸಿಕ್ಕಿದೆ ಎಂಬುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ವಿಶೇಷವಾಗಿ ಗಿಲ್ಲಿ ಮತ್ತು ಅಶ್ವಿನಿ ಗೌಡ ನಡುವೆ ಭಾರೀ ಪೈಪೋಟಿ ಇದೆ ಎಂಬ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಗಿಲ್ಲಿ ಗೆಲುವಿಗಾಗಿ ಕರುನಾಡಿನ ವಿವಿಧ ಭಾಗಗಳಲ್ಲಿ ಅಭಿಮಾನಿಗಳು ದೇವಾಲಯಗಳಲ್ಲಿ ವಿಶೇಷ ಪೂಜೆ, ಪ್ರಾರ್ಥನೆಗಳಲ್ಲಿ ತೊಡಗಿದ್ದಾರೆ. ಬೆಂಗಳೂರಿನ ಅಣ್ಣಮ್ಮ ದೇವಸ್ಥಾನದಲ್ಲಿ ಗಿಲ್ಲಿ ಅಭಿಮಾನಿಗಳು ಹೋಮ-ಹವನ, ಆರತಿ ಸಲ್ಲಿಸಿ ಜಯಕ್ಕಾಗಿ ಹರಕೆ ಮಾಡಿಕೊಂಡಿದ್ದಾರೆ. ಅದೇ ರೀತಿ ಅಶ್ವಿನಿ ಗೌಡ ಅಭಿಮಾನಿಗಳು ಹಾಗೂ ರಕ್ಷಣಾ ವೇದಿಕೆಯ ಕೆಲ ಕಾರ್ಯಕರ್ತರು ದೇವರಿಗೆ ವಿಶೇಷ ಪೂಜೆ ಸಲ್ಲಿಸಿ, ಅಶ್ವಿನಿ ಗೌಡ ವಿನ್ನರ್ ಆಗಲಿ ಎಂದು ಪ್ರಾರ್ಥಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲೂ ಬಿಗ್ ಬಾಸ್ ಫಿನಾಲೆ ಕುರಿತ ಚರ್ಚೆಗಳು ಜೋರಾಗಿದ್ದು, #BiggBoss12Finale, #GillieForWinner, #AshwiniGowda ಹ್ಯಾಶ್‌ಟ್ಯಾಗ್‌ಗಳು ಟ್ರೆಂಡ್ ಆಗುತ್ತಿವೆ. ಪ್ರತಿ ಸ್ಪರ್ಧಿಯ ಅಭಿಮಾನಿಗಳು ತಮ್ಮ ಫೇವರಿಟ್‌ಗಾಗಿ ಪೋಸ್ಟ್‌ಗಳು, ವೀಡಿಯೊಗಳು ಮತ್ತು ರೀಲ್ಸ್‌ಗಳನ್ನು ಹಂಚಿಕೊಳ್ಳುವ ಮೂಲಕ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ.
ಇನ್ನು ಗ್ರಾಂಡ್ ಫಿನಾಲೆ ಕಾರ್ಯಕ್ರಮದಲ್ಲಿ ಮನರಂಜನೆಯ ಜೊತೆಗೆ ಭರ್ಜರಿ ಪ್ರದರ್ಶನಗಳು, ವಿಶೇಷ ಅತಿಥಿಗಳ ಆಗಮನ ಮತ್ತು ಭಾವನಾತ್ಮಕ ಕ್ಷಣಗಳು ಇರಲಿವೆ ಎಂಬ ನಿರೀಕ್ಷೆ ಮೂಡಿದೆ. ಅಂತಿಮ ಕ್ಷಣದಲ್ಲಿ ಯಾರು ಗೆಲುವಿನ ಕಿರೀಟ ಧರಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.





