68 ವರ್ಷದ ಮುನುಕುಟ್ಲ ಶ್ರೀನಿವಾಸ್ ಚಕ್ರವರ್ತಿಯವರು ತಮ್ಮ ಜೀವನದ ಸ್ಫೂರ್ತಿದಾಯಕ ಕತೆಯಿಂದ ನಮ್ಮೆಲ್ಲರಿಗೂ ಒಂದು ಮಾದರಿಯಾಗಿದ್ದಾರೆ. 16 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಜಮ್ಮು-ಕಾಶ್ಮೀರದ ಪಾಕಿಸ್ತಾನ ಗಡಿಯಲ್ಲಿ ದೇಶಸೇವೆ ಸಲ್ಲಿಸಿದ ಈ ಹಿರಿಜೀವ, ಇಂದು ತಮ್ಮ ಇಳಿವಯಸ್ಸಿನಲ್ಲೂ ದಿನಕ್ಕೆ 12 ಗಂಟೆಗಳ ಕಾಲ ಖುಷಿಯಿಂದ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದಾರೆ. ಇವರ ಜೀವನೋತ್ಸಾಹ, ಕಾಯಕದ ಮೇಲಿನ ನಿಷ್ಠೆ ಮತ್ತು ಹಂಗಿಲ್ಲದ ಬದುಕು ನಿಜಕ್ಕೂ ಒಂದು ಸ್ಫೂರ್ತಿಯ ಕತೆಯಾಗಿದೆ.
ಆರಂಭಿಕ ಜೀವನ ಮತ್ತು ಶಿಕ್ಷಣ
ಆಂಧ್ರಪ್ರದೇಶದ ಈಸ್ಟ್ ಗೋದಾವರಿಯ ಕಾಕಿನಾಡದಲ್ಲಿ 1958ರ ಆಗಸ್ಟ್ 13ರಂದು ಜನಿಸಿದ ಚಕ್ರವರ್ತಿಯವರ ತಂದೆ ಕೃಷ್ಣ ಮೋಹನ್ ಸೇನ್ ಡೆಪ್ಯೂಟಿ ಕಲೆಕ್ಟರ್ ಆಗಿದ್ದರು, ತಾಯಿ ಪದ್ಮಿನಿ ಸೇನ್ ರೂರಲ್ ಡೆವಲಪ್‌ಮೆಂಟ್ ಆಫೀಸರ್ ಆಗಿ ಸೇವೆ ಸಲ್ಲಿಸಿದ್ದರು. ಸುಶಿಕ್ಷಿತ ಕುಟುಂಬದಲ್ಲಿ ಬೆಳೆದ ಚಕ್ರವರ್ತಿಯವರು ಕಾಕಿನಾಡದ ಜವಹಾರ್ಲಾಲ್ ನೆಹರೂ ಟೆಕ್ನಾಲಜಿ ಯೂನಿವರ್ಸಿಟಿಯಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿಯನ್ನೂ, ಆಂಧ್ರ ಯೂನಿವರ್ಸಿಟಿಯಿಂದ ಬಿ.ಕಾಂ ಪದವಿಯನ್ನೂ ಪಡೆದರು. ಶಿಕ್ಷಣದ ನಂತರ ದುಬೈನ ನ್ಯಾಷನಲ್ ಸಿಮೆಂಟ್ ಕಂಪನಿಯಲ್ಲಿ ಒಂದೂವರೆ ವರ್ಷಗಳ ಕಾಲ ಅಪ್ರೆಂಟಿಶಿಪ್ ಕೆಲಸ ಮಾಡಿದರು.
ಸೇನಾ ಸೇವೆ
1983ರಲ್ಲಿ ದೇಶಸೇವೆಯ ಆಕಾಂಕ್ಷೆಯಿಂದ ಭಾರತೀಯ ಸೇನೆಗೆ ಸೇರಿದ ಚಕ್ರವರ್ತಿಯವರು, 1999ರವರೆಗೆ 16 ವರ್ಷಗಳ ಕಾಲ EMI (ಎಲೆಕ್ಟ್ರಾನಿಕ್ ಮತ್ತು ಮೆಕ್ಯಾನಿಕಲ್ ಇಂಜಿನಿಯರಿಂಗ್) ವಿಭಾಗದಲ್ಲಿ ಸೇವೆ ಸಲ್ಲಿಸಿದರು. ಆಟೋಮೋಷನ್ ಮೆಕ್ಯಾನಿಕಲ್ ಇಂಜಿನಿಯರ್ ಆಗಿ, ಗಡಿಯಲ್ಲಿ ಸೈನಿಕರು ಬಳಸುವ ಗನ್ಸ್, ಪಿಸ್ತೂಲ್ ಗಳು ಕೆಟ್ಟಾಗ, ಅವುಗಳನ್ನ ಸರ್ವೀಸ್ ಮಾಡಿ, ಮತ್ತೆ ಬಳಕೆಗೆ ಯೋಗ್ಯವಾಗುವಂತೆ ಸಿದ್ದಗೊಳಿಸಿ, ಕ್ವಾಲಿಟಿ ಚೆಕ್ ಮಾಡಿ ಕೊಡುವ ಕಾರ್ಯ ಅದಾಗಿರುತ್ತೆ. ಆರಂಭದ ಆರು ತಿಂಗಳು ನೇಪಾಳದಲ್ಲಿ ಕಳೆದರೂ, ಉಳಿದ 15.5 ವರ್ಷಗಳ ಸೇವೆಯನ್ನು ಜಮ್ಮು-ಕಾಶ್ಮೀರದ ಪಾಕಿಸ್ತಾನ ಗಡಿಯಲ್ಲಿ ಕಳೆದರು.
ದುಬೈನಲ್ಲಿದ್ದಾಗಲೇ ಸೋದರತ್ತೆಯ ಮಗಳಾದ ರೇಣುಕಾ ಅವರನ್ನು ಮದುವೆಯಾದ ಚಕ್ರವರ್ತಿ ಯವರು, ಆಕೆಯ ಶಿಕ್ಷಣಕ್ಕೂ ಬೆಂಬಲವಾಗಿ ನಿಂತರು. ರೇಣುಕಾ ಅವರು ಪಬ್ಲಿಕ್ ಅಡ್ಮಿನಿಸ್ಟ್ರೇಷನ್‌ನಲ್ಲಿ ಎಂ.ಎ, ಎಂ.ಇಡಿ ಮತ್ತು ಚಿಲ್ಡ್ರನ್ ಎಜುಕೇಷನ್‌ನಲ್ಲಿ ಡಿಪ್ಲೊಮಾ ಪಡೆದರು. ಡೆಲ್ಲಿಯ ಆರ್.ಕೆ. ಪಬ್ಲಿಕ್ ಸ್ಕೂಲ್‌ನಲ್ಲಿ ಶಿಕ್ಷಕಿಯಾಗಿ ವೃತ್ತಿ ಆರಂಭಿಸಿದ ರೇಣುಕಾ, ಥೈರಾಯ್ಡ್ ಸಮಸ್ಯೆಯಿಂದ ಬಳಲುತ್ತಿದ್ದಾಗ ಚಿಕಿತ್ಸೆ ಫಲಕಾರಿಯಾಗದೆ ತೀರಿಕೊಂಡರು. ಈ ದುಃಖದ ನಂತರವೂ ಚಕ್ರವರ್ತಿಯವರು ತಮ್ಮ ಇಬ್ಬರು ಹೆಣ್ಣು ಮಕ್ಕಳಾದ ಕೀರ್ತಿ ಸೇನ್ ಮತ್ತು ಕಾವ್ಯ ಸ್ಪಂದನ ಅವರನ್ನು ರಷ್ಯಾದ ವೋಲ್ಗೋಗ್ರಾಡ್ ಯೂನಿವರ್ಸಿಟಿಯಲ್ಲಿ ಎಂಬಿಬಿಎಸ್ ಮಾಡಿಸಿದರು. ಇಬ್ಬರೂ ಲಂಡನ್‌ನ ಕ್ವೀನ್ಸ್ ಆಸ್ಪತ್ರೆಯಲ್ಲಿ ಗೈನಕಾಲಜಿಸ್ಟ್ ಮತ್ತು ಪೀಡಿಯಾಟ್ರಿಷಿಯನ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೀರ್ತಿ ಒಬ್ಬ ವೈದ್ಯರನ್ನು ಮದುವೆಯಾಗಿ ಇಬ್ಬರು ಮಕ್ಕಳ ತಾಯಿಯಾದರೆ, ಕಾವ್ಯ ಒಬ್ಬ ಇಂಜಿನಿಯರ್‌ನನ್ನು ಮದುವೆಯಾಗಿ ಒಂದು ಮಗುವಿನ ತಾಯಿಯಾಗಿದ್ದಾರೆ. ಇಬ್ಬರೂ ಯುಕೆ ಪೌರತ್ವ ಪಡೆದು ಲಂಡನ್‌ನಲ್ಲಿ ನೆಲೆಸಿದ್ದಾರೆ.
ಸೇನೆಯಿಂದ ನಿವೃತ್ತಿಯ ನಂತರ ಚಕ್ರವರ್ತಿಯವರು ಡೆಲ್ಲಿಯ ಎಲ್ & ಟಿ ಕಂಪನಿಯ ಕೃಷಿ ವಿಭಾಗದಲ್ಲಿ ಮಾರ್ಕೆಟಿಂಗ್ ಮ್ಯಾನೇಜರ್ ಆಗಿ 15 ವರ್ಷಗಳ ಕಾಲ ಭಾರತದಾದ್ಯಂತ ಸಂಚರಿಸಿದರು. ಈ ಅವಧಿಯಲ್ಲಿ ಅವರ ಮಕ್ಕಳು ಪೂನಾದಲ್ಲಿ ಹೌಸ್ ಸರ್ಜನ್‌ಗಳಾಗಿ ಕೆಲಸ ಮಾಡಿ, ಲಂಡನ್‌ನಲ್ಲಿ ವೈದ್ಯಕೀಯ ವಿಶೇಷತೆಗಳನ್ನು ಪಡೆದರು. ಚಕ್ರವರ್ತಿಯವರ ಅಕ್ಕ ಶಾರದಾ ಲಕ್ಷ್ಮೀ ಬೆಂಗಳೂರಿನ ಒಂದು ಪ್ರತಿಷ್ಠಿತ ಶಾಲೆಯ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.
ಕಾಕಿನಾಡದಲ್ಲಿ ಒಂದು ಮನೆ, ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಸ್ವಂತ ಮನೆಯಿದ್ದರೂ, ಚಕ್ರವರ್ತಿಯವರು ತಮ್ಮ ಬೆಂಗಳೂರಿನ ಮನೆಯನ್ನು ಅಕ್ಕನಿಗೆ ಬಿಟ್ಟುಕೊಟ್ಟಿದ್ದಾರೆ. ಲಂಡನ್‌ನಲ್ಲಿರುವ ಮಕ್ಕಳು, ಅಳಿಯಂದಿರು ಮತ್ತು ಮೊಮ್ಮಕ್ಕಳು ಐದು ವರ್ಷಕ್ಕೊಮ್ಮೆ ಭಾರತಕ್ಕೆ ಬಂದು ಮೂರು ತಿಂಗಳ ಕಾಲ ಕಾಕಿನಾಡ, ಬೆಂಗಳೂರು, ತಿರುಪತಿ, ಶಿರಡಿ, ಕೇದರನಾಥ, ಧರ್ಮಸ್ಥಳದಂತಹ ಯಾತ್ರಾ ಸ್ಥಳಗಳಿಗೆ ಭೇಟಿ ನೀಡುತ್ತಾರೆ. ಚಕ್ರವರ್ತಿಯವರು ಮಲ್ಲೇಶ್ವರಂನಲ್ಲಿ ತನ್ನ ಆತ್ಮೀಯ ಗೆಳೆಯನೊಬ್ಬನ ಬಂಗಲೆಯಲ್ಲಿ ಉಳಿದುಕೊಂಡಿದ್ದಾರೆ. ಕಳೆದ ಒಂದೂವರೆ ವರ್ಷಗಳಿಂದ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿರುವ ಇವರು, ತಮ್ಮ ಬ್ಯಾಂಕ್ ಬ್ಯಾಲೆನ್ಸ್‌ನಿಂದ ಬರುವ ಬಡ್ಡಿಯಿಂದ ಆರಾಮವಾಗಿ ಜೀವನ ನಡೆಸಬಹುದಾದರೂ, ಕೈಕಟ್ಟಿ ಕೂರದೆ ದಿನಕ್ಕೆ 12 ಗಂಟೆ ಕೆಲಸ ಮಾಡುತ್ತಿದ್ದಾರೆ. ತಿಂಗಳಪೂರ ದುಡಿದರೂ 15 ಸಾವಿರ ಸಂಬಳ. ತನಗೆ ಸಂಬಳಕ್ಕಿಂತ ಹೆಚ್ಚಾಗಿ ಕೈ ಕಾಲು ಗಟ್ಟಿ ಇರೋ ತನಕ ಕೈಕಟ್ಟಿ ಕೂರಬಾರದು ಅನ್ನೋ ಮನೋಭಾವ ಇದೆಯಲ್ಲ ಅದು ನಿಜಕ್ಕೂ ಗ್ರೇಟ್ ಅನಿಸಿದೆ.
“ಕಾಯಕವೇ ಕೈಲಾಸ” ಎಂಬ ಗಾದೆಯನ್ನು ಚಕ್ರವರ್ತಿಯವರಂತಹ ಕಾಯಕಜೀವಗಳು ಇಂದಿಗೂ ಜೀವಂತವಾಗಿರಿಸಿವೆ. ಶಿಕ್ಷಣ, ಸಂಪತ್ತು, ಕುಟುಂಬದ ಯಶಸ್ಸು ಎಲ್ಲವನ್ನೂ ಹೊಂದಿದ್ದರೂ, ತಮ್ಮ ಇಳಿವಯಸ್ಸಿನಲ್ಲಿ ಕೈಕಟ್ಟಿ ಕೂರದೆ ಕೆಲಸದಲ್ಲಿ ತೊಡಗಿರುವ ಚಕ್ರವರ್ತಿಯವರು ಎಲ್ಲರಿಗೂ ಸ್ಫೂರ್ತಿಯಾಗಿದ್ದಾರೆ. ಇಂದು ವಿಶ್ವ ಕಾರ್ಮಿಕರ ದಿನದಂದು, ಇಂತಹ ಅಪರೂಪದ ವ್ಯಕ್ತಿತ್ವಕ್ಕೆ ಒಂದು “ಹ್ಯಾಟ್ಸ್ ಆಫ್” ಹೇಳಲೇಬೇಕು.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್